- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದಾಪೂರ್ವಕವಾಗಿ ಕರೆಯುವುದಾದರೆ ಶುನಕಗಳು ಅಥವಾ ಶ್ವಾನಗಳು ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ. ನಾನು ಮುಂಚಿನಿಂದಾ ಮನೆಯಲ್ಲಿ ನಾಯಿ ಸಾಕಾಣಿಕೆಯ ವ್ಯತಿರೇಕಿ. ಬಡತನ ಒಂದು ಕಾರಣವಿದ್ದರೂ, ಅದೆಷ್ಟೋ ಬಡವರ ಗುಡಿಸಲುಗಳ ಹತ್ತಿರ ನೀವು ಅವರ ನಾಯಿಗಳನ್ನು ಕಾಣಬಹುದು. ಕಷ್ಟದಲ್ಲಿ ತಮಗೆ ಸಿಗುವ ಹಿಡಿಯಲ್ಲೇ ಅದಕ್ಕೊಂದಿಷ್ಟು ನೀಡಿ ತಮ್ಮ ಗೆಳೆಯನನ್ನಾಗಿಸಿಕೊಳ್ಳುತ್ತಾರೆ. ಯಾಕೋ ನನಗೆ ಅಷ್ಟು ಉದಾರತೆ ಬರಲಿಲ್ಲ. ಬಹುಶ ನನ್ನ ಬಾಲ್ಯದಲ್ಲಿ ನನ್ನನ್ನಟ್ಟಿಸಿಕೊಂಡು ಬಂದ ನಾಯಿ ಅದಕ್ಕೆ ಕಾರಣವಿರಬಹುದು. ಅದು ಹಿಂದೆ ಬೀಳಲು ಕಾರಣ ನಾನು ಅದರ ಬಾಲ ತುಳಿದದ್ದು ಅಂತ ಹೇಳಿದರೇ ಈ ನನ್ನ ನಿಲುವು ಸ್ವಲ್ಪ ಸಡಿಲವಾಗುತ್ತದೆ ಅಂತ ಮುಂಚೆನೇ ಹೇಳಲಿಲ್ಲ ಅಂತಿಟ್ಕೊಳ್ಳಿ. ಅದು ಬೇರೇ ಮಾತು. ನನ್ನಂತೆ ಇರುವ ತುಂಬಾ ಕೆಲವರಲ್ಲಿ ನನ್ನ ಈ ಚಾಳೀಯನ್ನ ಗುರುತಿಸಿ ತೃಪ್ತಿಗೊಳ್ಳುತ್ತೇನೆ. ಆದರೂ ಇವುಗಳ ಬಗ್ಗೆಗಿನ ವಿಷಯದ ಅರಿವು ಪಡೆಯಲು ಪ್ರಯತ್ನ ಮಾಡಿದ್ದಿದೆ.
ನಾಯಿಗಳಲ್ಲಿ ಊರನಾಯಿಗಳು ಮತ್ತು ಕಾಡುನಾಯಿಗಳು ಎಂಬ ಪ್ರಭೇದಗಳಿದ್ದರೂ ಕಾಡುನಾಯಿಗಳು ನಮ್ಮ ನಡುವೆ ನಿವಾಸಿಸುವುದಿಲ್ಲ ವಾದ್ದರಿಂದ ಅವುಗಳನ್ನ ಈ ಲೇಖನದ ಪರಿಧಿಗೆ ತೊಗೊಂಡಿಲ್ಲ. ಊರ ನಾಯಿಗಳಲ್ಲಿ ಮತ್ತೆ ಸಿಗುವ ಪ್ರಭೇದಗಳೆಂದರೆ ಸಾಕು ನಾಯಿ ಮತ್ತು ಬೀದಿ ನಾಯಿ. ಸಾಕುನಾಯಿ ಯಾರಾದರೂ ಮನೆಯ ನಾಯಿ ಯಾಗಿರುತ್ತದೆ. ಅದರ ದೇಖರೇಖೆಗಳನ್ನ ಅದರ ಯಜಮಾನ ವಹಿಸಿಕೊಳ್ಳುತ್ತಾನೆ. ಅದು ಸ್ವಲ್ಪ ಮಟ್ಟಿಗೆ ಶಿಸ್ತಿನ ನಾಯಿ ಎನ್ನಬಹುದು. ಇದು ಕಚ್ಚುವುದಿಲ್ಲವಾ ಎಂದು ಕೇಳಬೇಡಿ. ನಮ್ಮನ್ನಾಳಿದ ಬಿಳಿಯರ ಗಾದೆ “ ಬಾರ್ಕಿಂಗ್ ಡಾಗ್ಸ್ ಸೆಲ್ಡಂ ಬೈಟ್ “ ಎನ್ನುತ್ತಾ ಅವುಗಳಿಗೆ ಬೆನಿಫಿಟ್ ಆಫ್ ಡೌಟ್ ಕೊಟ್ಟರೂ ನಮ್ಮವರು ಮಾತ್ರ “ ಬೊಗಳುವ ನಾಯಿ ಕಚ್ಚುವುದಿಲ್ಲ “ ಅಂತ ಸಾರಿದ್ದಾರೆ. ಹಾಗೆ ಅಂತ ನೀವು ಬೊಗಳಿದ ನಾಯಿಗಳ ಮೇಲೆ ಕಚ್ಚುತ್ತದೋ ಇಲ್ಲವೋ ಪ್ರಯೋಗ ಮಾಡಬೇಕಾಗಿಲ್ಲ. ನಾಯಿಯ ಸಹಜ ಗುಣವೇ ಕಚ್ಚುವುದು. ಆದಕಾರಣ ಇದು ಸಹ ಕಚ್ಚುತ್ತದೆ. ಕೆಣಕಿದರೆ ಮಾತ್ರ ಅಂತ ಅದರ ಒಡೆಯನ ಒಕ್ಕಣೆಯಾದರೂ ಅವರ ಹೇಳಿಕೆಯಲ್ಲಿ ಪೂರಾ ನಂಬಿಕೆ ಇಡಲಾಗುವುದಿಲ್ಲ. ಅದು ಕಚ್ಚುತ್ತದೆಯಾದ ಕಾರಣ ಮನೆಯ ಹೊರಗಡೆ ಫಲಕ ನೇತಾಡುತ್ತಿರುತ್ತದೆ,”ನಾಯಿ/ನಾಯಿಗಳಿವೆ ಎಚ್ಚರಿಕೆ “ ಅಂತ. ನೀವು ಆಗ ಅವರ ಮನೆಯೊಳಗೆ ಕಾಲಿಡುವಾಗ ತುಂಬಾ ಎಚ್ಚರ ವಹಿಸುತ್ತೀರಿ. ಅದನ್ನು ಕಟ್ಟಿಹಾಕಿದಾರೆ ಅಂತ ಗೊತ್ತಾದರೇ ಮಾತ್ರ ನೀವು ಒಳಗಡೆ ಹೋಗುವ ಸಾಹಸ ಮಾಡುತ್ತೀರಿ. ಎಲ್ಲ ನಾಯಿಗಳಿಗೂ ಅವುಗಳ ಏರಿಯಾ ಇರುತ್ತದಂತೆ. ಅದು ದಾಟಿ ಯಾರು ಬಂದರೂ ಅವು ಸಹಿಸುವುದಿಲ್ಲ. ಈ ಸಾಕುನಾಯಿಯ ಏರಿಯ ಅದು ಇರುವ ಮನೆ. ಆದ ಕಾರಣ ಅದರ ಏರಿಯಾದ ಒಳಗೆ ಬಂದರೇ ಅದು ಒಮ್ಮೆ ಬೊಗುಳುವುದರ ಮೂಲಕ ನಿಮಗೆ ಎಚ್ಚರಿಕೆ ನೀಡುತ್ತದೆ “ತೊಲಗು” ಅಂತ. ಅಷ್ಟರಲ್ಲಿ ಅದರ ಒಡೆಯ ಅಥವಾ ಒಡತಿ ಅದರ ಹೆಸರು ಕರೆದು, ಬರುವವರು ನಮ್ಮವರೇ ಎಂದ ಮೇಲೆ ಮಾತ್ರ, ನಿಮ್ಮ ಕಡೆ ಅದೇನೋ ಸಂಶಯದ ನೋಟದೊಂದಿಗೆ ಗುರ್ರೆನ್ನುತ್ತಾ ಒಳಗೆ ಹೋಗಲು ಬಿಡುತ್ತದೆ. ಈ ಅನುಭವ ಬಹುಶಾ ಎಲ್ಲರಿಗೂ ಒಮ್ಮೆಯಾದರೂ ಆಗಿರುತ್ತದೆ. ನೀವು ನಿಮ್ಮ ಮನೆಯಲ್ಲಿ ನಾಯಿ ಸಾಕಿದರೂ ಬೇರೇಯವರ ಮನೆ ನಾಯಿ ನಿಮ್ಮ ಅನುಭವವನ್ನು ಪರಿಗಣಿಸುವುದಿಲ್ಲ ಮತ್ತೆ ಅದರದೇ ಸೋದರನ/ಸೋದರಿಯ ಪೋಷಣೆ ಮಾಡುತ್ತಿರುವ ನಿಮ್ಮ ಬಗ್ಗೆ ಕೃತಜ್ಞತೆಯೂ ತೋರುವುದಿಲ್ಲ. ಅದಕ್ಕೆ ಅದರ ಏರಿಯಾ ಮತ್ತು ಒಡೆಯ ಮಾತ್ರ ಮುಖ್ಯ.
ಹಾಗಾಗಿ ತುಂಬಾ ಜನರಿಗೆ ನಾಯಿ ಇರುವ ಮನೆಗಳಿಗೆ ಹೋದಾಗ ಮೆಲಕು ಹಾಕಿಕೊಳ್ಳುವ ಅನುಭವಗಳಿರುತ್ತವೆ. ನನಗಂತೂ ಒಮ್ಮೆ ಒಬ್ಬ ತಿಳಿದವರ ಮನೆಗೆ ಊಟಕ್ಕೆ ಹೋಗಬೇಕಾಗಿತ್ತು. ಅವರ ಹೇಳಿಕೆ ಮೇರೆಗೆ ಅಂತಿಟ್ಟುಕೊಳ್ಳಿ. ನಾನು ನನ್ನ ಕುಟುಂಬದ ಸದಸ್ಯರು ಅವರ ಮನೆಗೆ ಹೋಗಿ ಸೋಫಾದ ಮೇಲೆ ಕೂತ ತಕ್ಷಣ ಒಂದು ದೈತ್ಯಾಕಾರದ ನಾಯಿ ಒಳಗಿಂದ ಬಂದು ನನ್ನ ಭುಜಗಳ ಮೇಲೆ ಅದರ ಮುಂಗಾಲು ಹಾಕಿ ನಿಂತೇಬಿಟ್ಟಿತು. ನನ್ನ ಹೆಂಡತಿ ಮತ್ತು ಮಕ್ಕಳು ಹೆದರಿ ದೂರ ಸರಿದು ಹೋದರು. ಅದು ಏನೂ ಮಾಡಲಿಲ್ಲ. ಬಹುಶ ಅದು ನನ್ನ ಪರಿಚಯ ಮಾಡಿಕೊಳ್ಳುತ್ತಿತ್ತೋ ಏನೋ. ಆದರೇ ಅದರ ಈ ಪರಿಯ ಆಕ್ರಮಿಕ ಭಂಗಿ ನನಗೆ ಗೊತ್ತಾಗುವುದಾದರೂ ಹೇಗೆ ? ನಾನು ಮೂರ್ತಿಯಂತಿದ್ದೆ. ಏನು ಮಿಸುಕಿದರೆ ಏನು ಪ್ರಮಾದವೋ ಯಾರಿಗ್ಗೊತ್ತು. ನನ್ನ ಮಿತ್ರರು ನಗುತ್ತಾ “ ಏನೂ ಮಾಡುವುದಿಲ್ಲ ಅದು ! ತುಂಬಾ ಸಾಧು. “ ಎನ್ನುತ್ತಾ ಅದರ ಹೆಸರು ಹಿಡಿದು ಕರೆದ ತಕ್ಷಣ ನನ್ನ ಮೇಲಿನ ಕಾಲುಗಳು ಕಿತ್ತುಕೊಂಡು ಅವರ ಹತ್ತಿರ ಹೋಯಿತು. ತುಂಬಾ ಸಾಧು ಅಂತ ಅವರಗ್ಗೊತ್ತು. ನನಗೆ ? ನಾನು ಬೆವರು ವರೆಸಿಕೊಂಡು ಪೆಕರನ ಹಾಗೆ ನಗುತ್ತಾ “ ಹೌದಾ “ ಎಂದೆ. ನನ್ನ ಪರಿವಾರದವರಂತೂ ಇನ್ನೂ ಕಂಗಾಲಾಗೇ ಕಂಡರು. ಅವತ್ತಿನ ಅವರ ಮನೆಯ ಔತಣ ಕಹಿ ಎನ್ನಿಸಿದ್ದರಲ್ಲಿ ತಪ್ಪೇನಿಲ್ಲ. ಅಷ್ಟೇ ಅಲ್ಲ. ನನ್ನ ಮಕ್ಕಳು ಸಹ ನಾಯಿ ಸಾಕುವುದಕ್ಕೆ ಹಿಂಜರಿಯಲು ಇವರ ಮನೆಯ ಘಟನೆ ಕಾರಣವಾಯಿತು. ನನ್ನ ಮಗಳು ಅಮೆರಿಕಾಕ್ಕೆ ಹೋದ ಮೇಲೆ ಅವಳಿಗೊಬ್ಬ ಕನ್ನಡದ ಹುಡುಗಿಯ ದೋಸ್ತಿಯಾಯಿತು. ಆದರೇ ಅವಳ ಮನೆಗೆ ಮಾತ್ರ ಇವಳು ತುಂಬಾ ದಿನಾನೇ ಹೋಗಿರಲಿಲ್ಲ. ಅವರ ಮನೆಯಲ್ಲಿ ಎರಡು ನಾಯಿಗಳಿದ್ದವು. ಇವಳಿಗಂತೂ ಹೋಗಲು ಹೆದರಿಕೆ. ಹೇಗೋ ಪುಸಲಾಯಿಸಿ ಅವುಗಳನ್ನು ರೂಮಿನಲ್ಲೇ ಕೂಡಿಹಾಕಿ ಇವಳನ್ನ ಮನೆಗೆ ಕರೆದೊಯ್ದಳಂತೆ. ಕೆಲವರು ಮನೆಯಲ್ಲಿ ಐದು ಆರು ನಾಯಿಗಳನ್ನ ಸಾಕುತ್ತಾರೆನ್ನುವುದು ನನ್ನ ಮಧ್ಯತರಗತಿಯ ಮನಸ್ಥಿತಿಗೆ ತುಂಬಾ ಅಚ್ಚರಿ ತಂದಿತ್ತು. ನನಗೆ ಗೊತ್ತಿರುವ ಒಬ್ಬ ಉದ್ದಿಮೆದಾರ ತನ್ನ ಮನೆಯಲ್ಲಿ ಮೂವತ್ತು ವಿವಿಧ ತಳಿಗಳ ನಾಯಿಗಳಿವೆ ಎಂದು ಹೇಳಿದಾಗ ಬೆಚ್ಚಿ ಬಿದ್ದಿದ್ದೆ. ಅವುಗಳಿಗಾಗಿ ಒಂದು ಪ್ರತ್ಯೇಕ ಗಾಡಿ ಮಾಡಿದ್ದಾರಂತೆ, ನಾಲ್ಕು ಜನ ಆಳಿದ್ದಾರಂತೆ. ಅದೇನು ಶುನಕ ವ್ಯಾಮೋಹವೋ ನಾ ಕಾಣೆ !
ನನ್ನ ಹೆಂಡತಿಗಂತೂ ನಾಯಿ ಸಾಕುವುದು ಒಂದು ನೋವಿನ ಅನುಭವ. ಅವಳ ತವರು ಮನೆಯಲ್ಲಿ ಅವರೆಲ್ಲಾ ಇಷ್ಟ ಪಟ್ಟು ಬೆಳೆಸಿದ ನಾಯಿ ಅದರ ಆಯುಷ ತೀರಿ ಸತ್ತು ಹೋಯಿತು. ಮನೆಯವರಿಗೆಲ್ಲಾ ಯಾರೋ ಆತ್ಮೀಯರನ್ನ ಕಳೆದುಕೊಂಡ ನೋವು. ಹಾಗಾಗಿ ಇವಳಿಗೆ ಒಂಥರಾ ವೈರಾಗ್ಯ. ತಂದು ಸಾಕಿಕೊಳ್ಳುವುದೇಕೆ, ಸತ್ತಾಗ ಮಿಡುಕುವುದೇಕೆ ? ಎನ್ನುವ ನಿರ್ವೇದ ಭಾವ. ಹಾಗಾಗಿ ಒಮ್ಮೆ ನಮಗೆ ಅದೆಷ್ಟು ನಾಯಿ ಸಾಕಿಕೊಳ್ಳುವ ಅಗತ್ಯ ಬಂದಿದ್ದರೂ ಸಾಕಲಿಲ್ಲ. ಅದಕ್ಕೆ ಕೈ ಹಾಕಲಿಲ್ಲ.
ವಿವಿಧ ತಳಿಗಳ ನಾಯಿಗಳ ಬಗ್ಗೆ ತಿಳಿದಾಗಲೆಲ್ಲಾ ನನಗನಿಸುತ್ತಿತ್ತು, ನಾನು ನನ್ನ ಜೀವನದ ಒಂದು ಪಾರ್ಶ್ವವನ್ನೇ ತಿಳಿಯದೇ ಕಳೆಯುತ್ತಿದ್ದೇನಾ ಎಂದು. ಆದರೇ ನಾಯಿಗಳ ಬಗ್ಗೆ ಇರುವ ನನ್ನ ಗಾಬರಿ ಮಾತ್ರ ನನ್ನ ಅವುಗಳನ್ನು ಹತ್ತಿರ ಸೇರಿಸಲು ಬಿಡಲಿಲ್ಲ. ಹೀಗೇ ಬೆಳೆಗ್ಗೆ ಅಥವಾ ಸಂಜೆಯಲ್ಲಿ ತಿರುಗಾಡಲು ಪಾರ್ಕುಗಳಿಗೆ ಅಥವಾ ರಸ್ತೆಯ ಮೇಲೆ, ನಾಯಿಗಳ ಒಡೆಯರು ತಮ್ಮ ಜೊತೆಗೆ ಕರೆದೊಯ್ಯುವ ತಮ್ಮ ಶ್ವಾನ ಸಾಥಿಗಳನ್ನು ನೋಡುತ್ತಾ ಅದು ಯಾವ ತಳಿಯ ನಾಯಿ ಇರಬಹುದು ಅಂತ ಊಹೆ ಮಾಡುತ್ತಿದ್ದೆ. ಭೂಮಿಗೆ ಸಮಾನಾಂತರವಾಗಿರುವ ಕುಳ್ಳ ಕುನ್ನಿಗಳಿಂದಾ ಹಿಡಿದು ಒಡೆಯನ ಸೊಂಟದ ವರೆಗೂ ಬರುವ ಗ್ರೇಟ್ ಡೇನ್ ಕಾಲಭೈರವನ ವರೆಗೆ ಎಲ್ಲವನ್ನೂ ಕುತೂಹಲದಿಂದ ನೋಡಿದ್ದೆ. ಅಮೆರಿಕಕ್ಕೆ ಹೋದಾಗ ಅಲ್ಲಿ ಸಹ ಇನ್ನೂ ವೈವಿಧ್ಯದ ಶುನಕ ದರ್ಶನವಾಯಿತು. ಮನೆಯಲ್ಲಿ ಅವುಗಳ ಬಗ್ಗೆ ತುಂಬಾ ಚರ್ಚೆಯ ನಂತರ ಆಲ್ಸೇಷಿಯನ್ ಮತ್ತು ಜೆರ್ಮನ್ ಷೆಪ್ಪರ್ಡ್ ಒಂದೇ ಎನ್ನುವ ನಿಜದ ದರ್ಶನವಾಗಿತ್ತು.
ಅಮೆರಿಕದಲ್ಲಿ ಶುನಕಗಳಿಗೆ ಮರ್ಯಾದೆ ಜಾಸ್ತಿ. ಅವುಗಳನ್ನು ತಮ್ಮ ಮಕ್ಕಳಿಗಿಂತ ಮಿಗಿಲಾಗಿ ನೋಡಿಕೊಳ್ಳೂತ್ತಾರೆ ಅಂತ ನನ್ನ ಮಗಳು ಹೇಳಿದಳು. ಅವುಗಳ ತರೇವಾರಿ ಅವಶ್ಯಕತೆಗಳಿಗಾಗಿ ತುಂಬಾನೇ ಪೆಟ್ ಶಾಪ್ ಗಳಿರುತ್ತವೆ. ಅವುಗಳ ತಿಂಡಿ, ಔಷಧಿ, ಸಾಬೂನುಗಳ ಜೊತೆಗೆ ಕಾಲಕ್ಕೆ ತಕ್ಕ ಹಾಗೆ ಬದಲಿಸುವ ದಿರಿಸುಗಳು ಸಹ ಅಲ್ಲಿ ಸಿಗುತ್ತವೆ. ಶೀತಕಾಲದಲ್ಲಿ ಅವುಗಳಿಗೆ ಮೆತ್ತನೆಯ ಬೂಟುಗಳನ್ನು ಹಾಕಿ ಕರೆದು ತರೆತ್ತಾರೆ. ಅವುಗಳಿಗೆ ಚಳಿಯಾಗದಿರಲು ಸ್ವೆಟರ್ ಗಳು ಹಾಕುತ್ತಾರೆ. ಇನ್ನು ಡಾಗ್ ಶೋಗಳಲ್ಲಿ ಅವುಗಳಿಗೆ ಪೈಪೋಟಿಯಾಗಿ ಮಾಡುವ ಸಿಂಗಾರ ನೋಡಲು ನೂರು ಕಣ್ಣು ಸಾಲದು.
ಇದೆಲ್ಲದಕ್ಕೂ ಮಕುಟಾಯಮಾನವೆಂದರೇ ಅವುಗಳನ್ನು ಹೊರಗೆ ಕರೆದೊಯ್ದಾಗ ಅವುಗಳ ದೈನಂದಿನ ಬಹಿರ್ ಕೃತ್ಯಗಳಿಗಾಗಿ ಒಂದು ಪ್ಲಾಸ್ಟಿಕ್ ಚೀಲವನ್ನು ಜೊತೆಗೆ ಕೊಂಡ್ಹೋಗುವುದು. ಅವುಗಳ ಮಲವನ್ನು ಹೆಕ್ಕಿ ಆ ಚೀಲಗಳಲ್ಲಿ ಹಾಕಿ ಅಲ್ಲಲ್ಲಿ ಇದಕ್ಕಾಗಿ ಇಟ್ಟಿರುವ ಡಬ್ಬಿಗಳಲ್ಲಿ ಹಾಕಬೇಕು. ಹೊರಗೆ ಎಲ್ಲೂ ಹೇಸಿಗೆ ಆಗಬಾರದು. ಹಾಗೆ ಮಾಡಿದ್ದು ಕಂಡಲ್ಲಿ ೨೫ ಡಾಲರ್ ಜುರ್ಮಾನೆ ತೆರಬೇಕಾಗಿರುತ್ತದೆ. ಅಂದರೇ ೧೫೦೦ ಸಾವಿರ ರುಪಾಯಿ ಅಂದಾಜಿಗೆ. ಮತ್ತೆ ಅವುಗಳದ್ದು ರಾಜಭೋಗವೆಂದು ನಿಮಗೆ ಅನಿಸುವುದಿಲ್ಲವೇ !
