- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
“ಟ್ರೂತ್ ಜೆಂಡರ್ ಫಾದರ್ ಕೇಮ್ ಟು ಡೋರ್ ಫೋರ್ಟ್” ಎಂದರೆ ಏನು ಎಂದು ನಮ್ಮನ್ನು ಕೇಳಿದರೆ ನೀವು ಅಷ್ಟು ಬೇಗ ಹೇಳಲಾರಿರಿ. ಯಾಕೆಂದರೆ ಈ ತರ್ಜುಮೆ ನಮ್ಮ ಊಹೆಗೆ ನಿಲುಕುವುದಿಲ್ಲ. ಇಂಥ ಅನುವಾದದ ಸರಳಿ ಇರಬಹುದೆಂದು ಸಹ ನಮಗೆ ಗೊತ್ತಾಗುವುದಿಲ್ಲ. ನಿಜಕ್ಕೆ ಈ ಥರದ ಪ್ರಕ್ರಿಯೆ ಕನ್ನಡ ಸಾಹಿತ್ಯದಲ್ಲಿ ಇಲ್ಲ. ಇದೊಂದು ಅಪಭ್ರಂಶ ಪ್ರಕ್ರಿಯೆ. ಇದರ ಅರ್ಥ “ ನಿಜಲಿಂಗಪ್ಪನವರು ಬಾಗಲಕೋಟೆಗೆ ಬಂದರು” ಎಂದು. ವ್ಯಾಕರಣ ಸೂತ್ರಗಳನ್ನು ಹಿಡಿದು ಹೋದರೆ ಇದೊಂದು ಮಹಾ ತಪ್ಪೇ ಎನಿಸಬಹುದು. ಆದರೆ ಭಾಷೆಯ ಬಳಕೆಯಲ್ಲಿ ಹೊಸ ಹೊಸ ಪ್ರಯೋಗಗಳು ಬರುತ್ತಿರುವಾಗ ಇದೇಕೆ ಆಗಬಾರದು ಎಂದು ನಮಗೆ ಅನಿಸುವುದಿಲ್ಲವೇ? ಇದರಲ್ಲಿರುವ ತಪ್ಪಾದರೂ ಏನು? ವಾಕ್ಯದಲ್ಲಿಯ ಎಲ್ಲ ಕನ್ನಡ ಪದಗಳನ್ನೂ ಆಂಗ್ಲೀಕರಿಸಲಾಗಿದೆ ಅಷ್ಟೇ.
ಈ ತರದ್ದವು ಇನ್ನೂ ಕೆಲವಿವೆ. ನಾವು ಹಲವು ಕಡೆ ಕೇಳಿರುವಂಥ ವಾಕ್ಯ “ ನಾನು ಅವನು ಮಾತಾಡುವಾಗ ನೀನೇನು ಮಧ್ಯದಲ್ಲಿ ಮಾತಾಡುವುದು ?” ಎನ್ನುವುದಕ್ಕೆ “ ಐ ಟಾಕ್ ಹಿ ಟಾಕ್ ವೈ ಯು ಟಾಕ್ ಮಿಡ್ಲ್ ಮಿಡ್ಲ್ “ ಎನ್ನುವುದೊಂದು. ಮತ್ತೊಂದು ಇದೇ ರೀತಿಯದು “ ರಸ್ತೆಯ ಅಕ್ಕಪಕ್ಕಗಳಲ್ಲಿ ದೊಡ್ಡ ದೊಡ್ಡ ಗಿಡಗಳು ಬೆಳೆದಿವೆ “ ಎನ್ನುವ ವಾಕ್ಯ “ ಅಸೈಡ್ ಬಿಸೈಡ್ ದಿ ರೋಡ್ ಬಿಗ್ ಬಿಗ್ ಟ್ರೀಸ್ ಆರ್ ಗ್ರೋನ್ ಅಪ್” ಎನ್ನುವುದೂ ಈ ಸರಣಿಗೆ ಸೇರಿದವುಗಳೇ. ಈ ತರದ ನಗೆ ತರಿಸುವ ಪ್ರಯೋಗಗಳು ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡು ನಮಗೆ ಮನರಂಜನೆಯನ್ನು ಒದಗಿಸಿವೆ. ಯಾವುದೋ ಸಿನಿಮಾದಲ್ಲಿ ಹೀರೋ ಆಂಗ್ಲ ಗಾದೆಗಳನ್ನು ಭಾಷಾಂತರೀಕರಿಸುತ್ತಾನೆ. ಉದಾಹರಣೆಗೆ “ ಕಾಗೆ ಮರಿ ಕಾಗೆಗೆ ಮುದ್ದು “ ಎನ್ನುವುದನ್ನು “ ಕ್ರೋ ಬೇಬೀ ಕ್ರೋ ಪೆಟ್” ಎನ್ನುತ್ತಾನೆ. ಸಿನಿಮಾಗಳಲ್ಲಿಯ ನಾಯಕನ ಪ್ರಯೋಗಗಳನ್ನು ಅಂಧವಾಗಿ ಅನುಸರಿಸುವ ನಮ್ಮ ಯುವ ಜನಾಂಗಕ್ಕೆ ಇದೊಂದು ದಾರಿ ದೀಪವೆನಿಸುವುದಿಲ್ಲವೇ? ಬರೀ ಅರ್ಥವಾದರೆ ಸಾಕು, ವ್ಯಾಕರಣ ಹೇಗಿದ್ದರೇನು ಎನ್ನುವ ಟ್ರೆಂಡ್ ಬಹು ಬೇಗ ಹರಡಿಕೊಳ್ಳುತ್ತಿದೆ. ಹಿಂದಿಯ “ ಲಾಫ್ಟರ್ ಚಾಲೆಂಜ್” ನಲ್ಲಿ ಒಬ್ಬ ಹಾಸ್ಯಗಾರ ಹೇಳಿದ ಹಾಗೆ “ ಭಾಷಾ ಛೋಡೋ, ಭಾವನಾವೋಂಕೋ ಸಮಝೋ “ ಎಂಬುದನ್ನು ಅನುಸರಿಸುವ ಜಾಯಮಾನ ಹಾಕಿಕೊಳ್ಳುತ್ತಿದ್ದಾರೆ.
ಆದರೆ “ ಇಂಗ್ಲೀಷ್ ಈಸ್ ಅ ಫನ್ನೀ ಲ್ಯಾಗ್ವೇಂಜ್” ಎನ್ನುವುದನ್ನು ನೋಡಿದರೆ, ಈ ಪ್ರಯೋಗಳಲ್ಲಿಯ ದೋಷ ಅಷ್ಟೇನೂ ಸೀರಿಯಸ್ ಅನಿಸಲಿಕ್ಕಿಲ್ಲ. ಯಾಕೆ ಅಂತ ಕೇಳಿ. ಇದು ನಮ್ಮ ಮಾತೃಭಾಷೆ ಅಲ್ಲ. ನಮ್ಮ ಅನುಕೂಲಕ್ಕಾಗಿ ನಾವು ಕಲಿಯುತ್ತಿದ್ದೇವೆಯೇ ಹೊರತು ಅದರ ವರ್ಚಸ್ಸಿನ ಗೋಜಿಗೆ ಹೋಗಬೇಕಾಗಿಲ್ಲ. ಆಂಗ್ಲರು ನಮ್ಮನ್ನಾಳುವಾಗ ಅವರ ಮೇಲೆ ಅಥವಾ ಅವರ ಭಾಷೆಯ ಮೇಲಿನ ಮೋಜಿಗಾಗಿ ಅವರ ಆಡಳಿತ ಭಾಷೆಯನ್ನು ಆಳವಾಗಿ ಅಭ್ಯಸಿಸಿ, ಅದರ ಮೇಲೆ ಪ್ರಭುತ್ವ ಸಾಧಿಸಿದ ಕೆಲವರಿಗೆ ಮಾತ್ರ ಇಂಥ ಪ್ರಯೋಗಗಳು ಕಿರಿಕಿರಿಯೆನಿಸುತ್ತವೆ. ಆದರೆ ಅವರಿಗೆ ಮೊಸರಿನಲ್ಲಿ ಕಲ್ಲೆನಿಸುವುದು ಇಂಥವು ಮಾತ್ರವಲ್ಲ. ಅಂತರ್ಜಾಲದಲ್ಲಿಯ ಹ್ರಸ್ವ ಭಾಷೆ ಈಗ ಬಹು ಪ್ರಚಲಿತವಾಗಿದ್ದು ಅದರ ಪ್ರಯೋಗವಾದಾಗಲೆಲ್ಲ ಅವರು ಗೊಣಗುಟ್ಟುವುದು ಇದೆ.
