- ಹೂವಾಡಗಿತ್ತಿ - ನವೆಂಬರ್ 3, 2021
ಸೂಜಿ ಮಲ್ಲಿಗೆಯ ಮೊಗ್ಗು
ಬಿರಿವ ಗಳಿಗೆಯಲಿ
ನಾಚಿ ನಿಂತಿತ್ತು
ಕೆಂಡ ಸಂಪಿಗೆಯ ಘಮಲು
ಕೊಳ್ಳಬಂದವರ ಮುತ್ತಿಟ್ಟು
ಬಳಿ ಕರೆದಿತ್ತು
ತಿಳಿಗೆಂಪು ಕನಕಾಂಬರ
ಗಾಳಿಯಲಿ ತೇಲಿ ತೂಗಿ
ನೋಡುಗರ ಕಣ್ಸೆಳೆದಿತ್ತು
ಏಳು ಮಲ್ಲಿಗೆಯು ಅರಳಿ
ಕಣ್ಸನ್ನೆಯಲಿ ಪ್ರಿಯಕರೆಲ್ಲರ
ಕೈಬೀಸಿ ಕರೆದಿತ್ತು
ಕೆಂಪು ಗುಲಾಬಿಯ ದಂಡೆ
ಮುಗುಳುನಗೆಯಲಿ ಮಿಂದು
ಅದೇನನೋ ಅರಸುತ್ತಿತ್ತು
ರಂಗುರಂಗಿನ ಸೇವಂತಿಗೆ
ಬಿಸಿಯುಸಿರಿನಲಿ ಕಲೆತು
ತನ್ನ ತಾ ಮರೆತಿತ್ತು
ತಾವೆರೆಯ ಹೂವು
ತನ್ನತನದರಿವಿನಲಿ
ಬರುವ ದೇವನ ಹಂಬಲಿಸುತಿತ್ತು
ಗುಡಿಯ ಸೇರಲು ಕೆಲವು
ಮುಡಿಯು ಏರಲು ಹಲವು
ತೋರಣದ ಮೆದೆಯಲಿ
ಸತ್ತವರ ಎದೆಯಲ್ಲಿ
ಸಂಭ್ರಮದ ಒಡಲಲ್ಲಿ
ಸಂತಸದ ಕಡಲಲ್ಲಿ
ಅದೆಷ್ಟು ತಾಣಗಳು ಹೂವುಗಳಿಗೆ ?
ಹೂವಾಡಗಿತ್ತಿಯ
ಒಂದು ಸನ್ನೆಗೆ ಕಾದಿಹವು …
ಹೂವಾಡಗಿತ್ತಿ ತಾ
ಹೂ ನಗೆಯ ಸೂಸುತ್ತ
“ಹೂವಕೊಳ್ಳಿರಿ”
ಎಂದು ಕೋರುತಿಹಳು
ಬಂದವರು
ಕೊಂಡವರು
ಬೇಡವೆನ್ನುತ ಹೊರಟವರು
ಚೌಕಾಶಿ ಕೇಳ್ದವರು
ಕೇಳಿದ್ದ ಕೊಟ್ಟವರು
ಎಲ್ಲರಿಗೂ
ಇವಳದೊಂದೇ ಒಂದು
-ಮಾಸದ ನಗು !
ಹೂವಿನೊಡನಾಟ
ಇವಳಿಗೂ
ಕಲಿಸಿರಬೇಕು
ತನ್ನ ಹೂ ನಗೆಯ ?
ಒಳಮನದ ಸಿರಿಯ !
ಹೂವುಗಳೇ ಹಾಗೆ
ಎಲ್ಲಿ ಸೇರಿದರೇನು ?
ಯಾರ ಬಳಿ ಇರಲೇನು ?
ನಗುವುದ ಮರೆಯುವುದಿಲ್ಲ
ಹೂವಿಂದ ನಗೆಯ ಕದಿಯಬೇಕು ಈಗ
ಹೂ ನಗೆಯ ಬೀರುತ್ತ ಬದುಕುವುದ
ಕಲಿಯಬೇಕು ಬೇಗ
ಹೂವಾಡಗಿತ್ತಿಯಾದೇವು ಆಗ !
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