ಇಷ್ಟಕ್ಕೂ ನಾನು ಶ್ವಾನೋಪಾಖ್ಯಾನ ಬರೆಯಲು ಪ್ರೇರಣೆ ನೀಡಿದ್ದು ಒಂದು ಚಿಕ್ಕ ಘಟನೆ. ನಾನು ನನ್ನ ಬೆಳಗಿನ ಸುತ್ತು ಮುಗಿಸಿ ಕಾಲೊನಿಯ ಮನೆಗಳ ಮುಂದಿನಿಂದ ಬರುತ್ತಿದ್ದೆ. ಅಲ್ಲಿ ಒಂದು ದೈತ್ಯಾಕಾರದ ( ನಾನು ನಾಯಿ ಬೆಳೆಸಿಲ್ಲವಾದ್ದರಿಂದ ಒಂದು ಅಳತೆಗೂ ಮೀರಿದ ನಾಯಿ ನನಗೆ ದೈತ್ಯಾಕಾರವಾಗೇ ಅನಿಸುತ್ತದೆ ) ನಾಯಿ ನನ್ನ ನೋಡಿ ಬೊಗಳಲು ಶುರುಮಾಡಿತು. ನಾನು ಅದಕ್ಕೆ ಹೇಗೆ ಅನಿಸಿದೆನೋ ಗೊತ್ತಿಲ್ಲ. ನಾನು ಅದರ ಕಡೆಗೆ ನೋಡಿದೆ. ಅದನ್ನ ಕಟ್ಟಿ ಹಾಕಿದ್ದರು. ಸರಿ. ಬೊಗಳಿಕೊಳ್ಳಲಿ. ನನ್ನಷ್ಟಕ್ಕೆ ನಾನು ಹೋದರೇ ಆಯಿತು ಎಂದುಕೊಳ್ಳುತ್ತಾ ಮುಂದುವರೆಸಿದೆ. ಅದರೇ ಅದರ ಜೊತೆಗೆ ಇದ್ದ ಒಂದು ಚಿಕ್ಕ ನಾಯಿ ತನ್ನ ಗುರುವಿಗೆ ಸಾಥೀ ಕೊಡುತ್ತಾ ನನ್ನ ರಸ್ತೆ ಅಡ್ಡಗಟ್ಟಲು ಬಂತು. ನಾನು ಹಚಾ ಹಚಾ ( ಈ ಮೂದಲಿಕೆ ನಾಯಿಗಳಿಗೆ ಮಾತ್ರ ಮೀಸಲು ) ಎನ್ನುತ್ತಾ ಅದನ್ನ ಓಡಿಸಲು ಪ್ರಯತ್ನಿಸಿದೆ. ಅದು ಇನ್ನೂ ರೇಗುತ್ತಾ ನನ್ನ ಹಿಂದೆ ಬರಲು ಹೋಯಿತು. ಹಿಂದೆ ಬಿದ್ದರೇ ಯಾವ ಮಾಯೆಯಲ್ಲಿ ಕಚ್ಚಿಬಿಡುತ್ತೋ ಎಂಬ ಹೆದರಿಕೆ. ನಾನು ನಿಂತರೇ ಅದೂ ನಿಲ್ಲತ್ತೆ. ಹೊರಟರೇ ಮತ್ತೆ ಸ್ಟಾರ್ಟ್. ಕಲ್ಲು ಹೊಡೆದಹಾಗೆ ಮಾಡಿದರೇ ಇನ್ನೂ ಜೋರಾಗಿ ಬೊಗಳಲು ಶುರು. ಹಿಮ್ಮೇಳ ಅದರ ಗುರು. ಇದೆಲ್ಲಿಯ ಕರ್ಮವಪ್ಪಾ ಎಂದುಕೊಳ್ಳೂತ್ತಿರುವಾಗ, ಮನೆಯ ಮಾಲೀಕರು ಬಂದು ಅದರ ಹೆಸರು ಕೂಗಿ ಕರೆದು ನನ್ನನ್ನ ಬಚಾವ್ ಮಾಡಿದರು. ಆ ಗುಂಗಿನಲ್ಲೇ ಮನೆಗೆ ಬಂದ ನನಗೆ ಇವುಗಳ ಬಗ್ಗೆ ನನ್ನ ಅನಿಸಿಕೆಗಳನ್ನ ಬರೆದಿಡುವ ಮನಸಾಗಿ ಇದೋ ಈ ಲೇಖನ ಬರೆದದ್ದು.
ನಾಯಿ ಕಚ್ಚಿದರೇ ಅದಕ್ಕೆ ನಡೆಯಬೇಕಾದ ಉಪಚಾರ ಸಹ ನಮ್ಮ ತಲೆ ಕೆಡಿಸುತ್ತದೆ. ಈಗೀಗ ಅದೇನೋ ರಾಬೀಪೂರ್ ಎನ್ನುವ ಮದ್ದು ಬಂದಿದೆ ಎನ್ನುವುದು ಬಿಟ್ಟರೇ, ಹಿಂದಿನ ದಿನಗಳಲ್ಲಿ ಹೊಕ್ಕಳ ಸುತ್ತಲೂ ಹಾಕಿಸಿಕೊಳ್ಳಬೇಕಾದ ಹದಿನಾಲ್ಕು ಇಂಜೆಕ್ಷನ್ ಗಳು ನಾಯಿ ಕಡಿತಕ್ಕಿಂತ ಜಾಸ್ತಿ ಹೆದರಿಸುತ್ತಿದ್ದವು. ನಂತರ ಕಚ್ಚಿದ ನಾಯಿಯ ಮೇಲೆ ಗುಮಾನಿ ಇಡಬೇಕು. ಅದು ಹುಚ್ಚು ನಾಯಿಯಾಗಿರಬಾರದು. ಹುಚ್ಚು ನಾಯಿ ಕಡಿದು ನಾಯಿಯ ತರ ಬೊಗಳುತ್ತಾ ಸತ್ತವರ ಕತೆಗಳು ತುಂಬಾ ಪ್ರಚಲಿತವಾಗಿದ್ದವು ಆಗ. ಅವರ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು, ಅವರನ್ನ ಕಂಬಕ್ಕೆ ಕಟ್ಟಿ ಹಾಕುತ್ತಿದ್ದರು. ಇಡೀರಾತ್ರಿ ಕೆಟ್ಟದಾಗಿ ಬೊಗಳಿತ್ತಿದ್ದರು ಎನ್ನುವ ಸುದ್ದಿಗಳಿಗೇನೂ ಬರವಿರಲಿಲ್ಲ. ಈಕಾರಣಕ್ಕಾಗಿ ನಾಯಿಯನ್ನ ಸಾಕುವುದಿರಲಿ, ಹತ್ತಿರ ಬಿಟ್ಟುಕೊಳ್ಳುವುದು ಸಹ ತುಂಬಾ ಡೇಂಜರ್ರಾಗಿ ಕಾಣುತ್ತಿತ್ತು. ಈಗ ಸಹ ಈ ಹೊಸ ಲಸಿಕೆಯನ್ನು ಎಷ್ಟು ಜನ ಹಾಕಿಸಿಕೊಂಡಿದ್ದಾರೆ, ಅವರಿಗೆ ಅದು ಎಷ್ಟರ ವರೆಗೆ ಗುಣ ಕಾಣಿಸಿದೆ ಎಂದು ಇನ್ನೂ ಸರಿಯಾದ ಮಾಹಿತಿ ಗೊತ್ತಿಲ್ಲ. ಆದರೇ ಹದಿನಾಲ್ಕು ಇಂಜಕ್ಷನ್ ಬೇಡ ಎನ್ನುವುದು ಒಂತರಾ ನೆಮ್ಮದಿ.
