- ಶುಭಪರಿಣಾಮ (ಸಣ್ಣ ಕಥೆ) - ಸೆಪ್ಟೆಂಬರ್ 10, 2025
ತೆಲುಗು ಮೂಲ : ಬಿ.ಲಕ್ಷ್ಮೀ ಗಾಯತ್ರಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್
“ಇಂಡಿಯಾದಲ್ಲಿ ಮ್ಯಾನ್ಪವರ್ಗೆ ಮೌಲ್ಯವೂ ಇಲ್ಲ, ಗೌರವವೂ ಇಲ್ಲ ಶ್ರೀನು. ನಮ್ಮ ಮನೆಯ ಕೆಲಸದವಳು ಸ್ವಚ್ಛವಾಗಿ ಇರಬೇಕು, ಆದರೆ ಸ್ವಲ್ಪ ಸೊಬಗಾಗಿದ್ದರೆ ತಾಳಲಾಗದು. ತನ್ನ ಪದ್ಧತಿಯೊಂದಿದ್ದರೆ, ಆ ವ್ಯಕ್ತಿತ್ವವನ್ನು ಗೌರವಿಸುವ ಮನಸ್ಸು ನಮಗಿಲ್ಲ. ಅವಳು ನಮ್ಮ ಕಾಲ್ಕೆಳಗೆ ಚಪ್ಪಲಿಯಂತೆ ಇರಬೇಕೆಂದು ಅನ್ನಿಸುತ್ತದೆ. ಹಾಗೆ ಇಲ್ಲದಿದ್ದರೆ, ‘ಪೊಗರು’, ‘ಅಹಂಕಾರ’ ಎಂದು ಹೆಸರುಗಳನ್ನು ಇಡುತ್ತೇವೆ. ‘ನಾಲ್ಕು ಮನೆಗಳಲ್ಲಿ ಎಂಜಲು ತಟ್ಟೆಗಳನ್ನು ತೊಳೆಯುವವಳಿಗೆ ಇಷ್ಟು ಧೈರ್ಯವೇ?’ ಎಂದು ತುಂಬಾ ಕೀಳಾಗಿ, ಸರಿಯಾಗಿ ಹೇಳಬೇಕೆಂದರೆ ತುಂಬಾ ನೀಚವಾಗಿ ಮಾತನಾಡುತ್ತೇವೆ! ಸಮಾಜದಲ್ಲಿ ರಹಸ್ಯವಾಗಿ ನಡೆಯುವ ಬದಲಾವಣೆಗಳನ್ನು ಗ್ರಹಿಸಲು ನಮಗೆ ಆಗುವುದಿಲ್ಲ. ಅದಕ್ಕಾಗಿಯೇ ಸಮಾನ ಸಮಾಜವು ಯಾವಾಗಲೂ ಒಂದು ಕನಸಾಗಿಯೇ ಉಳಿದಿದೆ!”
ರಾತ್ರಿ ಒಂಬತ್ತು ಗಂಟೆ ಸಮಯ. ಹಾಸಿಗೆಯ ಮೇಲೆ ಕುಳಿತುಕೊಂಡು ತರಗತಿಯಲ್ಲಿ ಪಾಠ ಹೇಳುತ್ತಿರುವದಂತೆ ಮಾತನಾಡುತ್ತಿದ್ದ ವಿನೀಲನ ಮಾತುಗಳನ್ನು ಶ್ರೀನಿವಾಸ್ ಶ್ರದ್ಧೆಯಿಂದ ಕೇಳುತ್ತಿದ್ದ. ಆದರೆ ಪ್ರತಿಕ್ರಿಯೆ ಮಾತ್ರ ನೀಡಲಿಲ್ಲ. ವಿನೀಲ ಮಾತನಾಡುತ್ತಿದ್ದದ್ದು ತನ್ನ ತಾಯಿಯ ಬಗ್ಗೆ ಅನ್ನುವುದು ಅವನು ಅರ್ಥ ಮಾಡಿಕೊಂಡ. ಐವತ್ತು ವರ್ಷದ ತಾಯಿಯಲ್ಲಿ ಬೇರೂರಿರುವ ಅಭಿಪ್ರಾಯಗಳನ್ನು ತಾನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವನಿಗೆ ತಿಳಿದಿತ್ತು. ಆದ್ದರಿಂದ ಮೌನವನ್ನೇ ಆರಿಸಿಕೊಂಡ.
