- ಟಿಬೆಟಿಯನ್ ಕ್ಯಾಂಪಿಗೆ ಭೇಟಿ - ಏಪ್ರಿಲ್ 30, 2023
- ಥಿಯರಿ ಆಫ್ ರಿಲೇಟಿವಿಟಿ - ಅಕ್ಟೋಬರ್ 13, 2022
- ಎರಡು ಕವಿತೆಗಳು - ಆಗಸ್ಟ್ 3, 2021
೧. ನನ್ನ ಶಾಲೆ
ಸರಕಾರೀ ಗೋಡೌನಿನ ಪಕ್ಕದ ಕೋಣೆ
ಸಿಮೆಂಟ್ ಶೀಟಿನ ಸೂರು, ತಗಡಿನ ಬಾಗಿಲು
ಶಾಪಗ್ರಸ್ತ ದೇವತೆಗಳಂತೆ ಕಾಣುವ
ಸರಕಾರೀ ದಿನಗೂಲಿ ಶಿಕ್ಷಕರು
ಡೆಸ್ಕು-ಬೆಂಚುಗಳಿಲ್ಲ, ನೆಲವೇ ಎಲ್ಲ
ಯೂನಿಫಾರ್ಮಿಲ್ಲ , ಶೂ-ಟೈಗಳಲ್ಲಿಲ್ಲ
ಸುತ್ತಲೂ ಕಣ್ಣು ಹಾಯಿಸಿದರೆ
ಎಣ್ಣೆ ಕಾಣದ ಕೂದಲು
ಬಟನ್ ಜಾಗದಲ್ಲಿ ಪಿನ್ನು
ಸದಾ ಮೂಗೊರೆಸುವ ಒಂದು ಕೈ
ಇವರೇ ನನ್ನ ಸಹಪಾಠಿಗಳು
ಸರಕಾರೀ ನೌಕರರ ಮಕ್ಕಳ ಮೆದು ಭಾಷೆ
ಹಳ್ಳಿಯ ರೈತರ ಮಕ್ಕಳ ಗ್ರಾಮೀಣ ಭಾಷೆ
ಸ್ನೇಹ-ಮುಗ್ಧತೆಯ ಚೌಕಟ್ಟಿನಲ್ಲಿ ಎಲ್ಲವೂ ಬಂಧಿ
ಬಾಯಾರಿಕೆಗೆ ಮೂಲೆಯಲ್ಲಿರುವ ಮಣ್ಣಿನ ಮಡಿಕೆ
ಆಟಕ್ಕೆ ಚಿನ್ನಿ -ದಾಂಡು, ಮರಕೋತಿಯಾಟ, ಕುಂಟಲಿಪ್ಪಿ
ಚಾಕಲೇಟ್, ಕೇಕ್, ಐಸ್ ಕ್ರೀಮ್ ಗೊತ್ತೇ ಇಲ್ಲ
ಶೇಂಗಾ, ಬೆಲ್ಲ, ನೆಲ್ಲಿಕಾಯಿ ಇನ್ನೂ ಮರೆತಿಲ್ಲ.
ಆದರೂ ಕಲಿಕೆಗೆ ಬರವಿಲ್ಲ, ಗೆಳೆತನಕ್ಕೆ ಎಣೆಯೇ ಇಲ್ಲ
ಗೆಳೆಯ ಫಾರ್ವರ್ಡ್ ಮಾಡಿದ ಫೋಟೋದಲ್ಲಿ ಕಂಡವು
ವಿಚಿತ್ರ ಆದರೂ ಸತ್ಯ ಎನಿಸುವ ಆ ದಿನಗಳು
***
೨.ಬಂಡೆಯ ಸ್ವಗತ
ಚೆಲುವೆ, ಏನೆಂದು ಬಣ್ಣಿಸಲಿ ನಿನ್ನ?
ನನ್ನ ಮಡದಿಯಾಗಿ ಬಂದೆ, ಮನದೊಳಗೆ ಇಳಿದೆ
ಕಷ್ಟ-ಸುಖಗಳಲ್ಲಿ ಕೈನೀಡಿ ನನ್ನ ಊರುಗೋಲಾಗಿ ನಿಂತೆ
ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಜಾಣೆಯಾದೆ
ನನ್ನಿಷ್ಟವನ್ನೇ ನಿನ್ನಿಷ್ಟವಾಗಿಸಿಕೊಂಡೆ
ಕರುಳಿನ ಕುಡಿಯ ತುಂಟಾಟಗಳಿಗೆ ಸಾಕ್ಷಿಯಾಗಿ ನಿಂತೆ
ದುಃಖವು ನಿನ್ನೆದೆಯನ್ನು ಮೀಟಿದಾಗ ಕಂಪಿತಳಾಗಿ ನೀ ಬಂದೆ
ಆದರೆ ನಾನೋ ಒಂದು ದೊಡ್ಡ ಕಲ್ಲು ಬಂಡೆ!
ಆದರೂ ಸಾವರಿಸಿಕೊಂಡು ನೀ ಮುನ್ನಡೆದೆ
ಮೆಚ್ಚಿ ಹೊಗಳಲು ಈ ಗಂಟಲಿಗೆ ಯಾಕೆ ಪರದೆ?
ಪೊರೆ ಸರಿಸಿ ನೋಡಬೇಕು, ನಾನಿನ್ನೂ ಮಾಗಬೇಕು
ಚೆಲುವೆ, ಏನೆಂದು ಬಣ್ಣಿಸಲಿ ನಿನ್ನ?
***
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