ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : http://bharatbhawan.org/

ಅಡಿಗರಿಗೆ..

ಲಕ್ಷ್ಮಣ ಬಡಿಗೇರ
ಇತ್ತೀಚಿನ ಬರಹಗಳು: ಲಕ್ಷ್ಮಣ ಬಡಿಗೇರ (ಎಲ್ಲವನ್ನು ಓದಿ)

ಒಂದು ಸಂಜೆ…..
ಪ್ರಾರ್ಥನೆಯೊಂದಿಗೆ ಬಳಿ ಬಂದಿರುವೆ
ನಿಮ್ಮ ನುಡಿಯ ಸ್ಪರ್ಶದ ಮಿಂಚಿಗೆ
ನನ್ನೊಳ ಒಲೆಯ ತರಗಲೆ ಹೊತ್ತಿದೆ
ಹೊರಗೆಲ್ಲ ಕತ್ತಲು ಒಳಗೆಲ್ಲ ಬೆಳಕು
ಗವ್ವರಗತ್ತಲಿನ ಒಳಸುಳಿಯೊಳಗೆ
ಕಿಡಿಯೊಂದನು ಚೆಲ್ಲಿ ತಟಸ್ಥ ನಿಲವು ನಿಮ್ಮದು
ಮುಂದೆ ಹೋದಂತೆಲ್ಲ ಏಳುತ್ತವೆ
ಶಿಲಾ’ಪದ’ಪದರಗಳು ಪಾದರಸದಂಥ
ಕಣಕಣದೊಳಗೆ ಲೀನ ನಾನು

ನನ್ನ ದಾರಿಯಲೇ ನಡೆವಾಗ ದರ್ಶನ ಕೊಟ್ಟು
ಇಲ್ಲೆ ಪಕ್ಕದಲ್ಲೆ “ಬಾ ಇತ್ತ ಇತ್ತ” ಎಂದು
ಕರೆದು ಕುಳ್ಳರಿಸಿ, ಎಡ ಬಲಗಳಾಚೆ
ರಾಮನವಮಿಯ ಪಾಯಸ ಉಣಿಸಿ
ಹೊಸ ಹಾದಿ ತೋರಿ
ಭೂತದೊಳಗೆ ಬರಿದೇ ಆಡಿಸಿ ಮಂತ್ರದಂಡ
ಭಗ್ನಗೊಂಡು ಬಿದ್ದಾಗಲೆಲ್ಲ ನೆಲ ಕಚ್ಚಿ ನಿಲ್ಲಿಸಿ
ಬಾವಿಯಂದಿಣಿಕಿದವಗೆ
ಪಾತಾಳವನೇ ತೋರಿಬಿಟ್ಟಿರಿ

ಮುರುಳಿಯೋ ಧೂಮಲೀಲೆಯೊ
ಒಳಗೊಂದು ಉಸಿರು ನಿಮ್ಮ ನುಡಿಯದೇ
ಆದರೂ ಹೊಸಗಾಳಿಯ ಗೋಡೆ ನನಗಿನ್ನೂ ಮುಸುಕು ಮುಸುಕು ಕ್ಷಮಿಸಿ!;
ನಾ ‘ಪರಾಕು’ ಹಾಕುತ್ತಿಲ್ಲ ‘ಕವಿ’ಯೇ
ಕೆಲವೊಮ್ಮೆ ನೀವು, ಮುಟ್ಟಲಾಗದ ಚುಕ್ಕಿ,
ತಾಗದ ಗಾಳಿ, ಕಲ್ಲಿನ ತುಟಿ, ತೊಡೆ
ನಡುವಿನ ಚಳಕು ಮತ್ತು ದ್ವಂದ್ವದ ತೂಗುಗತ್ತಿ
ಆದರೂ ನೀವು ನಿವೃತ್ತರಾಗುವುದಿಲ್ಲ