ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಳಿಯುವುದು ನಿರರ್ಥಕ ಸ್ವಪ್ನವೊಂದೇ

ಭರತ್ ಕುತ್ತೆತ್ತೂರು
ಇತ್ತೀಚಿನ ಬರಹಗಳು: ಭರತ್ ಕುತ್ತೆತ್ತೂರು (ಎಲ್ಲವನ್ನು ಓದಿ)

ಕಳೆದುಹೋದ ಕ್ಷಣಗಳೆಡೆಗೆ
ಅದೇನೋ ಸೆಳೆತ
ಮತ್ತದೆಲ್ಲ ಮರುಕಳಿಸದೆಂಬ
ಅರಿವಿದ್ದರೂ
ಅದರೆಡೆಗೆ ಜಾರುತ್ತೇನೆ

ಆಗೆಲ್ಲಾ ನೀನು
ನನ್ನ ಜೊತೆಗಿರುವಂತೆ ಅನಿಸುತ್ತದೆ
ಏನೂ ಮಾತನಾಡದೆ ನಿಂತಂತೆ
ಕಣ್ಮುಚ್ಚಿ ಎದೆಗೊರಗಿದಂತೆ
ಮೊದಲಿನಷ್ಟೇ ಸವಿಯಾಗಿ
ನಕ್ಕಂತೆ

ಆ ಘಳಿಗೆ
ಘಟಿಸಿದ್ದೆಲ್ಲವೂ ಮರುಕಳಿಸುತ್ತದೆ
ಕಲ್ಪನೆಗೆ ರೆಕ್ಕೆ ಬಂದು
ಇನ್ನೂ ಏನೇನೋ
ಕೂಡಿಕೊಳ್ಳುತ್ತದೆ

ಇನ್ನೊಂದು ಕ್ಷಣವೂ
ನೀ ದೂರಾಗದಂತೆ
ಇನ್ನೇನು ನಿನ್ನ
ತಬ್ಬಿಕೊಳ್ಳಬೇಕೆಂದಾಗ
ನಿನ್ನೊಡನೆ
ಆ ಘಳಿಗೆಯೂ
ಕರಗಿಬಿಡುತ್ತದೆ
ಉಳಿಯುವುದು
ನಿರರ್ಥಕ ಸ್ವಪ್ನವೊಂದೇ