ಇನ್ನು ಈ ನಾಯಿಗಳಿಗೆ ಸೈಕಲುಗಳ ಮತ್ತು ದ್ವಿಚಕ್ರ ವಾಹನಗಳ ಹಿಂದೆ ಬೀಳುವ ಅಭ್ಯಾಸವಿರುತ್ತದೆ. ಕಾರಿನ ಹಿಂದೆ ಸಹ ಬೀಳುತ್ತವೆ ಆದರೇ ಅವುಗಳಲ್ಲಿ ಕೂತವರು ಸೇಫ್. ಹಾಗಾಗಿ ಪ್ರಹಸನಗಳಾಗುವುದಿಲ್ಲ. ಆದರೇ ದ್ವಿಚಕ್ರವಾಹನಗಳ ಸವಾರರ ಹಿಂದೆ ಬಿದ್ದು ಅವರಿಗೂ ಸಹ ಕೆಲ ಕಹಿ ಅನುಭವಗಳನ್ನೊದಗಿಸಿವೆ ಎಂದು ಹೇಳಬಹುದು. ನಾನು ಮತ್ತು ನನ್ನವಳು ಒಮ್ಮೆ ದೇವಸ್ಥಾನದಿಂದ ಮನೆಗೆ ಬರುವಾಗ ಒಂದು ಸಂದಿಯಲ್ಲಿ ಒಂದು ಚಿಕ್ಕ ನಾಯಿ ನಮ್ಮ ಹಿಂದೆ ಬಿದ್ದಿತ್ತು. ಚಿಕ್ಕದು ಅಂತ ಯಾಕೆ ಪ್ರತ್ಯೇಕವಾಗಿ ಹೇಳುತ್ತಿದ್ದೇನೆ ಅಂದರೇ ಅದು ಚಿಕ್ಕದಾಗಿದ್ದರಿಂದ ಅದರ ವೇಗ ತುಂಬಾ ಜಾಸ್ತಿಯಾಗಿತ್ತು. ನಾನು ಗಾಡಿಯ ವೇಗ ಜಾಸ್ತಿ ಮಾಡಿದರೂ ಅದು ನಮ್ಮನ್ನ ಬಿಡಲಿಲ್ಲ. ನನ್ನವಳ ಸೀರೆಯ ಅಂಚನ್ನ ಹಿಡಿದುಬಿಟ್ಟಿತ್ತು. ಅವಳಿಗೂ ಹೆದರಿಕೆ, ನಂಗಂತೂ ಗಾಡಿ ಬಿಡುವುದರ ಜೊತೆಗೆ ಹಿಂದೆ ಬಿದ್ದ ಈ ಅವಾಂತರವನ್ನ ನಿಭಾಯಿಸಬೇಕಾಯಿತು. ಯಾರೋ ಅದಕ್ಕೆ ಕಲ್ಲು ತೂರಿ ಬಿಡಿಸುವುದರಲ್ಲಿ ನಾವಿಬ್ಬರೂ ಆಯ ತಪ್ಪಿ ಬೀಳುವುದೇ ಆಯಿತು. ಪುಣ್ಯ ಜಾಸ್ತಿ ಪೆಟ್ಟಾಗಲಿಲ್ಲ. ಸ್ವಲ್ಪದರಲ್ಲೇ ಬಚಾವಾಯಿತು. ನಾನು ಓದಿಕೊಂಡ ಸಣ್ಣ ಊರಿನಲ್ಲಿ ಇದೇ ತರದ ನಾಯಿಯ ಕಾಟವಾಗಿದ್ದು, ಯಾವುದೋ ಶಾಲೆಹುಡುಗನನ್ನ ಕಚ್ಚಿ ಆ ಕೇರಿಯ ಜನ ಕೋಲುಗಳಿಂದ ಅದನ್ನು ಕೊಂದಿದ್ದರು. ನಾನು ಮಾತ್ರ ಈಗಲೂ ಗಾಡಿ ಓಡಿಸುವಾಗ ನಾಯಿ ಕಂಡರೇ ತುಂಬಾ ನಿಧಾನವಾಗಿ ಓಡಿಸುತ್ತಾ ಅದರ ಪ್ರಭಾವಲಯವನ್ನು ದಾಟುತ್ತೇನೆ. ಎಷ್ಟಾದರೂ ಸ್ವಾನುಭವವಲ್ಲವೇ ? ಮತ್ತೆ ಈ ನಾಯಿಗಳು ತಮಗೆ ಏನಾದ್ರೂ ಈ ವಾಹನಗಳಿಂದ ಪೆಟ್ಟಾಗಿದ್ದರೇ ಅದನ್ನು ನೆನಪಿನಲ್ಲಿಟ್ಟುಕೊಂಡು ಸವಾರರನ್ನ ಹಿಂಬಾಲಿಸುತ್ತವಂತೆ. ಅಂದರೆ ಯಾರೋ ಮಾಡಿದ ತಪ್ಪಿಗೆ ಯಾರೋ ದಂಡ ತೆರುವುದು. ಅಷ್ಟೇ ಅಲ್ಲ, ಅವುಗಳಿಗೆ ಸುನಿಶಿತ ಜ್ಞಾಪಕ ಶಕ್ತಿ ಇದೆ ಎನಿಸುತ್ತದೆ. ನನ್ನ ಚಿಕ್ಕಪ್ಪನ ಮಗ ತನ್ನ ಮನೆಯ ಹತ್ತಿರದ ನಾಯಿಯನ್ನ ಯಾವಾಗ ಕೆಣಕಿದ್ದನೋ ಗೊತ್ತಿಲ್ಲ. ಅದು ಅವನು ಹೊರಗೆ ಬಂದಾಗಲೆಲ್ಲಾ ಒಮ್ಮೆ ಗುರುಗುಟ್ಟಿ ಅಟ್ಟಿಸುತ್ತಿತ್ತು. ಯಾರೂ ಜೊತೆ ಇಲ್ಲದೇ ಅವನಂತೂ ಹಲವು ತಿಂಗಳು ಒಬ್ಬನೇ ಹೊರಗೆ ಹೋಗುತ್ತಿರಲಿಲ್ಲ.