ಮತ್ತೊಂದು ಮಾತು. ಆ ಭಾಷೆಗಿರುವ ಹಿರಿಮೆಯಾದರೂ ಏನು ? ಬರೆದ ಹಾಗೆ ಅನ್ನಲಿಕ್ಕಿಲ್ಲ, ಮಾತಾಡಿದ ಹಾಗೆ ಬರೆಯಲಿಕ್ಕಿಲ್ಲ. ’ಸೈಲೆಂಟ್’ ಎನ್ನುವ ನೆರಳು ಪ್ರತಿ ಪದಕ್ಕೂ ಹೊಂಚಿರುತ್ತದೆ. ಕೆಲವೆಡೆ ಮೊದಲ ಅಕ್ಷರ ನುಡಿಯಬಾರದಾದರೆ, ಮತ್ತೆಲ್ಲಿಯೋ ಮಧ್ಯದ್ದು ಅನ್ನಬಾರದು. debt ಡೆಟ್ ಆಗುತ್ತದೆ. ಆದರೆ debut ಡೆಬ್ಯೂ ಆಗುತ್ತದಾದರೆ coup ಕೂ ಅಂತ ಮಾತ್ರ ನುಡಿಯಬೇಕಂತೆ. ಹೀಗೆ ಪದ ಹುಟ್ಟುವಾಗಲೇ ಅದಕ್ಕೊಂದು ನಿಯಮ ಹುಟ್ಟಿಕೊಂಡಿರುವ ಭಾಷೆ ಅದು. ಇವೆಲ್ಲವುಗಳನ್ನ ನೆನಪಿನಲ್ಲಿಟ್ಟುಕೊಂಡು ಆಂಗ್ಲ ಭಾಷೆ ಮಾತನಾಡುತ್ತ, ನಮ್ಮ ಸರಕಾರಿ ವ್ಯವಹಾರಗಳಲ್ಲಿ ಅಳವಡಿಸಿಕೊಂಡು, ವ್ಯವಹಾರ ಮಾಡುತ್ತಿರುವ ಮತ್ತು ಅದರ ಸುಗಮ ಬಳಕೆಯಿಂದಲೇ ಅಂತರರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಮೆರೆಯುತ್ತಿರುವ ಭಾರತೀಯರಿಗೆ ಸದ್ರಿ ಪ್ರಯೋಗಗಳನ್ನು ಮಾಡುವ ಅಧಿಕಾರವಿಲ್ಲವೇ? ಖಂಡಿತಾ ಇದೆ. ನಾವು ಈ ಪ್ರಯೋಗಗಳಿಂದ ಭಾಷೆಯ ಸೊಬಗನ್ನು ಹೆಚ್ಚಿಸುತ್ತಿದ್ದೇವೆ. ಯಾವ ಭಾಷೆಯಾದರೂ ಅದನ್ನು ಮಾತಾಡುತ್ತಿರುವ ನೆಲದ ಮಾತುಗಳನ್ನು ಅಳವಡಿಸಿಕೊಳ್ಳದಿದ್ದರೆ ಮೃತಭಾಷೆಯಾಗುತ್ತದಂತೆ. ಹಾಗಾಗಿ ಇಲ್ಲಿಯ ಸೊಗಡನ್ನು ನಾವು ಇಂಗ್ಲೀಷಿಗೆ ತೊಡಗಿಸದಿದ್ದರೆ ಅದು ನಮ್ಮಲ್ಲಂತೂ ಕೆಲ ವರ್ಷಗಳಲ್ಲಿ “ಮೃತ” ಪಟ್ಟ ಪಡೆಯಬಹುದಲ್ಲವೇ ? ಹಾಗಾಗಿ ನಾವು ಮಾಡುತ್ತಿರುವುದು ಉಪಕಾರವೇ ಹೊರತು ಅಪಕಾರವಲ್ಲ ಎಂದು ನನ್ನ ಅನಿಸಿಕೆ.
ಅದೂ ಅಲ್ಲದೇ ಆ ಭಾಷೆಯನ್ನೇ ಮಾತಾಡುವ ಇತರೆ ದೇಶಗಳಲ್ಲಿ ಸಹ ಬರೆಯುವ ಅಥವಾ ಮಾತಾಡುವ ಕ್ರಮ ಒಂದೇ ಆಗಿ ಉಳಿದಿಲ್ಲ. ಅಮೆರಿಕನ್ನರು ತಮ್ಮದೇ ಆದ ಪರಿಭಾಷೆ ಹೊಂದಿದ್ದು ಭಾಷೆಯ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆಂದರೆ ಅಂತರ್ ರಾಷ್ಟ್ರೀಯ ಬಳಕೆಗಳಲ್ಲಿ ಆ ಪದಗಳೇ ಮಾನದಂಡಗಳಾಗಿವೆ ಮತ್ತು ಈ ಭಾಷೆಯ ಉಗಮ ಸ್ಥಾನದಲ್ಲೇ ಅದಕ್ಕೆ ಸವಾಲೆಸೆಯುತ್ತಿವೆ. ಹಾಗಾಗಿ ಈ ನಮ್ಮ ಪ್ರಯೋಗ ವಾಜಮಿ ತಾನೇ?
ನನ್ನ ದೋಸ್ತನೊಬ್ಬಈ ದಿಶೆಯಲ್ಲಿ ತನ್ನದೇ ಆದ ಇಂಥ ನಿಘಂಟು ತಯಾರಿಸಿಕೊಂಡಿದ್ದಾನೆ. ನಮಗಾರಿಗೂ ಅವನು ಮಾತಾಡುವುದು ಅಷ್ಟು ಬೇಗ ಅರ್ಥವಾಗುವುದಿಲ್ಲ. ಯಾಕೆ ಎಂದರೆ ಅವನ ಭಾಷೆ ಎಲ್ಲ ನಾನು ಲೇಖನದ ಮೊದಲಲ್ಲಿ ಕೊಟ್ಟ ಉದಾಹರಣೆಯ ಹಾಗೆ. ಅವನ ಪ್ರಕಾರ “ಶಿಲ್ಪಾ ಶೆಟ್ಟಿ” “ ಸ್ಟಾಚೂ ಶೆಟ್ಟಿ” ಯಾಗುತ್ತಾಳೆ. “ಮಹಿಮಾ ಚೌಧುರಿ” “ ಮಿರಕಿಲ್ ಚೌಧುರಿ” ಯಾಗುತ್ತಾಳೆ. “ನಮ್ರತ” “ಹ್ಯುಮಿಲಿಟಿ” ಎನಿಸಿಕೊಳ್ಳುತ್ತಾಳೆ. ಇನ್ನೂ ಅವನ ಪದಕೋಶ ದೊಡ್ಡದಿದೆ. ಹೇಳ್ತಾ ಹೋದರೆ ಪಟ್ಟಿ ತುಂಬಾ ಉದ್ದವಾಗುತ್ತದೆ. ಅವರ ಮನೆಯವರಿಗೆ ಅವನು ಹೇಳುವುದು ಅರ್ಥ ಮಾಡಿಕೊಳ್ಳಲು ಒಂದು ಕೋಷ್ಟಕ ಮಾಡಿಕೊಂಡಿದ್ದಾರೆ. ಯಾಕೆಂದರೆ ದಿನ ನಿತ್ಯ ಅವನು ಏನಾದರೊಂದು ಫಜೀತಿಗೀಡುಮಾಡುತ್ತಾನೆ. ಅವನ ಪರಿಭಾಷೆಯಲ್ಲಿ “ ರಾಜಗಿರಿ ಸೊಪ್ಪು” “ ಕಿಂಗ್ ಮೌಂಟೆನ್ ವೆಜಿಟೆಬಲ್” ಆಗುತ್ತದೆ,” ಹುರುಳೀ ಕಾಯಿ” “ ಹಾರ್ಸ್ ಗ್ರಾಂ ಕಾಯಿ” ಆಗುತ್ತದೆ. ಮಜಾ ಅನಿಸಲಿಲ್ಲವೇ?
ಮತ್ತೊಂದು ತೀರಾ ಸೋಜಿಗದ ಸಂಗತಿ. ಕೆಲವಾರು ಆಂಗ್ಲ ಪದಗಳು ನಮ್ಮ ದೇಶೀಯ ಭಾಷೆಯ ಪದಗಳಿಗೆ ತೀರಾ ಹತ್ತಿರವೆನಿಸುತ್ತವೆ. ಉದಾಹರಣೆಗೆ ಆಂಗ್ಲದ ಫಾದರ್, ಮದರ್, ಬ್ರದರ್ ಸಂಸ್ಕೃತದ ಪಿತೃ, ಮಾತೃ, ಭ್ರಾತೃ ಪದಗಳಿಗೆ ಹತ್ತಿರವೆನಿಸುತ್ತವೆ. ಹಾಗೇ ಹಿಂದಿಯ ಊಪರ್ ಗೂ ಆಂಗ್ಲದ ಅಪ್ಪರ್ ಗೂ ಹೋಲಿಕೆ ಇದೆ ಅನಿಸಲಿಲ್ಲವೇ? ನಮ್ಮ ಕನ್ನಡದ ಪದವೇ ತೆಗೆದುಕೊಳ್ಳಿ. ದಿರಿಸು ಎನ್ನುವ ಪದಕ್ಕೆ ಹತ್ತಿರವಾದ ಆಂಗ್ಲ ಅದ ಡ್ರೆಸ್ ಅಲ್ಲವೇ? ನನಗೆ ಮತ್ತೊಂದು ಹೊಳೆಯಿತು. ಮಲಯಾಳದಲ್ಲಿ ನೋಕ್ಕು ಎಂದರೆ ನೋಡು ಎಂದರ್ಥ. ಇಂಗ್ಲೀಷಿನ ಬೈನಾಕ್ಯುಲರ್ ಪದದಲ್ಲಿ ಬೈ ಎಂದರ್ ಎರಡು ಎಂದು ತಿಳಿದರೆ ಮತ್ತೊಂದು ಪದದ ಅರ್ಥ ನೋಡುವುದು ಎನ್ನಿಸುವುದಿಲ್ಲವೇ? ಎಷ್ಟು ಸಾಪತ್ಯ ನೋಡಿ.
ಅನೇಕ ಭಾಷೆಗಳ ತವರಾಗಿರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಕಾಣುವುದು ಸಹಜವೇ. ಅದೂ ಗಡಿ ಪ್ರದೇಶಗಳಲ್ಲಿಯಂತೂ ಎರಡೂ ಭಾಷೆಗಳ ಮಾತುಗಳು ಬೆರೆತು ಅಲ್ಲಿಯವರಿಗೆ ಮಾತ್ರ ಅರ್ಥವಾಗುವ ಮತ್ತೊಂದು ಪದವಾಗಿರುತ್ತದೆ. ಆ ಪದ ನಿಘಂಟುವಿನಲ್ಲಿ ಸಿಕ್ಕುವುದಿಲ್ಲ. ಪಕ್ಕಾ ಕನ್ನಡದವರಿಗೆ ಅಥವಾ ಆ ಇತರೆ ಭಾಷೆಯವರಿಗೆ ಅದರ ಅರ್ಥ ತಿಳಿಯುವುದಿಲ್ಲ. ಆದರೆ ಕಲಬೆರಿಕೆಯಿಂದ ಅಪಭ್ರಂಶವಾದರೂ ಅವರು ಆಡುವ ನುಡಿ ಕನ್ನಡವೇ. ಅವರೆಲ್ಲ ತಮ್ಮ ಮಾತೃಭಾಷೆ ಕನ್ನಡವೆಂದೇ ಹೇಳುತ್ತಾರೆ. ಅವರು ಮಾತಾಡುವ ಭಾಷೆಯಲ್ಲಿ ಕನ್ನಡದ ಪಾಲು ಕಮ್ಮಿಯಿದ್ದರೂ ಮೇಲೆ ಮಂಡಿಸಿದ ವಾದದಿಂದ ನಾವು ಮೂಲ ಭಾಷೆಯ ಸೊಬಗನ್ನು ಅವರು ಹೆಚ್ಚಿಸಿದ್ದಾರೆಂದೇ ಹೇಳಬಹುದಾಗಿದೆ.
ಒಂದು ಭಾಷೆ ಜೀವಂತವಾಗಿರ ಬೇಕಾದರೆ ಅದರಲ್ಲಿ ಬೇರೇ ಭಾಷೆಗಳ ಪದಗಳು ಸೇರುವುದು ಬೇಕೇಬೇಕು. ಪ್ರತಿ ವರ್ಷವೂ ಆಂಗ್ಲದ ಆಕ್ಸ್ ಫರ್ಡ್ ನಿಘಂಟು ಆಂಗ್ಲ ಭಾಷೆಯಲ್ಲಿ ಸೇರಿಸಿಕೊಂಡ ಇತರೆ ಭಾಷೆಗಳ ಪದಗಳನ್ನು ಸೇರಿಸಿ ಒಂದು ಪಟ್ಟಿಯನ್ನು ಹೊರಡಿಸುತ್ತದೆ. ನಮ್ಮ ಭಾರತೀಯ ಭಾಷೆಗಳಲ್ಲಿಯ ಘೀ, ಬ್ಯಾಂಡಿಕೂಟ್ ಮುಂತಾದ ಪದಗಳು ಸೇರಿವೆ. ಒಂದು ಭಾಷೆಯ ಪದಗಳನ್ನು ಇನ್ನೊಂದು ಭಾಷೆಯಲ್ಲಿ ಪ್ರಾಸಕ್ಕಾಗಿ ಉಪಯೋಗಿಸುವ ಪ್ರಯೋಗವು ನಡೆದಿದ್ದು, ಅದೂ ಸಹ ಸೊಬಗನ್ನು ಹೆಚ್ಚಿಸುವ ನಿಟ್ಟಿನಲ್ಲೇ ನಡೆದಿದೆ ಎಂದು ನನ್ನ ಅನಿಸಿಕೆ. ಚಲನ ಚಿತ್ರದ ಹಾಡುಗಳಲ್ಲಿ ಈ ತರದ ಪದ ಪ್ರಯೋಗಗಳು ಕಾಣಬಹುದು. ಇದರ ಸಮರ್ಥನೆಗಾಗಿ ಒಂದು ಪ್ರಯೋಗ ನಿಮ್ಮ ಮುಂದಿಡುತ್ತೇನೆ. ಹೆಸರಾಂತ ಹಾಸ್ಯ ಕವಿಯಾದ ಶ್ರೀ ಡುಂಡಿರಾಜ್ ಅವರ ಚಿಕ್ಕ ಕವನ ಓದಿದ್ದು ನೆನಪಾಗುತ್ತದೆ. ಅವರು ಒಂದು ಶಾಯರಿಯ ಸಭೆಗೆ ಹೋಗಿರುತ್ತಾರೆ. ಶಾಯರಿ ಹೇಳುವವರಿಗೆ ಕೆಮ್ಮು ಬರುತ್ತಿರುತ್ತದೆ. ಅದಕ್ಕೆ ಇವರ ಪ್ರತಿಕ್ರೆಯೆ. “ ಪಹಲೇ ಶಾಯರಿ ಸುನಾದೋ ಹಮ್ಕೊ, ಆಮೇಲೆ ನೀನೆಷ್ಟಾದರೂ ಕೆಮ್ಕೊ “ ಅಂತ. ನೋಡಿ. ಬೇರೇ ಭಾಷೆಯ ಪದ ಪ್ರಯೋಗದಿಂದ ಪ್ರಾಸದ ಸೃಷ್ಟಿಯಾಯಿತಲ್ಲವೇ ! ಭಾಷೆಯ ಸೊಬಗು ಬೆಳೆಯಿತಲ್ಲವೇ !! ನಮಸ್ಕಾರ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್