ವಿನೀಲ ಸಮಾಜಶಾಸ್ತ್ರದಲ್ಲಿ ಎಮ್.ಎ ಮಾಡಿದ್ದಳು, ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಳು. ನೆಂಟರ ಮದುವೆಯಲ್ಲಿ ಅವಳನ್ನು ನೋಡಿ, ಆಕೆಯ ವಿಶಿಷ್ಟವಾದ ಸೌಂದರ್ಯಕ್ಕೆ ಆಕರ್ಷಿತನಾಗಿ, ಮನಸ್ಸು ಕೊಟ್ಟು ಮದುವೆಯಾದನು ಶ್ರೀನಿವಾಸ್. ಸಂಸಾರಕ್ಕೆ ಬಂದ ಮೊದಲ ದಿನವೇ, ವಿನೀಲನ ಗಮನ ಸೆಳೆದವಳು ಮನೆ ಕೆಲಸದವಳು ಆದಿಲಕ್ಷ್ಮಿ. ಚಿಕ್ಕ ವಯಸ್ಸಿನಲ್ಲಿ ಇದ್ದಂತೆ ಕಾಣುತ್ತಿದ್ದ ಆಕೆ, ಇಬ್ಬರು ಮಕ್ಕಳ ತಾಯಿ ಅನ್ನುವುದನ್ನು ಕೇಳಿ ವಿನೀಲ ಆಶ್ಚರ್ಯಪಟ್ಟಳು. ಸುಂದರವಾದ ಮೈಕಟ್ಟು, ಚುರುಕಾದ ಚಟುವಟಿಕೆಗಳೊಂದಿಗೆ ಮನೆಯ ಕೆಲಸ ಮಾಡುತ್ತಿದ್ದ ಆಕೆಯನ್ನು ನೋಡಿ ವಿನೀಲ ಸಂತೋಷಪಟ್ಟಳು.
‘ನಮ್ಮ ಕೆಲಸದವಳು ಚೆನ್ನಾಗಿದ್ದಾಳೆ ಅತ್ತೆ. ತುಂಬಾ ಚೆನ್ನಾಗಿದ್ದಾಳೆ’ ಎಂದು ಅತ್ತೆ ಶ್ರೀಲಕ್ಷ್ಮಿಯೊಂದಿಗೆ ಹೇಳಿದಳು.
‘ಹಾ… ಚೆನ್ನಾಗಿರುತ್ತಾಳೆ… ಅವಳ ಅಹಂಕಾರವೂ ಅಷ್ಟೇ ಚೆನ್ನಾಗಿರುತ್ತದೆ’ ಎಂದು ಶ್ರೀಲಕ್ಷ್ಮಿ ಸಿಡುಕಿದಳು.
“ನಿಮ್ಮ ಅತ್ತೆಯ ಹೆಸರೂ ಅವಳ ಹೆಸರೂ ಒಂದೇ ಅಲ್ಲವೇ… ಅದಕ್ಕೇ ನಿಮ್ಮ ಅತ್ತೆಗೆ ಅವಳ ಮೇಲೆ ಕೋಪ..” ಟಿವಿ ನೋಡುತ್ತಿದ್ದ ಗೋವರ್ಧನ ತನ್ನ ಹೆಂಡತಿಯನ್ನು ಅಣಕಿಸಿದ.
ಆ ಮಾತಿಗೆ ಶ್ರೀಲಕ್ಷ್ಮಿ ಸಿಟ್ಟಿನಿಂದ “ನಾನು ನಿಮಗೆ ಎಷ್ಟೋ ಸಲ ಹೇಳಿದ್ದೇನೆ ಅವಳ ಹೆಸರು ಮತ್ತು ನನ್ನ ಹೆಸರು ಒಂದಲ್ಲ ಎಂದು. ನನಗೆ ಸುಂದರವಾಗಿ ಶ್ರೀಲಕ್ಷ್ಮಿ ಎಂದು ಹೆಸರು ಇಟ್ಟಿದ್ದಾರೆ. ಅವಳ ಹೆಸರು ಆದಿಲಕ್ಷ್ಮಿ. ‘ಆದೆಮ್ಮಾ’ ಎಂದು ಕರೆದರೆ ಕೇಳುವುದೇ ಇಲ್ಲ. ‘ಲಕ್ಷ್ಮಿ’ ಎಂದಾಗ ಮಾತ್ರ ತಕ್ಷಣ ಸ್ಪಂದಿಸುತ್ತಾಳೆ.”
ವಿನೀಲ ಮನಸ್ಸಿನಲ್ಲೇ ನಕ್ಕಳು. ಅಂದರೆ ಕೆಲಸದವರ ಹೆಸರುಗಳು ಕೂಡ ನಿಂತ ಶ್ರೇಣಿಗೆ ತಕ್ಕಂತಿರಬೇಕು ಅನ್ನೋ ಅರ್ಥ. ‘ಅಪ್ಪಲಮ್ಮ’ ‘ಎಂಕಮ್ಮ’ ಅನ್ನೋ ಹೆಸರುಗಳೆಂದರೆ ಕೂಲಿ ಕೆಲಸದವಳೇನೋ ಅನ್ನಿಸುತ್ತದೆ. ‘ಲಕ್ಷ್ಮಿ’, ‘ಶ್ರೀದೇವಿ’ ಅನ್ನೋ ಹೆಸರುಗಳನ್ನು ಕೇಳಿದರೆ ನೋಡದೇ ಇದ್ದರೂ ಒಂದು ರೀತಿಯ ಗೌರವ ಉಂಟು. ಆದರೆ ಅಂತಹ ಗೌರವ ಭಾವನೆಯೂ ಇರಬಾರದು ಎಂದರ್ಥ!
ಇನ್ನೊಂದು ನಾಲ್ಕು ದಿನಗಳು ಕಳೆಯುತು.
ವಿನೀಲ ಆದಿಲಕ್ಷ್ಮಿಯಲ್ಲಿ ಕೆಲವು ವಿಶೇಷತೆಗಳನ್ನು ಕಂಡಳು. ಅವಳು ಎಂದಿಗೂ ‘ಅಮ್ಮನವರೇ’ ಎನ್ನುತ್ತಿರಲಿಲ್ಲ. ಬಹಳ ಕಡಿಮೆ ಮಾತನಾಡುತ್ತಿದ್ದಳು. ಯಾವ ಪ್ರಶ್ನೆ ಕೇಳಿದರೂ ಸಣ್ಣ ಉತ್ತರ ಹೇಳುತ್ತಾಳೆ.. ಅಷ್ಟೇ! ಬಣ್ಣ ಬಣ್ಣದ ಸುಂದರ ಪ್ಯಾಟರ್ನ್ ಇರುವ ಪಾಲಿಸ್ಟರ್ ಸೀರೆಯು, ಮ್ಯಾಚಿಂಗ್ ಬ್ಲೌಸ್ಗಳ ಜೊತೆಗೆ ಅಚ್ಚುಕಟ್ಟಾಗಿ ಧರಿಸುತ್ತಾಳೆ. ಮಾತು ಸಾಮಾನ್ಯವಾಗಿದೆ. ಆಕೆಗೆ ಯಾವುದೇ ಪ್ರಾದೇಶಿಕ ಭಾಷೆಯ ಲೇಪವಿಲ್ಲ.
ಆಕೆ ಕೆಲಸಕ್ಕೆ ಬಂದರೂ, ಅತ್ತೆ ಏನು ಕಾಫಿ, ಟೀ ನೀಡುತ್ತಿದ್ದಿಲ್ಲ.
‘ಏಕೆ ಅತ್ತೆ? ಅವಳು ಕುಡಿಯಲ್ಲವೇ?’ ಎಂದು ನಿಧಾನವಾಗಿ ಅತ್ತೆಯನ್ನೇ ಕೇಳಿದಳು ವಿನೀಲ.
‘ಆ ಮಹಾರಾಣಿಗೆ ಆರೋಗ್ಯ ನಿಯಮಗಳು ಬೇಕಾದಷ್ಟಿವೆ. ಬೆಳಿಗ್ಗೆ ಹಾಲಿನ ಪ್ಯಾಕೆಟ್ ತಂದುಕೊಂಡು, ತನ್ನ ಗಂಡ ಮತ್ತು ತನಗಾಗಿ ಚಹಾ ಮಾಡಿಕೊಳ್ಳುತ್ತಾಳೆ. ಅಷ್ಟೇ… ನಂತರ ಬೇರೆ ಏನು ಕುಡಿಯುವುದಿಲ್ಲ. ಬೇಸಿಗೆಯಲ್ಲಿ, ಮಜ್ಜಿಗೆಗೆ ಒಂದು ಚಿಟಿಕೆ ಉಪ್ಪು ಹಾಕಿ ಕೊಟ್ಟರೆ ತುಂಬಾ ಸಂತೋಷದಿಂದ ಕುಡಿಯುತ್ತಾಳೆ. ಇನ್ನೊಂದು ವಿಷಯ ಗೊತ್ತೇ… ನಮ್ಮ ವಾಚ್ಮನ್ ಮತ್ತು ಅವರವರು ಬೇಸಿಗೆಯಲ್ಲಿ ಕೂಲಿಂಗ್ ವಾಟರ್ಗೆ ಹುಚ್ಚರಾಗಿರುತ್ತಾರೆ. “ತಣ್ಣೀರು ಕೊಡಿ ಅಮ್ಮಾ!” ಎಂದು ಬರುತ್ತಾರೆ. ಅದರಲ್ಲಿ ನಮಗೆ ಏನು ನಷ್ಟವಿದೆ ಎಂದು ಫ್ರಿಜ್ ಬಾಟಲ್ ಒಂದನ್ನು ತೆಗೆದು ಕೊಡುತ್ತೇನೆ. ಆದರೆ, ಬೇಸಿಗೆಯ ಬಿಸಿಲು ವಿಪರೀತವಾಗಿದ್ದರೂ, ಈ ಲಕ್ಷ್ಮಿ ಮೇಡಂ ಫ್ರಿಜ್ನಲ್ಲಿಟ್ಟ ನೀರನ್ನು ಕುಡಿಯುವುದಿಲ್ಲ. ಗೊತ್ತೇ…?’
ಅತ್ತೆಯ ಮಾತಿಗೆ ವಿನೀಲ ಮನಸ್ಸಿನಲ್ಲೇ ಇಷ್ಟಪಡತೊಡಗಿದಳು. ಆದಿಲಕ್ಷ್ಮಿಯ ಶೈಲಿಯೇ ಬೇರೆ ಎಂದು ವಿನೀಲಾ ಮೊದಲ ನೋಟದಲ್ಲೇ ಗುರುತಿಸಿದ್ದಳು. ಸಾಮಾನ್ಯವಾಗಿ ಎಲ್ಲ ಮಾಲೀಕರು ತಮ್ಮ ಕೆಲಸದವರು ಹೇಗಿರಬೇಕೆಂದು ಬಯಸುತ್ತಾರೋ, ಅದಕ್ಕೆ ಸಂಪೂರ್ಣ ವಿರುದ್ಧವಾಗಿ, ಇನ್ನೂ ಚೆನ್ನಾಗಿ ಹೇಳಬೇಕೆಂದರೆ, ಒಬ್ಬ ಎಕ್ಸಿಕ್ಯೂಟಿವ್ ಕ್ಲಾಸ್ ವ್ಯಕ್ತಿಯಂತೆ ವರ್ತಿಸುತ್ತಿದ್ದಳು. ಅದಕ್ಕಾಗಿಯೇ ಅತ್ತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಿನೀಲ ಅರಿತುಕೊಂಡಳು.
‘ಕೆಳವರ್ಗದ ವ್ಯಕ್ತಿ ತಮಗಿಂತ ಹೆಚ್ಚು ಬುದ್ಧಿವಂತ ಮತ್ತು ಮುಂದುವರಿದವನಾಗಿರುವುದನ್ನು ಶ್ರೀಮಂತ ವರ್ಗವು ಸಹಿಸುವುದಿಲ್ಲ. ತಮ್ಮ ಮಕ್ಕಳು ತಮ್ಮಂತೆ ಬದುಕಬಾರದು, ಓದಿ ಉತ್ತಮ ಕೆಲಸಗಳನ್ನು ಮಾಡುತ್ತಾ ದೊಡ್ಡವರಾಗಿ ಬದುಕಬೇಕು ಎಂದು ಬಡವರು ಬಯಸುವುದು, ಮತ್ತು ಆ ಮಟ್ಟಿಗೆ ಶ್ರಮಿಸುವುದನ್ನು ಶ್ರೀಮಂತರು ಸಹಿಸುವುದಿಲ್ಲ. ಈ ಅಸಹಿಷ್ಣುತೆ ತಲೆಮಾರುಗಳಿಂದ ಬಹಳ ಸಹಜವಾಗಿ ಬರುತ್ತಿದೆ. ವಂಶಪಾರಂಪರ್ಯವಾಗಿ ಮಾಲೀಕನ ದಯೆಗಾಗಿ ಹಾತೊರೆಯುವ ಸೇವಕರೇ ಮಾಲೀಕರಿಗೆ ಇಷ್ಟವಾಗುತ್ತಾರೆ. ಮಾಲೀಕರು ಸೇವಕರಲ್ಲಿ ಸ್ವತಂತ್ರ ಭಾವನೆಗಳನ್ನು ಸಹಿಸುವುದಿಲ್ಲ. ಮುಖ್ಯವಾಗಿ ಮನೆಗಳಲ್ಲಿ ಕೆಲಸ ಮಾಡುವ ಹೆಂಗಸರು ತಮ್ಮ ಕೆಲಸಕ್ಕಾಗಿ ಸಾವಿರಾರು ರೂಪಾಯಿಗಳನ್ನು ದೋಚುತ್ತಿದ್ದಾರೆ ಎಂದು ಬೇಸರಿಸುತ್ತಾರೆ. ಮತ್ತೆ ಅದೇ ಕೆಲಸ ಅವರು ಮಾಡಬೇಕಾದರೆ ನಾನಾ ತೊಂದರೆಗಳನ್ನು ಅನುಭವಿಸುತ್ತಾರೆ. ಕೂಲಿ ಕೆಲಸ ಮಾಡುವವರು ಮತ್ತು ರಸ್ತೆ ಗುಡಿಸುವವರ ಮೇಲೆ ತೋರಿಸಲಾಗುವ ಕರುಣೆಯ ಸಾವಿರದ ಒಂದು ಭಾಗವೂ ಈ ಕೆಲಸದವರಿಗೆ ತೋರಿಸುವುದಿಲ್ಲ. ಈ ಸ್ವಭಾವವನ್ನು ಬದಲಾಯಿಸುವುದು ಒಬ್ಬಂಟಿಯಾಗಿ ಮಾಡಬಹುದಾದ ಕೆಲಸವಲ್ಲ. ಇದು ಜನರ ಸ್ವಭಾವವನ್ನು ಮೀರಿದ್ದು, ಸಮಾಜವೇ ಬದಲಾಗಬೇಕು! ವಿನೀಲ ತನ್ನಷ್ಟಕ್ಕೆ ತಾನೇ ಯೋಚಿಸುತ್ತಾ ಒಂದು ನಿಟ್ಟುಸಿರು ಬಿಟ್ಟಳು.
ಕಾಲಗತಿಯಲ್ಲಿ ಹತ್ತು ವರ್ಷಗಳು ಕಳೆದುಹೋಗಿದೆ.
ಮಕ್ಕಳು ಕೆಲಸ ಮಾಡಬೇಡ ಎನ್ನುತ್ತಿದ್ದ ಕಾರಣ, ಆದಿಲಕ್ಷ್ಮಿ ಕೆಲಸ ಬಿಟ್ಟಿದ್ದಳು. . ಶ್ರೀಲಕ್ಷ್ಮಿ ತನ್ನ ಅಹಂಕಾರವನ್ನು ಬದಿಗಿಟ್ಟು ಎಷ್ಟು ಬೇಡಿಕೆ ಇಟ್ಟರೂ, ಉಪಯೋಗವಿರಲಿಲ್ಲ. ಅದರಿಂದ, ಶ್ರೀಲಕ್ಷ್ಮಿಗೆ ಅವಳ ಮೇಲಿನ ಕೋಪ ನಾಲ್ಕು ಪಟ್ಟು ಹೆಚ್ಚಾಯಿತು.
ಈ ನಡುವೆ, ವಿನೀಲನ ಅಕ್ಕನ ಮಗಳ ಮದುವೆ ನಿಶ್ಚಯವಾಯಿತು. ಎಲ್ಲರೂ ಹೋಗಬೇಕೆಂದು ತಯಾರಿ ನಡೆಸಿದರು. ಹೊರಡುವಾಗ ಶ್ರೀಲಕ್ಷ್ಮಿಗೆ ಜ್ವರ ಬಂದಿತು. ವಿನೀಲ ಉಳಿದುಕೊಳ್ಳಲು ಯೋಚಿಸಿದಳು, ಆದರೆ ಶ್ರೀಲಕ್ಷ್ಮಿ ತನ್ನ ಸೊಸೆಯನ್ನು ಹೋಗುವಂತೆ ಒತ್ತಾಯಿಸಿದಳು. ‘ನನಗೇನೂ ತೊಂದರೆಯಿಲ್ಲ. ತುಂಬಾ ಆದರೆ ಇನ್ನೊಮ್ಮೆ ಆಸ್ಪತ್ರೆಗೆ ಹೋಗುತ್ತೇನೆ!’ ಎಂದಳು.
ವಿನೀಲ ಒಂದು ಕ್ಷಣ ಯೋಚಿಸಿ, ‘ಅತ್ತೆ, ನನ್ನ ಗೆಳತಿಯ ಮಗಳು ಡಾಕ್ಟರ್. ಇನ್ನೊಂದು ಹದಿನೈದು ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ಹೋಗುತ್ತಿದ್ದಾಳೆ. ತುಂಬಾ ಶಿಸ್ತಿನ ಹುಡುಗಿ. ನಾಲ್ಕು ದಿನಗಳ ಕಾಲ ನಮ್ಮ ಮನೆಗೆ ಬಂದು ನಿಮಗೆ ಸಹಾಯ ಮಾಡಲು ಸಾಧ್ಯವೇ ಎಂದು ಕೇಳುತ್ತೇನೆ!’ ಎಂದಳು. ಶ್ರೀಲಕ್ಷ್ಮಿ ಅನುಮಾನದಿಂದ… ‘ಡಾಕ್ಟರ್ ಎನ್ನುತ್ತಿದ್ದೀಯಾ. ನಮ್ಮ ಮನೆಯಲ್ಲಿ ಉಳಿದು ನನಗೇನು ಮಾಡುತ್ತಾಳೆ…?’ ಎಂದಳು.
ವಿನೀಲ ನಗುತ್ತ ‘ನೋಡೋಣ!’ ಎಂದಳು.
ಮರುದಿನ ಬೆಳಿಗ್ಗೆ, ಬಿಳಿ ಬಣ್ಣದ, ತೆಳ್ಳಗಿನ, ಎತ್ತರದ ಒಬ್ಬ ಹುಡುಗಿ ಬಂದಳು.
‘ಡಾಕ್ಟರ್ ಮಮತಾ!’ ಎಂದು ವಿನೀಲ ತನ್ನ ಅತ್ತೆಗೆ ಪರಿಚಯಿಸಿದಳು. ಆ ಹುಡುಗಿ ತಕ್ಷಣ ಕೈ ಜೋಡಿಸಿ ‘ ನಮಸ್ಕಾರ ಆಂಟಿ!’ ಎಂದಳು.
ಡಾಕ್ಟರ್ ಹುಡುಗಿಯ ವಿನಯಕ್ಕೆ ಸಂತೋಷಗೊಂಡು, ‘ಕುಳಿತುಕೊಳ್ಳಮ್ಮಾ!’ ಎಂದು ಮಮತಾಗೆ ಗೌರವದಿಂದ ಸೋಫಾ ತೋರಿಸಿದಳು ಶ್ರೀಲಕ್ಷ್ಮಿ.
ಮಮತಾಗೆ ಹೇಳಬೇಕಾದ ಎಲ್ಲವನ್ನೂ ಹೇಳಿ, ವಿನೀಲ ಊರಿಗೆ ಹೊರಟಳು. ನಾಲ್ಕು ದಿನಗಳ ನಂತರ ಅವಳು ಮರಳಿ ಬಂದಾಗ ಶ್ರೀಲಕ್ಷ್ಮಿ ಸಂಪೂರ್ಣವಾಗಿ ಚೇತರಿಸಿಕೊಂಡು, ಆರಾಮವಾಗಿ ಓಡಾಡುತ್ತಿದ್ದಳು. ವಿನೀಲ ಬಂದ ತಕ್ಷಣ ಮಮತಾ ಹೊರಡಲು ಸಿದ್ಧಳಾದಳು.
ಶ್ರೀಲಕ್ಷ್ಮಿ ತಾನೇ ಸ್ವತಃ ಮಮತಾಗೆ ಬೊಟ್ಟು ಇಟ್ಟು, ದುಬಾರಿ ಸೀರೆ ಮತ್ತು ಜಾಕೆಟ್ ನೀಡುತ್ತಾ, ‘ನಿನ್ನ ಮದುವೆಗೆ ಕರೆ, ಖಂಡಿತಾ ಬರುತ್ತೇನೆ!’ ಎಂದು ಕೆನ್ನೆ ಮುಟ್ಟಿ, ಮುತ್ತು ಕೊಟ್ಟು ಕಳುಹಿಸಿದಳು.
ಆ ಹುಡುಗಿ ಹೆಬ್ಬಾಗಿಲು ದಾಟಿದ ತಕ್ಷಣ, ‘ಎಷ್ಟು ಒಳ್ಳೆಯ ಹುಡುಗಿ… ಬಂಗಾರದ ಮಗುವು! ನನಗೇನಾದರೂ ಸ್ವಲ್ಪ ದೊಡ್ಡ ಮೊಮ್ಮಗ ಇದ್ದರೆ, ಅವನಿಗೆ ಮದುವೆ ಮಾಡುತ್ತಿದ್ದೆ. ಎಷ್ಟು ಶಿಸ್ತು… ಎಷ್ಟು ಚುರುಕು? ನೀನು ಹೊರಟ ನಂತರ ನನಗೆ ಇವಳು ಹೆಚ್ಚು ಸಹಾಯ ಮಾಡಿದಳು. ತಕ್ಷಣ ಯಾರನ್ನೋ ಕರೆದು ಫೋನ್ ಮಾಡಿ ಏನೋ ಇಂಜೆಕ್ಷನ್ ತರಿಸಿ, ತಾನೇ ಸ್ವತಃ ಮಾಡಿದಳು. ಅಷ್ಟೇ… ಜ್ವರ ಹಾಗೆ ಕಡಿಮೆಯಾಯಿತು. ಈ ನಾಲ್ಕು ದಿನಗಳೂ ತಾನೇ ನಮಗೆ ಅಡುಗೆ ಮಾಡಿ ಹಾಕಿದಳು. ಡಾಕ್ಟರ್ ಎಂಬ ಅಹಂಕಾರವೂ ಇಲ್ಲದೆ ನನ್ನ ಪಾದಗಳಿಗೆ ಎಣ್ಣೆ ಮಸಾಜ್ ಕೂಡ ಮಾಡಿದಳು?’ ಎಂದಳು.
ವಿನೀಲ ನಕ್ಕಳು, ‘ಅದೆಲ್ಲಾ ನನ್ನ ಮೇಲಿನ ಅಭಿಮಾನ ಮತ್ತು ಕೃತಜ್ಞತೆ ಅತ್ತೆ!’ ಎಂದಳು.
‘ಕೃತಜ್ಞತೆಯಾ… ನೀನು ಆ ಹುಡುಗಿಗೆ ಏನು ಮಾಡಿದ್ದೀಯಾ?!’ ಕೇಳಿದಳು ಶ್ರೀಲಕ್ಷ್ಮಿ.
‘ಅವರು ಅಷ್ಟು ಶ್ರೀಮಂತರಲ್ಲ. ಆ ಹುಡುಗಿಗೆ ಮೆಡಿಸಿನ್ ಓದಲು ಹುಚ್ಚು ಆಸೆ ಇತ್ತು. ಹೇಗೆ ಎಂದು ಅವಳ ತಾಯಿ ದುಃಖಪಡುತ್ತಿರುವಾಗ, ಸೀಟ್ ಸಿಕ್ಕರೆ ಶುಲ್ಕವನ್ನು ನಾನು ಕಟ್ಟುತ್ತೇನೆ ಎಂದೆ. ಆ ಹುಡುಗಿ ಎಂಸೆಟ್ನಲ್ಲಿ ಉತ್ತಮ ಶ್ರೇಣಿ ಪಡೆದು ಉಚಿತ ಸೀಟ್ ಪಡೆದುಕೊಂಡಳು. ದೆಹಲಿ ಎಯಿಮ್ಸ್ ನಲ್ಲಿ ಎಂ.ಡಿ. ಮಾಡಿದಳು. ಒಟ್ಟು ವಿದ್ಯಾಭ್ಯಾಸಕ್ಕೆ ಆದ ಖರ್ಚನ್ನೆಲ್ಲಾ ನಾನೇ ಭರಿಸಿದೆ. ದೆಹಲಿಯಲ್ಲಿ ಓದುತ್ತಿರುವಾಗ, ಒಬ್ಬ ದೊಡ್ಡ ಡಾಕ್ಟರ್ ಆ ಹುಡುಗಿಯ ಬುದ್ಧಿವಂತಿಕೆಗೆ ಮೆಚ್ಚಿ, ತಮ್ಮ ಖರ್ಚಿನಲ್ಲಿ ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ಕಳುಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಮಗನೊಂದಿಗೆ ಆ ಹುಡುಗಿಯ ಮದುವೆಯೂ ನಿಶ್ಚಯವಾಗಿದೆ. ಇನ್ನೊಂದು ನಾಲ್ಕು ದಿನಗಳಲ್ಲಿ ದೆಹಲಿಯಲ್ಲೇ ಮದುವೆ, ತನ್ನನ್ನು ಓದಿಸಿದೆ ಎಂಬ ಕೃತಜ್ಞತೆಯಿಂದಲೇ ಬಂದು ನಿಮಗೆ ಸೇವೆ ಮಾಡಿದಳು?’ ಎಂದು ವಿನೀಲ ವಿವರವಾಗಿ ಹೇಳಿದಳು.
ಶ್ರೀಲಕ್ಷ್ಮಿ ಆಶ್ಚರ್ಯದಿಂದ ಕೇಳುತ್ತಿದ್ದಳು.
‘ನೀನು ಎಲ್ಲವನ್ನೂ ಹೇಳಿ ಅಸಲಿ ವಿಷಯ ಹೇಳದೆ ಸುಮ್ಮನಾದೆಯಲ್ಲಾ ಅಮ್ಮಾ.. ಹೇಳು!’ ಗೋವರ್ಧನ ಪಕ್ಕದಿಂದ ಹೇಳಿದ.
‘ಅಸಲಿ ವಿಷಯ ಏನು..?!’ ಶ್ರೀಲಕ್ಷ್ಮಿ ಆಶ್ಚರ್ಯಗೊಂಡಳು.
ಒಂದು ಕ್ಷಣ ತಡವರಿಸಿ ‘’ಏನೂ ಇಲ್ಲ ಅತ್ತೆ ಮಮತಾ ನಮ್ಮ ಆದಿಲಕ್ಷ್ಮಿಯ ಮಗಳು!’ ಎಂದಳು ವಿನೀಲ.
‘ಏನು…!?’ ಶ್ರೀಲಕ್ಷ್ಮಿ ದಿಗ್ಭ್ರಮೆಗೊಂಡಳು.
‘ಇದು ಅವಳ ಮಗಳಾ…? ಅದಕ್ಕೇ ಅವಳು ಕೆಲಸ ಬಿಟ್ಟಳು. ತನ್ನ ಮಗಳು ಡಾಕ್ಟರ್ ಆದ ನಂತರ ತಲೆಗೆ ಏರಿತು ಎಂದರ್ಥ!’ ಎಂದು ಸಿಡುಕಿದಳು.
ಈ ಬಾರಿ ವಿನೀಲ ಕೋಪದಿಂದ, ‘ಆದಿಲಕ್ಷ್ಮಿ ತಲೆಗೆ ಏರಿ ಕೆಲಸ ಬಿಡಲಿಲ್ಲ ಅತ್ತೆ… ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಸಂಪಾದಿಸಲು ತಂಬಾಕು ಕಂಪನಿಯಲ್ಲಿ ದೈನಂದಿನ ಕೂಲಿ ಕೆಲಸಕ್ಕೆ ಸೇರಿ… ಕಷ್ಟಪಟ್ಟು ದುಡಿಯುತ್ತಿದ್ದಾಳೆ! ಮಮತಾಳ ತಮ್ಮನೂ ಚೆನ್ನಾಗಿ ಓದುತ್ತಿದ್ದಾನೆ. ಕೆಳವರ್ಗದಲ್ಲಿಯೂ ಮಹಾನ್ ವ್ಯಕ್ತಿಗಳಿದ್ದಾರೆ. ಆ ಮಹತ್ವವನ್ನು ನಾವು ಗುರುತಿಸಿ, ಅವರ ಏಳಿಗೆಗೆ ಸ್ವಲ್ಪ ಸಹಾಯ ಮಾಡಿದರೆ, ನಮ್ಮ ಮೇಲಿನ ಪ್ರೀತಿ ಮತ್ತು ಕೃತಜ್ಞತೆಯಿಂದ ಪ್ರಾಣವನ್ನೂ ನೀಡಲು ಹಿಂಜರಿಯುವುದಿಲ್ಲ. ಡಾಕ್ಟರ್ ಮಮತಾ, ಲಂಡನ್ಗೆ ಹೋಗಲಿರುವ ಮಮತಾ, ನಿಮ್ಮ ಪಾದಗಳನ್ನು ಹಿಡಿದು ಎಣ್ಣೆ ಹಚ್ಚಿದಳೆಂದರೆ ಅದು ಪ್ರೀತಿಯಿಂದ ಮಾಡಿದ ಕೆಲಸ. ಅವರು ಎಷ್ಟು ದೊಡ್ಡವರಾದರೂ, ಅವರನ್ನು ತಿರಸ್ಕರಿಸಿ ಗುಲಾಮಗಿರಿಯಲ್ಲೇ ಕೊಳೆಯುವಂತೆ ಮಾಡಿದರೆ, ನಮ್ಮ ಬಗ್ಗೆ ಅವರಿಗೆ ದ್ವೇಷವೇ ಮೂಡುತ್ತದೆ. ಗುರುತಿಸುವಿಕೆಯೊಂದಿಗೆ ಗೌರವವು ಮಾತ್ರ ಪ್ರೀತಿಗೆ ಅಡಿಪಾಯ ಹಾಕುತ್ತದೆ. ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಗೆ ದಾರಿ ಮಾಡಿಕೊಡುತ್ತದೆ!’ ಎಂದು ಮರ್ಯಾದೆಯಿಂದ ಹೇಳಿ, ಅತ್ತೆಯ ಮಾತಿಗೆ ಕಾಯದೆ ಅಲ್ಲಿಂದ ಹೊರಟುಹೋದಳು.
ಮರುದಿನ ಬೆಳಿಗ್ಗೆ ಶ್ರೀಲಕ್ಷ್ಮಿ, ಹತ್ತು ಸಾವಿರ ರೂಪಾಯಿಗಳನ್ನು ವಿನೀಲನ ಕೈಯಲ್ಲಿ ಇಡುತ್ತಾ, ‘ನನಗೇನಾದರೂ ಅಂತಹ ಮೊಮ್ಮಗಳು ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಂಡೆ. ಅವಳ ಮದುವೆಗೆ ಖರ್ಚು ಮಾಡಿಕೊಳ್ಳಲು ಅವಳ ತಾಯಿಗೆ ಕೊಡು!’ ಎಂದಳು.
ವಿನೀಲ ಸಂತೋಷದಿಂದ ‘ಒಂದು ಫೋನ್ ಮಾಡಿದರೆ ಓಡಿಬರುತ್ತಾಳೆ ಆದಿಲಕ್ಷ್ಮಿ. ‘ ಹಿರಿಯರು ನೀವೇ ಸ್ವತಃ ಕೊಡಿ!’ ಎಂದಳು ವಿನೀಲ. ಸಂತೋಷದಿಂದ ತಲೆಯಾಡಿಸಿದಳು ಶ್ರೀಲಕ್ಷ್ಮಿ.
‘ತುಂಬಾ ಚಿಕ್ಕದೇ ಆದರೂ, ಮಾನವತೆಯ ಇತಿಹಾಸದಲ್ಲಿ ಇದೊಂದು ಶುಭ ಬೆಳವಣಿಗೆ!’ ಎಂದುಕೊಂಡು ತೃಪ್ತಿಯಿಂದ ನಿಟ್ಟುಸಿರು ಬಿಟ್ಟಳು ವಿನೀಲ.
“
ಕೆಲಸದವರನ್ನು ಕಾಣುವ ಪರಿಕಲ್ಪನೆ ಸಹ ತಲೆಮಾರುಗಳಿಂದ ತಲೆಮಾರುಗಳಿಗೆ ಬದಲಾಗುತ್ತಿದೆ. ಡಿಗ್ನಿಟಿ ಆಫ್ ಲೇಬರ್ ಈಗೀಗ ಗುರುತಿಸಲ್ಪಡುತ್ತಿದೆ. ಮಾಡುವ ಕೆಲಸಗಳಿಗಿಂತ ಅವರ ನಡಾವಳಿಯಿಂದ ಅವರಿಗೆ ಮನ್ನಣೆ ಸಿಗುವಂತಾಗಿದೆ.