- ಸೋಲಿನ ಗೆಲುವು - ಜನವರಿ 14, 2021
ಸೋಲು ಎಂಬುದು ಬಹಳಷ್ಟು ಮಂದಿಗೆ ಎಂದಿಗೂ ಒಪ್ಪಲಾಗದ ಕಹಿಸತ್ಯ. ಗೆಲುವಿನ ಸಿಹಿ ಬಯಸುವವರು ಸೋಲಿನ ಕಹಿಯನ್ನು ಸವಿಯುವುದಿಲ್ಲ. ಸೋಲನ್ನು ಕಹಿ ಎನ್ನುವುದಕ್ಕಿಂತ, ನಾವು ಅದನ್ನು ಆ ಭಾವದಲ್ಲಿಯೆ ನೋಡುತ್ತೇವೆ. ಈ ಸೋಲು ಗೆಲುವಿನ ಸಿಹಿಕಹಿಯನ್ನು ಹೇಗೆ ಸ್ವೀಕರಿಸಬಹುದು ಎಂಬುದನ್ನು ತಿಳಿಸಲು ಇಲ್ಲಿ ಒಂದು ನಿದರ್ಶನವಿದೆ.
ರೇಖಾ ಎಂಬ ಹುಡುಗಿ ಬದುಕಿನ ಪೂರ್ತಿ ಸೋಲುಗಳನ್ನು ಕಂಡವಳು. ಸರಿಸುಮಾರು ಮೂರು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಉದ್ಯೋಗ ಸಂದರ್ಶನಗಳಲ್ಲಿ ಭಾಗವಹಿಸಿ ಯಾವ ಕಂಪನಿಗಳಲ್ಲೂ ಆಯ್ಕೆಯಾಗದೆ ನಿರುದ್ಯೋಗಿಯಾಗಿ ಉಳಿದಳು. ಸಂಪೂರ್ಣ ಹತಾಶಳಾದ ರೇಖಾ ಕೊನೆಯದಾಗಿ ಒಂದು ನಿರ್ಧಾರಕ್ಕೆ ಬಂದಳು. ಇಂದು ಹೋಗುತ್ತಿರುವ ಕಂಪನಿಯಲ್ಲಿ ಕೆಲಸ ಸಿಗಲಿಲ್ಲವಾದಲ್ಲಿ ಇದೇ ನನ್ನ ಕಡೆಯ ಪ್ರಯತ್ನ, ನಂತರ ಸಾವಿನ ಮನೆಯ ಕದ ತಟ್ಟುವುದೇ ಸರಿ ಎಂದುಕೊಂಡಳು.
ಬಹುರಾಷ್ಟ್ರೀಯ ಕಂಪನಿಯಲ್ಲಿ ೩ ಹಂತದ ಸಂದರ್ಶನ ನೀಡಿ ದೇವರಿಗೆ ಕೈ ಮುಗಿದು ಕುಳಿತಳು. ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವಳಿಗೆ ಮತ್ತೆ ಕಹಿ ಸುದ್ದಿ. ಇಲ್ಲಿಯೂ ಆಯ್ಕೆಯಾಗಲಿಲ್ಲ. ಮುಂದೇನು….
ದುಃಖದ ಕಟ್ಟೆಯೊಡೆದು ಬರುತ್ತಿದ್ದ ಕಣ್ಣೀರನ್ನು ಒರಸಿಕೊಳ್ಳುತ್ತಾ ಮನೆಗೆ ಬಂದವಳೇ ದಡಾರನೇ ಬಾಗಿಲು ಮುಚ್ಚಿ, ಫ್ಯಾನ್ ಗೆ ಅಲ್ಲೇ ಇದ್ದ ಅಮ್ಮನ ಸೀರೆ ಹಾಕಿ ಉರುಳು ಸಿದ್ಧಪಡಿಸತೊಡಗಿದಳು. ಬೆಳಿಗ್ಗೆಯಿಂದ ಹೋಗಿದ್ದ ಕರೆಂಟ್ ಆಗೆ ತಾನೆ ಬಂದು, ಫ್ಯಾನ್ ಗಿರಗಿರ ಸುತ್ತಿ ಸೀರೆ ಸಿಲುಕಿಕೊಂಡಿತು. ಬೆಳಿಗ್ಗೆ ಕೂದಲು ಒಣಗಿಸಿಕೊಳ್ಳಲು ಹಾಕಿದ್ದ ಫ್ಯಾನ್ ಆಫ್ ಮಾಡದೇ ಹೊರಟ ತನ್ನ ನೆನಪಿನ ಶಕ್ತಿ ನೆನೆದು ಮತ್ತಷ್ಟು ಕುಪಿತಗೊಂಡು ಸೀದಾ ಬಚ್ಚಲಮನೆಗೆ ಓಡಿ ಫಿನಾಯಿಲ್ ಹುಡುಕಿದಳು. ಮತ್ತೆ ನೆನಪಾಯಿತು, ಬೆಳಿಗ್ಗೆ ಅಮ್ಮ ಕೊಟ್ಟ ರೇಶನ್ ಲಿಸ್ಟಿನಲ್ಲಿ ಫಿನಾಯಿಲ್ ಹೆಸರಿತ್ತು, ಅಂಗಡಿಗೆ ಹೋಗದೇ ದುಃಖದಲ್ಲಿ ಸೀದಾ ಮನೆಗೆ ಬಂದು ಈಗ ಹುಡುಕಿ ಪ್ರಯೋಜನವೇನು? ಮತ್ತೆ ಕುಸಿದು ಅಳತೊಡಗಿದಳು. ಒಂದು ವಾರದಿಂದ ತಯಾರಿ ನಡೆಸಿ ಅತ್ಯುತ್ತಮವಾಗಿ ಸಂದರ್ಶನ ನೀಡಿದರೂ ಕೆಲಸ ಸಿಗದಿರಲು ಕಾರಣವೇನು, ಎಲ್ಲಾ ನನ್ನ ದುರಾದೃಷ್ಟ, ಇಷ್ಟು ಸೋತ ಮೇಲೆ ಬದುಕಿ ಏನು ಪ್ರಯೋಜನ, ಸೀದಾ ರೈಲ್ವೇ ಹಳಿಯ ಮೇಲೆ ಮಲಗಿ ಬಿಡೋಣ ಎಂದುಕೊಂಡಳು, ಕೊಂಚ ಭಯವಾಯಿತು. ಬೇಡ ಬೇಡ ನದಿ ತೀರಕ್ಕೆ ಹೋಗೋಣ, ಸೀದಾ ಬಿದ್ದರೆ ಈ ಕಷ್ಟವೇ ಇರುವುದಿಲ್ಲ ಎಂದುಕೊಂಡವಳೇ ಮನೆಯ ಬಾಗಿಲಿಗೆ ಬೀಗ ಜಡಿದು, ಕೊನೆಯದಾಗಿ ಒಮ್ಮೆ ಮನೆಯನ್ನು ಕಣ್ತುಂಬಿಕೊಂಡು ಅತ್ತಳು. ಏನೇನೋ ಹಲುಬಿ ನದಿಯತ್ತ ಹೊರಟಳು.
ನದಿ ತೀರದಲ್ಲಿ ನಿಂತು ಬದುಕು ಕೊನೆಗೊಳಿಸಿಕೊಳ್ಳುವ ಕಡೇ ಕ್ಷಣದಲ್ಲಿ ಒಮ್ಮೆ ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದಳು. ಅಷ್ಟರಲ್ಲಿ ಫೋನ್ ರಿಂಗಣಿಸಿತು. ಯಾವುದೋ ಅನ್ಯ ನಂಬರಿನ ಕರೆ. ಉತ್ತರಿಸುವ ಮನಸ್ಸಿಲ್ಲದಿದ್ದರೂ ಕಡೆಯದಾಗಿ ಮಾತಾಡೋಣ ಎಂದುಕೊಳ್ಳುತ್ತಾ ಕರೆ ಸ್ವೀಕರಿಸಿದಳು. ಅದೇ ಬಹುರಾಷ್ಟ್ರೀಯ ಕಂಪೆನಿಯ ಎಚ್.ಆರ್ , “ನೀವು ಕೆಲಸಕ್ಕೆ ಆಯ್ಕೆಯಾಗಿದ್ದೀರಿ, ನಿಮಗೆ ಈ ಮೊದಲು ತಿಳಿಸುವಾಗ ಸಣ್ಣ ಗೊಂದಲದಿಂದ ತಪ್ಪಾಗಿ ತಿಳಿಸಿದ್ದೆವು. ಹೆಸರಿನಲ್ಲಿ ಸ್ವಲ್ಪ ಗೊಂದಲವಾಗಿತ್ತು. ಕ್ಷಮೆ ಇರಲಿ. ಮುಂದಿನ ವಾರ ಕೆಲಸಕ್ಕೆ ಸೇರಿ, ನಾಳೆ ಕಛೇರಿಗೆ ಬಂದು ಫಾರ್ಮಾಲಿಟಿ ಮುಗಿಸಿ” ಎಂದು ಹೇಳಿದರು.
ಅಬ್ಬಬ್ಬಾ! ಇವಳ ಖುಷಿ ಹೇಳಬೇಕೇ, ಅಲ್ಲೇ ಕುಸಿದು ಕುಳಿತಳು. ಥ್ಯಾಂಕ್ಯೂ ಮೇಡಂ ಎಂಬುದನ್ನು ಬಿಟ್ಟು ಬೇರೇನು ಹೇಳದಾದಳು, ಒಂದಿಷ್ಟು ಅತ್ತು ಸುಧಾರಿಸಿಕೊಂಡು, ಸೀದಾ ಮನೆಗೆ ಓಡಿದಳು.
ವಿಪರ್ಯಾಸ ಎಂದರೆ ಈ ಬಾರಿ ಇವಳು ಸಾಯುವಲ್ಲಿ ಸೋತರೂ, ಬದುಕಲ್ಲಿ ಗೆದ್ದಿದ್ದಳು. ಬದುಕಿನ ಸೋಲು ಸಾವಿಗೆ ಮುನ್ನುಡಿ ಬರೆದರೆ, ಸಾವು ಕೂಡ ಬರಲೊಪ್ಪದೆ ಇವಳನ್ನ ಸೋಲಿಸತೊಡಗಿತು. ಸಾಯುವ ಪ್ರತಿ ಹಂತದಲ್ಲಿ ತೊಡಕು ಬಂದಾಗ, ಸಾಯಬಹುದಾದ ಇತರ ಮಾರ್ಗಗಳನ್ನು ಹುಡುಕಿದ ರೇಖಾ, ಜೀವನದಲ್ಲಿ ಸೋತಾಗ ಆಯ್ಕೆ ಮಾಡಿಕೊಂಡಿದ್ದು ಒಂದೇ ದಾರಿ ಅದು ಸಾವು.
ಜೀವನದಲ್ಲಿ ಎದುರಾಗುವ ಸೋಲುಗಳು ಹತಾಶೆಗೆ ತಳ್ಳಿ ಎದುರು ಇರುವ ಸಾವಿರ ಅವಕಾಶಗಳನ್ನು ಮುಚ್ಚಿ ಸಾವಿನ ದಾರಿ ತೋರಿಸಿಬಿಡುತ್ತದೆ. ರೇಖಾ ಮಾತ್ರ ಅಲ್ಲ, ಇವಳಂತೆ ಹಲವರು ಇಂತಹ ನಿರ್ಧಾರಗಳನ್ನು ಬಹುಬೇಗ ತೆಗೆದುಕೊಳ್ಳುತ್ತಾರೆ. ಚಿಕ್ಕ ಚಿಕ್ಕ ಸೋಲನ್ನು ಎದುರಿಸಲಾಗದೇ ಹೊರಟು ಹೋದವರಿದ್ದಾರೆ. ಆದರೆ ಸೋಲು ಪ್ರತಿಬಾರಿಯೂ ಕಹಿಯ ಅನುಭವವಲ್ಲ, ಕೆಲವೊಮ್ಮೆ ಬದುಕಿನ ಆರಂಭ….
ಒಮ್ಮೊಮ್ಮೆ ಸೋಲು ಅನಿವಾರ್ಯ, ಅನಿಶ್ಚಿತ. ಆದರೆ ಸೋತೆನೆಂದು ಕೊರಗಿ ಸಾವಿನ ದಾರಿ ಹಿಡಿಯಬಾರದು, ಏಕೆಂದರೆ ರೇಖಾ ಸಾಯುವಲ್ಲಿ ಸೋಲುಂಡ ಹಾಗೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಒಂದು ವೇಳೆ ರೇಖಾಳಿಗೆ ಕರೆ ಬರುವುದು ಸ್ವಲ್ಪ ತಡವಾಗಿದ್ದರೂ ಸಾವು ಗೆಲುವು ಕಂಡು, ಬದುಕು ಮುಳುಗುತ್ತಿತ್ತು. ಒಂದಂತೂ ನಿಜ, ಗೆಲ್ಲುವ ದಾರಿಯಲ್ಲಿ ಸೋಲೆಂಬ ಊರನ್ನು ದಾಟಿಯೇ ಸಾಗಬೇಕು, ಸನ್ನದ್ಧರಾಗಿರಬೇಕು ಅಷ್ಟೇ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸೋಲನ್ನು ಗೆಲುವಾಗಿಸಬೇಕು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