ಪ್ರಭಾವಲಯದ ಮಾತು ಬಂದಾಗ ಇನ್ನೊಂದು ವಿಷಯ ಚರ್ಚೆಗೆ ಬರುತ್ತದೆ. ನಾಯಿಗಳ ಜಗಳಕ್ಕೂ ಈ ಪ್ರಭಾವಲಯಕ್ಕೂ ತುಂಬಾ ನಿಕಟ ಸಂಬಂಧ. ಪ್ರತಿ ನಾಯಿಯೂ ತನ್ನ ಪ್ರಭಾವಲಯವನ್ನ ಏರ್ಪಡಿಸಿಕೊಳ್ಳುತ್ತದಂತೆ. ಸಾಕುನಾಯಿಗಳಿಗೆ ತಾವಿರುವ ಮನೆಯೇ ಈ ವ್ಯಾಪ್ತಿ ಪ್ರದೇಶ ವಾಗಿದ್ದರೇ, ಬೀದಿ ನಾಯಿಗಳಿಗೆ ಯಾವುದು ಮತ್ತು ಎಲ್ಲಿಯವರಗೆಎನ್ನುವ ಪ್ರಶ್ನೆ? ಈ ಸಂದಿಗ್ಧವೇ ಜಗಳಗಳ ನಾಂದಿ. ಪ್ರತಿ ನಾಯಿ ಅಥವಾ ಆ ಬೀದಿನಾಯಿಗಳ ಗುಂಪು ಒಂದು ನಿರ್ದಿಷ್ಟ ಪ್ರದೇಶವನ್ನು ತಮ್ಮ ವ್ಯಾಪ್ತಿಯ ಪ್ರದೇಶವಾಗಿ ನಿರ್ದೇಶಿಸಿಕೊಳ್ಳುತ್ತವೆಯಂತೆ. ಆ ವ್ಯಾಪ್ತಿ ಪ್ರದೇಶಕ್ಕೆ ಬೇರೊಂದು ನಾಯಿ ಬಂದಾಗ ಅವುಗಳು ಬೊಗಳುತ್ತಾ ತಮ್ಮ ನಿಲುವನ್ನು ತೋರಿಸುತ್ತವೆ, ನೀನು ನಿನ್ನ ಹದ್ದು ಮೀರಿ ಬಂದಿದೀಯಾ ಅಂತ. ಬಾಲ ಮುದುರಿಕೊಂಡು ಓಡಿದರೇ ಸರಿ. ಇಲ್ಲಾ ಇದ್ದೇ ಇದೆಯಲ್ಲಾ ನಾಯಿತರಾ ಕಚ್ಚಾಟ. ಮನೆ ನಾಯಿಗಳು ತಮ್ಮ ಮನೆಯನ್ನು ತುಂಬಾ ಚೆನ್ನಾಗಿ ಗುರುತು ಮಾಡಿಕೊಂಡು ಯಾರು ಅದನ್ನ ದಾಟಿ ಒಳ ಬಂದರೂ ಅವರನ್ನ ಬಿಡುವುದಿಲ್ಲ. ಬೀದಿನಾಯಿಗಳು ಮಾತ್ರ ತಮ್ಮ ಈ ಪ್ರದರ್ಶನ ನಾಯಿಗಳಿಗೆ ಮಾತ್ರ ಮೀಸಲಿಡುತ್ತವೆ. ಯಾಕೆ ಅಂದರೇ ಅವುಗಳ ವ್ಯಾಪ್ತಿ ಪ್ರದೇಶವನ್ನು ನಿರಂತರ ಮನುಷ್ಯರು ನಮ್ಮ ನಿಯಂತ್ರಣ ರೇಖೆಯ ಹತ್ತಿರ ಪಾಕಿಸ್ತಾನ್ ಯಾವಾಗಲೂ ಕಿತಾಪತಿ ನಡೆಸುವ ಹಾಗೆ ದಾಟುತ್ತಲೇ ಇರುತ್ತಾರೆ.
ನಾಯಿಗಳ ಬಗ್ಗೆ ತುಂಬಾ ತೆಗಳಿದ ಹಾಗಾಯಿತಲ್ಲವೇ ? ಇದನ್ನ ಶುನಕ ಪ್ರೇಮಿಗಳು ಸಲೀಸಾಗಿ ತೆಗೆದುಕೊಳ್ಳಲಿಕ್ಕಿಲ್ಲ. ಅದಕ್ಕೇ ಈ ಕೆಳಗಿನ ಸಾಲುಗಳು. ನಾಯಿಗಳು ಸಮಾಜ ಸೇವಕರಾಗಿ ಖ್ಯಾತಿ ಗಳಿಸಿವೆ. ತುಂಬಾ ವಿಶ್ವಾಸದ ಪ್ರಾಣಿ. ಅನ್ನ ಕೊಟ್ಟವರ ಮನೆ ಜತನವಾಗಿ ಕಾಯುತ್ತವೆ. ನುಸುಳಿ ಬಂದವರನ್ನ ನೆಲ ಕಚ್ಚಿಸುತ್ತವೆ. ಅವುಗಳ ಘ್ರಾಣ ಶಕ್ತಿ ತುಂಬಾ ತೀಕ್ಷ್ಣವಾಗಿದ್ದು, ಪೋಲಿಸ್ ಇಲಾಖೆಗೆ “ಮೂಸುವನಾಯಿ”ಗಳಾಗಿ ತುಂಬಾ ಸೇವೆ ಗೈಯುತ್ತವೆ. ಕರ್ನಾಟಕದ ಮುಧೋಳ್ ನಾಯಿಗಳು ಈ ದಿಶೆಯಲ್ಲಿ ರಾಜ್ಯಕ್ಕೆ ಹೆಸರು ತಂದಿವೆ. ಮತ್ತೆ ಪುರಾಣದ ಪ್ರಕಾರ ಎಲ್ಲ ತಮ್ಮಂದಿರೂ ಮತ್ತು ಹೆಂಡತಿ ಅಗಲಿದಮೇಲೆ ಧರ್ಮರಾಯನಿಗೆ ಕೊನೆ ತನಕ ಜೊತೆಯಲ್ಲಿ ಬಂದ ಕೀರ್ತಿ ಶುನಕದ್ದೇ ಅಲ್ಲವೇ?
