ನಾಗೇಶ ಮೈಸೂರು
ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಐಟಿ ಜಗದಲ್ಲಿ ವೃತ್ತಿ ಹಿಡಿದರೂ , ಬರೆಯಬೇಕೆಂಬ ಗೀಳನ್ನು ಪ್ರವೃತ್ತಿಯಾಗಿಸಿಕೊಂಡವರು ನಾಗೇಶ ಮೈಸೂರು. ಅದರ ಮೊದಲ ವೇದಿಕೆಯಾಗಿ ಹೊರಹೊಮ್ಮಿದ ಬ್ಲಾಗ್ ‘ಮನದಿಂಗಿತಗಳ ಸ್ವಗತ‘. ತದನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಕಥೆ, ಕವನ, ಕಾದಂಬರಿ, ಪ್ರಬಂಧ, ಲಘುಹರಟೆ, ಪ್ರಹಸನ ಇತ್ಯಾದಿಗಳ ಮೂಲಕ ತಮ್ಮದೇ ಆದ ಕಿರು ಅಭಿಮಾನಿ ಕೆಳೆ ಬಳಗವನ್ನು ಸೃಷ್ಟಿಸಿಕೊಂಡವರು.
ಇಂದಿನ ಹಲವಾರು ಬರಹಗಾರರಂತೆ, ಹಲವಾರು ಸಾಹಿತ್ಯಿಕ ಗುಂಪುಗಳಲ್ಲಿ ಸಕ್ರಿಯವಾಗಿರುವ ನಾಗೇಶ ಮೈಸೂರು, ‘ಮನದಿಂಗಿತಗಳ ಸ್ವಗತಗಳು‘ ಮತ್ತು ‘ಅರ್ಧರಾತ್ರಿ ಆಲಾಪಗಳು‘ ಎಂಬ ಎರಡು ಅವಳಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಸಮಾನ ಮನಸ್ಕ ಗೆಳೆಯರ ಜೊತೆಗೂಡಿ, ‘ನಾವು - ನಮ್ಮವರು: ಭಾಗ ೧ ಮತ್ತು ಭಾಗ ೨’ ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಹಾಸ್ಯ ಪ್ರಹಸನಗಳ ಸಂಗ್ರಹವಾದ ‘ಗುಬ್ಬಣ್ಣನ ದಶಾವತಾರಗಳು‘ ಮತ್ತು ‘ಲಘು ಪ್ರಹಸನಗಳು, ಪ್ರಬಂಧ ಲೇಖನಗಳು ಮತ್ತು ವಿಡಂಬನೆಗಳು’ ಇವರ ಪ್ರಕಟವಾಗಿರುವ ಮತ್ತೆರಡು ಪುಸ್ತಕಗಳು.
ಸದ್ಯಕ್ಕೆ ಸಿಂಗಪುರದಲ್ಲಿ ವಾಸವಾಗಿರುವ ನಾಗೇಶ ಮೈಸೂರು, ಸಾಮಾಜಿಕ ಮಾಧ್ಯಮದ ಮೂಲಕ ನಿರಂತರ ಕಾವ್ಯ ಧಾರೆಯನ್ನು ಹರಿಸುತ್ತ, ತಮ್ಮ ಕಿರು ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ.