ಇತ್ತೀಚಿನ ಬರಹಗಳು: ಪೂರ್ಣಿಮಾ ಸುರೇಶ್ (ಎಲ್ಲವನ್ನು ಓದಿ)
ಶ್ರಾವಣದ ಪೂಜೆ ಹೊಸಿಲಿಗೆ
ರಂಗೋಲಿ ಅಂಗಳಕೆ
ನೀಲಿ ಹೂ ಬಳ್ಳಿ ಬೇಲಿಯಲಿ
ತುಳಸಿ ಹೊರ ಮೂಲೆಯಲಿ
ಮುಸ್ಸಂಜೆಯ ಪಾದಕೆ ಬೆಳಕು
ಭೇಟಿಯಾಗಬೇಕೆನಿಸಿದೆ
ಕರೆ ಮಾಡಿದಾಗ
ಧ್ವನಿ ತೇಲಿಸುತ್ತೇನೆ
ನಿನಗೋ ಚಡಪಡಿಕೆ
‘ಬಿಡುವು..’
‘ನಾವು ಭೇಟಿಯಾಗಿಯೇ ಇಲ್ಲ’
ನನ್ನ ತಹತಹಿಕೆ
ಮೊನ್ನೆ ಅವನು ಪಕ್ಕ ಕೂತಾಗ
ಉದಾಸಳಾಗಿ
‘ಭೇಟಿಯಾಗಬೇಕು ನಾವು..’
ನಕ್ಕು ಅಂದ,
‘ನಿನಗೆ ಹಸಿವು..’
ಉಂಡ ಬೆರಳ ತುದಿ
ಪರಿಮಳ
ಅಘ್ರಾಣಿಸಿದಷ್ಟೆ
ನಾವು ಕಳಕೊಂಡ ಜಗದ
ತುಂಡುಗಳು
ಎರಡಾಗಲು ಒಂದಾಗಬೇಕು
ಪ್ರತಿ-ಫಲಿಸಬೇಕು
ಮುಕ್ತಾಯ ಸಿಹಿ
ಎನ್ನುವವರಿಗೆ ಆರಂಭ
ತಿಳಿದಿಲ್ಲ
ಪ್ರಾರ್ಥನೆ
ಆಹ್ವಾನ..
ಪ್ರಾಣ ಪ್ರತಿಷ್ಠಾಪನೆ
ಮುನ್ನವೇ…
ಮೂರ್ತಿ ವಿಸರ್ಜನೆ
ಒಳಗೆ ಕರೆಯಲಿಲ್ಲ
ಭೇಟಿಯಾಗಲೇ ಇಲ್ಲ
ಆಗಿದ್ದರೆ,
ಬಾಗಿದ ನಭ,
ಹಾಲ್ನೊರೆ ಬೆಳದಿಂಗಳು
ಆರದ ಆರತಿ
ಧ್ಯಾನಿಸುವ ಪರಿ
ನಿನಗೆ ಕಾಣಿಸುತ್ತಿದ್ದೆ
ನಿನಗೆ ತಿಳಿದಿದೆಯೇ ಭೇಟಿ?
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು