ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೂಚಿಮ್ಮ ಕಥಾ ಸಂಕಲನದ ಬಗ್ಗೆ

ವಿಷ್ಣು ಭಟ್ ಹೊಸ್ಮನೆ
ಇತ್ತೀಚಿನ ಬರಹಗಳು: ವಿಷ್ಣು ಭಟ್ ಹೊಸ್ಮನೆ (ಎಲ್ಲವನ್ನು ಓದಿ)

ಮೂಚಿಮ್ಮ
ಕಥಾ ಸಂಕಲನ
ಮೈಲ್ಯಾಂಗ್ ಬುಕ್ ಪ್ರಕಟಣೆ

ಅಜಿತ್ ಹೆಗಡೆಯವರ ಪರಿಧಾವಿ ಮತ್ತು ಕಾಮೋಲ ಸಂಕಲನವನ್ನು ಓದಿದ್ದ ನನಗೆ ಈ ಸಂಕಲನ ವಿಭಿನ್ನ ಅನುಭವವನ್ನು ಕೊಟ್ಟಿದ್ದು ನಿಜ. ಮುನ್ನುಡಿಯಲ್ಲಿ ಹರೀಶ್ ಕೇರ ಅವರು ಅಂದಂತೆ ಪಾತ್ರಗಳನ್ನು ಹೃದಯದವರೆಗೂ ತಂದು ಬಿಡುತ್ತಾರೆ. ಕಥೆಯ ಪ್ರತಿ ಪಾತ್ರಗಳೂ ಓದು ಮುಗಿದ ಮೇಲೂ ಮನದಲ್ಲಿ ಉಳಿಯುತ್ತವೆ. ಅಜಿತರಿಗೆ ಮನುಷ್ಯನ ಸೂಕ್ಷ್ಮ ಭಾವ ಮತ್ತು ಸಂಬಂಧವನ್ನು ಕಥೆಯಾಗಿಸುವ ಕಲೆ ಸಿದ್ಧಿಸಿದೆ. ಮೂಚಿಮ್ಮ ಸಂಕಲನದ ಹತ್ತು ಕಥೆಗಳು ಜಗತ್ತಿನ ಹತ್ತು ಮುಖಗಳನ್ನು ತೆರೆದಿಡುತ್ತವೆ. ಇದು ಹೀಗೆ ಆಗುತ್ತದೆ ಎಂದು ಓದುತ್ತಾ ಹೋದವನಿಗೆ ಕೊನೆಯಲ್ಲಿ ಬೇರೆಯೇ ತಿರುವಿನಲ್ಲಿ ನಿಲ್ಲಿಸಿ ಬಿಡುತ್ತಾರೆ. ಓದುಗನ ಮನಸ್ಸನ್ನು ಗೆಲ್ಲಲು ಇಷ್ಟು ಸಾಕು. ಅಜಿತ್ ಅವರಿಗೆ ಅಭಿನಂದನೆ.

ಮನುಷ್ಯನಿಗೆ ಇವತ್ತಿನ ದಿನ ಕಷ್ಟ ಅನ್ನಿಸುತ್ತಿರುವಾಗಲೇ ನಾಳೆಯ ಬಗ್ಗೆ ಸಣ್ಣ ಕೂತೂಹಲ ಹುಟ್ಟುತ್ತಲೇ ಇರುತ್ತದೆ. ಒಂದು ನೆಮ್ಮದಿಯ ಕಿರಣ ಎಲ್ಲಿಂದಾದರೂ ಬಂದು ಬೆಳಗಲಿ ಎಂಬ ಆಶಯ ಇದ್ದೇ ಇರುತ್ತದೆ. ಪ್ರೀತಿಯಲ್ಲಿ ಬಿದ್ದೊಡನೆ ಒಂದೊಳ್ಳೆ ಉದ್ಯೋಗ, ಪ್ರೀತಿಸಿದರೊಂದಿಗೆ ಮದುವೆ, ಮಗು ಇವಿಷ್ಟು ನಾಳೆಯನ್ನು ಸುಖವಾಗಿ ಇಡಬಲ್ಲದು ಎಂಬ ನಂಬಿಕೆ ಗಟ್ಟಿಯಾಗುತ್ತಾ ಹೋಗುತ್ತದೆ. ಇಷ್ಟಾದ ಮೇಲೆ ಬದುಕಿನ ಹೋರಾಟಕ್ಕೆ ಸಜ್ಜಾಗಿ ಹೊರಡಬೇಕು. ಈ ಆವಿ ಕಥೆಯಲ್ಲಿ ಹೀಗೆ ಹೊರಟವನು ಶರತ್. ಅವನ ಜೊತೆಯಾದವಳು ದಿಶಾ. ನಡುವೆ ಸುನಿಲ್ ಇಣುಕಿದ. ಒಂದು ಸ್ನೇಹ, ಪ್ರೀತಿ ಮತ್ತು ಬದುಕಿನ ಸೋಲು ಜೊತೆಗೆ ಸಂಸಾರದ ಗೆಲುವು ಈ ಮೂರನ್ನೂ ಕತೆ ಹೇಳುತ್ತ, ವಿಧಿಯಾಟದದ ನಾಟಕದ ಜೊತೆಗೆ ಸುಖಾಂತ್ಯ ಕಾಣುತ್ತದೆ. ಶುದ್ಧ ಪ್ರೀತಿ ಮತ್ತು ಹೆಣ್ಣಿನ ಔದಾರ್ಯ ಈ ಕತೆ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಜೊತೆಗೇ ಹೆಣ್ಣು ಜೀವ ಅದೆಷ್ಟೋ ಸಲ ಅವಕಾಶ ಇದ್ದರೂ ತನ್ನ ಇಷ್ಟಗಳು ತನಗೆ ಅನಿವಾರ್ಯವಲ್ಲ ಎಂಬ ನಿರ್ಧಾರಕ್ಕೆ ಯಾಕಾದರೂ ಬರುತ್ತಾಳೋ ಎಂಬ ಪ್ರಶ್ನೆಯನ್ನು ಈ ಕಥೆ ಓದುಗನ ಮನಸ್ಸಿನಲ್ಲಿ ಉಳಿಸುತ್ತದೆ.

ಈ ಸಂಕಲನದ ಎರಡನೆಯ ಕಥೆ ನಟ. ನಟರಾಜನ ಕಥೆ ಅಥವಾ ಒಂದು ಗಂಡು ಮನಸ್ಸಿನ ಕಥೆ ಎನ್ನಬಹುದು. ತಟ್ಟನೆ ಯಾವುದೋ ಸಾಹಸಕ್ಕೆ ಕೈ ಹಾಕಿಬಿಡುವ ಮನಸ್ಥಿತಿ ಹಲವರಲ್ಲಿ ಇರುತ್ತದೆ. ಅಂತಹದ್ದೇ ಮನಸ್ಥಿತಿಯ ನಟರಾಜನ ಕಥೆ ಜಿಂಕೆಯನ್ನು ಸಾಕುವ ನಿರ್ಧಾರದಿಂದ ಆರಂಭವಾಗುತ್ತದೆ. ಕಾಡು ಪ್ರಾಣಿಯೊಂದು ಸಾಕು ಪ್ರಾಣಿಯಾಗಿ ಉಳಿಸಿ ಕೊಂಡಾಗ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಹುಟ್ಟಿಕೊಳ್ಳುವ ಪ್ರೀತಿಯನ್ನು ಈ ಕಥೆ ಹೇಳುತ್ತ ಅದಕ್ಕೆ ಸಮಾನಾಂತರ ದಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಹೀಗೂ ಇರುತ್ತವೆ ಎಂಬುದನ್ನು ಕತೆ ತೋರಿಸುತ್ತದೆ. ಸಿನಿಮಾ ಜಗತ್ತಿನ ಸೂಕ್ಷ್ಮವನ್ನು ಚಿತ್ರಿಸುತ್ತಾ ನಟರಾಜ ತನ್ನ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ನಟಿಸಿದ ಗೆದ್ದ ಆದರೆ ಅವನು ತಾನು ಸಾಕಿದ ಜಿಂಕೆಯನ್ನು ಬೀಳ್ಕೊಡಲು ಕಣ್ಣೀರು ಹಾಕಿದ. ಕಾಮ ಎಂಬುದು ಗಂಡಸಿನ ಅಹಂಕಾರದ ರೂಪವಾಗಿ, ಗಂಡಸಿನ ಪ್ರೀತಿ ಎಂಬುದು ಅದೆಷ್ಟು ಆಳವೂ ಆಗಿದೆ ಎಂಬುದನ್ನು ಕಥೆ ಎರಡು ಭಾಗದಲ್ಲಿ ಬಿಡಿಸಿಟ್ಟಿದೆ. ವಿಭಿನ್ನ ಬಗೆಯ ಈ ಕಥೆ ಹಿತವಾಗಿದೆ.

ಮೂಚಿಮ್ಮ ಕತೆ ತುಂಬಾ ಆಪ್ತ. ಇದಕ್ಕೆ ಕಾರಣ ನಾನೂ ಹವ್ಯಕ ಭಾಷೆ ಬಲ್ಲವನಾಗಿದ್ದೂ ಕೂಡ ಒಂದು ಕಾರಣ. ಪ್ರತಿ ಊರಲ್ಲಿ ಮೂಕಾಂಬಿಕೆಯಂತಹ ಜೀವ ಬಹುಶಃ ಎಂದೋ ಉಳಿದು ಅಳಿದು ಹೋಗಿರಬಹುದು. ಒಂದು ಕಾಲದ ಮಜ್ಜಿಗೆ ಕಪಾಟಿನ ಯಜಮಾನಿಕೆಯ ಗುಟ್ಟನ್ನು ರಸವತ್ತಾಗಿ ಹೇಳುತ್ತದೆ. ಮೂಚಿಮ್ಮ ನಾವೆಲ್ಲ ನೋಡಿದ ವ್ಯಕ್ತಿಯೇ ಆಗಿದ್ದಾಳೆ. ಇಲ್ಲಿ ಮೂಚಿಮ್ಮ ಪಾತ್ರವೇ ಒಂದು ಕಾಲದ ಕಥೆಯನ್ನು ಹೇಳುತ್ತದೆ. ಒಂದು ಸಣ್ಣ ರಹಸ್ಯ ಇದರಲ್ಲಿದೆ. ಇದು ಹವ್ಯಕ ಭಾಷೆಯ ಬಳಕೆಯಿಂದಲೂ ಭಿನ್ನ ವಸ್ತುವಿನಿಂದಾಗಿಯೂ ಇಷ್ಟವಾಗುತ್ತದೆ.

ವಿಲಿಪ್ತ ಕಥೆ ಮನುಷ್ಯನ ಮನಸ್ಸಿನ ತೊಳಲಾಟ ಮತ್ತು ಸಮಾಜದಲ್ಲಿ ತನ್ನ ಸ್ಥಾನ ಇವೆರಡೂ ಪರಸ್ಪರ ಸಂಘರ್ಷಕ್ಕೆ ಇಳಿದಂತೆ ವ್ಯಕ್ತಿಯೊಬ್ಬನನ್ನು ಕಾಡುವ ಕಥೆ. ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಗುರುವೋ ನಾಯಕನೋ ಇನ್ನೇನೋ ಆಗಿ ಗೌರವದ ಸ್ಥಾನದಲ್ಲಿ ಗುರುತಿಸಲ್ಪಟ್ಟಾಗ ತನ್ನ ವಯಕ್ತಿಕ ಆಸೆ, ಆಸಕ್ತಿಗಳಿಂದ ಅನಿವಾರ್ಯವಾಗಿ ದೂರವಾಗುತ್ತ, ತನ್ನದಲ್ಲದ ಬದುಕನ್ನು ಬದುಕುತ್ತಾ, ಇವೆಲ್ಲವುಗಳಿಂದ ಪಾರಾಗಲು ಯತ್ನಿಸುತ್ತ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುವ ಒಂದು ನಿಜ ಮನದ ನೋವು ಈ ಕಥೆಯಲ್ಲಿ ಅಡಗಿದೆ. ಇದೇ ನೆಮ್ಮದಿ ಅಂದುಕೊಂಡು ಬದುಕುವ ಹೊತ್ತಲ್ಲಿ ಇನ್ನೊಂದು ಆಕರ್ಷಿಸುತ್ತದೆ. ವಿನಾಕಾರಣ ಹತ್ತಿರವಾಗಿ, ಶುದ್ಧ ಸಂಬಂಧ ಅಶುದ್ಧವಾಗಿ ಪ್ರಚಾರ ಪಡೆದು, ಒಂದು ಅನಿಯಂತ್ರಿತ ಸಂಧರ್ಬದಲ್ಲಿ ಕುತಂತ್ರಕ್ಕೆ ಸಿಲುಕಿ ನಲಗುವ ಜಯಪ್ರಕಾಶನ ಕಥೆ ಪ್ರಸ್ತುತ ಜಗತ್ತಿನ ಒಂದು ತಣ್ಣನೆಯ ಕ್ರೌರ್ಯವನ್ನು ದೃಶ್ಯ ರೂಪದಲ್ಲಿ ತೋರಿದಂತೆ ಓದುಗನ ಮುಂದೆ ಹಿಡಿದಿದೆ. ಈ ಕಥೆ ಇವತ್ತು ನಾಳೆ ನಮ್ಮ ಸುತ್ತ ಘಟಿಸುತ್ತಲೇ ಇರುವ ಸಂಗತಿ. ಇದನ್ನು ಹಿಡಿದಿಟ್ಟ ಬಗೆ ಚಂದ.

ಪತನ ಕಥೆಯ ಶೀರ್ಷಿಕೆಯೇ ಹೇಳುವಂತೆ ಪ್ರತಿ ಯೊಂದಕ್ಕೂ ಒಂದು ಕೊನೆಯಿದೆ. ಆದರೆ ಈ ಕೊನೆಗೆ ಕಾಲಮಾನವಿಲ್ಲ. ಈಗಲೇ ಬರಬಹುದು, ಮುಂದೆಂದೋ ಬಡಬಹದು. ಬರುವುದು ಖಚಿತ. ಈ ಕಥೆಯಲ್ಲಿ ನಾಯಕನ ಪುರುಷತ್ವದ ಅಹಮಿಕೆ ಪತನ ಆಗುತ್ತಾ, ಈ ಪತನದ ಕಾರಣದಿಂದಾಗಿಯೇ ನಾಯಕ ಬದುಕಿದ್ದು ಸತ್ತಂಗಾಗುತ್ತಾನೆ. ಅಂಥವನ ಪತ್ನಿಯೊಬ್ಬಳ ಮೌನದ ಒಳಗೇ ಅವಳನ್ನು ಕದಡುವ ನೋವನ್ನು ಆ ನೋವಿಂದ ಬಿಡುಗಡೆ ಹೊಂದಲು ಯತ್ನಿಸುತ್ತಾ ಕೊನೆಗೂ ಸೋತು ನಿಂತ ಗಂಡನಿಗೆ ಮತ್ತೆ ಸಂಗಾತಿಯಾಗಿ ನಿಲ್ಲುತ್ತಾಳೆ. ಏನೇ ಇದ್ದರೂ ಕೊನೆಗೆ ಗೆಲ್ಲುವುದು ಪ್ರಕೃತಿ. ಎಂಬುದನ್ನು ಕಥೆ ಮಾರ್ಮಿಕವಾಗಿ ಹೇಳುತ್ತದೆ.

ದಹನ ಕಥೆ ಎರಡು ಜೀವಗಳ ಜೀವನವನ್ನು ಹೇಳುತ್ತ ಒಂದೇ ಬಿಂದುವಿನಲ್ಲಿ ಇವರನ್ನು ಸೇರಿಸಿ ಒಂದು ಆಘಾತವನ್ನು ನೀಡುತ್ತದೆ. ಬದುಕಿನ ಅನಿವಾರ್ಯ ಬದಲಾವಣೆಗಳನ್ನು ಈ ಕಥೆಯಲ್ಲಿ ಚಂದ ಚಿತ್ರಿಸಿದ್ದಾರೆ. ಕೊನೆಯ ತನಕ ಕುತೂಹಲ ಉಳಿಸಿಕೊಂಡು ಸಾಗುವ ಈ ಕಥೆ ಕೊನೆಯಲ್ಲಿ ಊಹಿಸದ ತಿರುವು ಪಡೆದುಕೊಳ್ಳುತ್ತದೆ. ಸಾವು ಬಂದೆರಗದೇ ಆತ್ಮಹತ್ಯೆ ಕೂಡ ಅಸಾಧ್ಯ ಎನ್ನುತ್ತದೆ ಕಥೆ.

ಜನಾರ್ದನ ಕಥೆ ಇವತ್ತಿನ ಕಥೆ. ಕೊರೋನ ಕಾಲದ ಸಂದಿಗ್ಧವನ್ನು ಕಥೆ ತೋರಿಸಿದೆ. ಈ ಜನಾರ್ದನ ಭಟ್ಟರು ಕಥೆ ಮುಗಿದ ಮೇಲೂ ಕಾಡುತ್ತಾರೆ. ಬೆಸುಗೆ ಭಿನ್ನ ರೀತಿಯ ಪ್ರೇಮ ಕಥೆ. ಮದುವೆ ಬೇಡ ಎಂದು ಕುಳಿತ ಹುಡುಗಿಯ ಮನದಲ್ಲಿ ಪ್ರೀತಿ ಯಾಕೆ ಹುಟ್ಟುತ್ತೆ? ಮೇಲೆ ಏನಾಗುತ್ತೆ? ತಿಳಿಯಲು ಕಥೆ ಓದಬೇಕು. ಸಣ್ಣ ಸಿನಿಮಾದಂತೆ ರಂಜಿಸುವ ಕಥೆ ಇದು.

ನಾನೊಂದು ಬಗೆದರೆ ಈ ಸಂಕಲನದಲ್ಲಿರುವ ನೀಳ್ಗತೆ. ಮಲೆನಾಡು, ಮಲೆನಾಡಿನ ನೆರೆ, ಬದುಕು ಬವಣೆ ಎಲ್ಲವನ್ನೂ ಪರಿಚಯಿಸಿ ಅಲ್ಲಿನ ಭಾಷೆಯೂ ಇಲ್ಲಿ ಬಳಕೆ ಆಗಿದ್ದು ವಿಶೇಷ ಮೆರುಗು. ಒಂದು ಸಂಬಂಧವನ್ನು ಸೂಕ್ಷ್ಮವಾಗಿ ಹೇಳುವ ಈ ಕಥೆ ವಿಭಿನ್ನವಾಗಿ ಹೆಣೆದ ಕಥೆ. ಎರಡು ನಾಯಕರು ಇರುವ ಈ ಕಥೆಯಲ್ಲಿ ಮೊದಲಾರ್ಧ ಒಬ್ಬನೂ ದ್ವಿತೀಯಾರ್ಧ ಇನ್ನೊಬ್ಬನೂ ತನ್ನ ಕಥೆಯನ್ನು ಹೇಳುವ ತಂತ್ರ ಚೆನ್ನಾಗಿದೆ. ಈ ತಂತ್ರದ ರಹಸ್ಯ ಬಯಲಾಗುವುದೇ ಕಥೆಯ ಕೊನೆಯಲ್ಲಿ. ಇದೊಂದು ಅದ್ಭುತ ಕಥೆ.

