ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೀಗೊಂದು ಪ್ರೇಮ

ಎಂದೋ ಕಮರಿ ಹೋದ ಒಲವಿನ ಸಸಿಗೆ ನವಿರಾಗಿ ಹನಿ ಎರೆವ ಸೀಮಿತ ಪ್ರಯತ್ನ ಮಂಜುಳಾ ಹಿರೇಮಠ ಅವರದ್ದು..

ಈ ವರ್ಷದ ಈ ದಿನವಾದರೂ
ಸೋಕಿಬಿಡಬೇಕು
ನಾನು ಅವನನು..
ಅವನು ನನ್ನನು..
ಆ ಕಾಲದ ಆಡದೆ ಉಳಿಸಿದ್ದ
ಎಷ್ಟೊಂದು ಮಾತುಗಳನ್ನು ಸುರಿಸಿ
ಹಗುರಾಗಿಬಿಡಬೇಕು

ಇದು ಹೀಗೆಯೇ ಆಗಬೇಕೆಂದು
ಕರಾರು ಮಾಡಿಕೊಂಡು
ಅವನಿಷ್ಟದ ಹಸಿರು ಸೀರೆಯಲಿ ನಾನು
ನನ್ನಿಷ್ಟದ ಕಡುನೀಲಿ ಅಂಗಿಯಲಿ ಅವನು

ನಮ್ಮಅದೇ ಹಳೆಯ
ಖಾಸಗಿ ಜಾಗವನ್ನು ತಲುಪಿ
ಎದುರು ಬದುರಾಗಿ
ಕುಳಿತೆವು

ಮಾತು ಪ್ರಾರಂಭವಾಗಿ
ತಲುಪಬೇಕಾದ ಗುರಿ ಸೇರದೆ
ಎಲ್ಲಿಂದ ಎಲ್ಲಿಗೋ ಹೊರಟು
ಹೆಂಡತಿ ಮಾಡುವ ಹೊಸ ರುಚಿಯ
ಅವಾಂತರಗಳ ಕುರಿತಂತೆ
ಅವನು ಹೇಳುತ್ತಾ ಹೋದಂತೆ
ನಾನು ಮನಸಾರೆ ನಗುತ್ತ ಕಿವಿಯಾದೆ…


ಮಗನ ಆಟೋಟಗಳ ಕುರಿತು
ಹುಮ್ಮಸ್ಸಿನಿಂದ ನಾನು
ಬೀಗುತ್ತಾ ವಿವರಿಸಿದಂತೆಲ್ಲ
ಅವನು ಅಚ್ಚರಿಯಿಂದ
ಮೆಚ್ಚುಗೆ ಸೂಸುತ್ತಾ ಹೋದ

ಹೀಗೆ ಪರಸ್ಪರ ತೆರೆದುಕೊಳ್ಳುತ್ತಾ
ಯಾವುದೊ ವಿಚಾರಕ್ಕೆ
ನಾನು ಹನಿಗಣ್ಣಾದೆ…
ಅವನು ಮೃದುವಾಗಿ
ನನ್ನ ತಲೆ ನೇವರಿಸಿದ
ಹೀಗೆ ನಮ್ಮ ಪ್ರೇಮವನ್ನು
ಗಟ್ಟಿಗೊಳಿಸಿಕೊಂಡು
ಎದ್ದು ನಡೆದೆವು