ಇನ್ನು ಉಪಾಖ್ಯಾನಕ್ಕೆ ಮಂಗಳ ಹಾಡುವ ಮುನ್ನ ಒಂದೆರಡು ನಗೆಹನಿಗಳು ಇವುಗಳ ಬಗ್ಗೆ.
ಒಮ್ಮೆ ಒಬ್ಬರು ಒಂದು ಒಳ್ಳೆ ನಾಯಿಯನ್ನ ತಮ್ಮ ಜೊತೆ ತಿರುಗಾಡಿಸಲು ಕರೆದೊಯ್ದಿದ್ದರು. ದಾರಿಯಲ್ಲಿ ಸಿಕ್ಕ ಸ್ನೇಹಿತನೊಬ್ಬ ಕೇಳಿದ “ ಏನು ಕತ್ತೆಯ ಜೊತೆ ಹೊರಟಿದಿಯಲ್ಲಾ ?” ಅಂತ. ಇವನಿಗೆ ಕೋಪ ಬಂದು “ ಕಣ್ ಕಾಣ್ಸಲ್ವಾ ? ಇದು ನಾಯಿ “ ಎಂದ. ಅದಕ್ಕೆ ಅವನ ಸ್ನೇಹಿತ “ ನಾನು ನಾಯಿಯ ಜೊತೆ ಮಾತಾಡ್ತಿರೋದು “ ಅಂದ. ಅವರಿಬ್ಬರ ನಡುವೆ ಏನ್ ಹಳೇ ಸೇಡಿತ್ತೋ ಏನೋ !
ಮತ್ತೊಂದು ಇದೇ ತರ ಹೊರಗಡೆ ತಿರುಗುತ್ತಿರವವರಿಗೆ ನಾಯಿ ಕಚ್ಚಿತು. ಅವರು ತಮ್ಮ ಕೈಲಿದ್ದ ಕೊಡೆಯಿಂದ ನಾಯಿಗೆ ನಾಲ್ಕು ಬಾರಿಸಿದರು. ನಾಯಿಗೆ ಪೆಟ್ಟಾಯಿತು. ನಾಯಿಯ ಮಾಲೀಕ ಕೋರ್ಟಿಗೆ ಹೋದ. ಕೇಸು ವಿಚಾರಣೆಗೆ ಬಂದಾಗ ಆರೋಪಿ ತನ್ನ ವಾದವನ್ನು ಮುಂದಿಟ್ಟ, ತಾನು ಹೊಡೆದದ್ದು ಯಾಕೆ ಅಂತ. ಅದಕ್ಕೆ ಮಾಲೀಕನ ಹತ್ತಿರ ಮಾತಾಡಲು ಏನೂ ಇರಲಿಲ್ಲ. ಆದರೆ ಅವನು “ ಸ್ವಾಮೀ ! ನನ್ನ ನಾಯಿ ಕಚ್ಚಿದ್ದು ಹೌದು. ಆದರೇ ಅವರು ತಮ್ಮ ಕೊಡೆಯ ಮೊನಚಾದ ಕಡೆಯಿಂದ ಹೊಡೆದಿದ್ದಾರೆ. ಅದಕ್ಕೇ ಅಷ್ಟು ಪೆಟ್ಟು. ಅವರು ಕೊಡೆಯ ಇನ್ನೊಂದು ತುದಿಯಿಂದ ಹೊಡೆಯಬಹುದಾಗಿತ್ತು. ಆಗ ನನ್ನ ನಾಯಿಗೆ ಇಷ್ಟೊಂದು ಪೆಟ್ಟಾಗುತ್ತಿರಲಿಲ್ಲ. “ ಎಂದು ತಮ್ಮ ವಾದ ಮುಂದಿಟ್ಟ. ಅದಕ್ಕೆ ಆರೋಪಿ ತಕ್ಷಣ ಹೇಳಿದ.
“ಆಗಬಹುದು ಸ್ವಾಮೀ ! ಅವರ ನಾಯಿ ನನ್ನನ್ನ ತನ್ನ ಬಾಲದಿಂದ ಕಚ್ಚಿದ್ದರೇ ನಾನು ಹಾಗೇ ಮಾಡಬಹುದಾಗಿತ್ತು “ ಎಂದನಂತೆ.
ನಮ್ಮ ಜೊತೆಯಲ್ಲಿ, ಮನೆಗಳಲ್ಲಿ, ಮನಗಳಲ್ಲಿ ತಮ್ಮ ಸ್ಥಾನ ಕರಾರು ಮಾಡಿಕೊಂಡ ಜಂತುಗಳಲ್ಲಿ ನಾಯಿಗೆ ಮೊದಲನೇ ಸ್ಥಾನ ಸಿಕ್ಕುತ್ತದೆ. ಇನ್ನೂ ಹಲವಾರು ಸಾಕು ಪ್ರಾಣಿಗಳು ಇದ್ದರೂ ಅವ್ಯಾವೂ ನಾಯಿಯ ಗುಣಗಣಗಳ ತುಲನೆಗೆ ಬರುವುದಿಲ್ಲ.
ನನಗಲ್ಲದಿದ್ದರೂ ಕೆಲವಾರು ಜನರಿಗೆ ಇದು ಸಂಗಾತಿ, ಜೀವನ್ ಸಾಥಿ ! ಅಲ್ಲವೇ ?
**
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್