ಪರಿವರ್ತನೆ ಬದಲಾವಣೆ ಜಗದ ನಿಯಮ ಎಂಬ ಸಾಲಿನಿಂದ ಶುರುವಾಗಿ ಹೆಗಡೇರಿಗೆ ತಾವು ಅರ್ಥೈಸಿದ ಪ್ರೀತಿಯೇ ಬೇರೆ, ನಿಜದ ಪ್ರೀತಿಯೇ ಬೇರೆ ಎಂಬುದಕ್ಕೆ ತಮ್ಮ ಮನೆಯಲ್ಲೇ ಉದಾಹರಣೆ ಸಿಕ್ಕಾಗ ಆಶ್ಚರ್ಯದ ಜೊತೆಗೆ ಮುಂದೇನು ಎಂಬ ಜಿಜ್ಞಾಸೆಗೆ ಬಿದ್ದು, ಅದಕ್ಕೂ ತಾವೇ ಪರಿಹಾರ ಕಂಡು ಕೊಳ್ಳುತ್ತಾರೆ. ಅಪ್ಪಟ ಪ್ರೇಮ ಕಾಮವನ್ನೂ ಮೀರಿದ್ದು ಎನ್ನುವುದನ್ನು ಕಥೆ ಮನದಟ್ಟು ಮಾಡುತ್ತದೆ.

ಇಲ್ಲಿ ನಾನು ಕಥೆಯ ಪಾತ್ರ, ನಡೆ ನುಡಿಯ ಬಗ್ಗೆ ಹೇಳಿಲ್ಲ. ಅವನ್ನು ಕಥೆಗಳನ್ನು ಓದಿಯೇ ಅನುಭವಿಸ ಬೇಕು. ಶೈಲಿ, ತಂತ್ರ, ಭಾಷೆ, ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ಜಾಣತನ ನಿರ್ವಹಣೆ, ನಿರೂಪಣೆ ಎಲ್ಲವೂ ಕಥೆಗಾರರ ಯಶಸ್ಸು. ಪ್ರತಿ ಕಥೆಯಲ್ಲೂ ಊಹಿಸದ ತಿರುವುಗಳು ಇರುವುದು ಇನ್ನೊಂದು ಗರಿ. ಕಥೆಗಳ ಒಳಗೆ ಅಜಿತ್ ಅವರು ಬದುಕಿನ ಹರಿವಿನ ಹಲವು ದಾರಿಗಳನ್ನು ಪರಿಚಯಿಸಿದ್ದಾರೆ. ಅನಗತ್ಯವಾಗಿ ಏನನ್ನೂ ಸೇರಿಸದೆ, ಕತೆಗೆ ಅಂತ್ಯ ಕೊಟ್ಟು, ಓದುಗನ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ.

ಮೂಚಿಮ್ಮ ಕಥಾಸಂಕಲನದ ಲೇಖಕರು: ಶ್ರೀ ಅಜಿತ್ ಹರೀಶಿ

ಸಾಹಿತ್ಯ ಲೋಕಕ್ಕೆ ಹೊಸ ಕಥೆಗಳನ್ನು ಕೊಟ್ಟ ಅಜಿತ್ ಅವರಿಗೆ ಧನ್ಯವಾದ. ಇನ್ನಷ್ಟು ಕಥೆಗಳು ಬರಲಿ ಎಂಬ ಹಾರೈಕೆ.