ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅರಹು

ರವಿಶಂಕರ ಪಾಟೀಲ್
ಇತ್ತೀಚಿನ ಬರಹಗಳು: ರವಿಶಂಕರ ಪಾಟೀಲ್ (ಎಲ್ಲವನ್ನು ಓದಿ)


ಸರಿತಪ್ಪುಗಳ ಸಮಮಾಡಿಕೊಂಡು ಮತಿ ಮರ್ಮಗಳ ಮೊದಲುಗೊಂಡು
ಮರ್ಮಾಂಗಗಳ ಮಡಿಮಾಡಿ
ಎದುರುನಿಂತ ಹಗಲುಗಳ ರಾತ್ರಿಮಾಡಿ
ಎದೆ ಢವ ಢವಗಳ ಪ್ರೇಮವಾಗಿಸಿ
ಎಲ್ಲವನು ಮಾತಾಗಿಸಿ
ಕೃತಿಯಾಗಿಸಿ
ಮೈಮರೆತು ಮೆರೆವ ದಿಟಸೂತ್ರದಲಿ ತನ್ನ ತಾ ಅರಿವ ಘಳಿಗೆ

ಹಗಲುಗಳ ಹತ್ಯೆಗೈದು
ರಾತ್ರಿಗಳ ಜತನಮಾಡಿ ಬದುಕಿದ ಬದುಕದು ಬದುಕಲ್ಲ

ಮಾರಿದರೆ ಮಾನವನು ಬೆತ್ತಲು ಮಾಧುರ್ಯ
ಮೋಹಿಸಿದವಳ ಮರೆತಂತೆ ಹೆತ್ತವಳನೇ ಹೆತ್ತಂತೆ
ರಕುತ ಮಾಂಸಖಂಡಗಳ ಹಗಲೆಲ್ಲ ಹೊತ್ತಂತೆ
ಮತ್ತು ಭಾವಭಂಗುರ

ಮೊದಮೊದಲು ಹೀಗಿರಲಿಲ್ಲ
ಹಸಿವಾದರೆ ಅನ್ನ
ತೃಷೆಯಾದರೆ ನೀರು
ಮಲಗಿದರೆ ನಿದ್ರೆ
ಮತ್ತೆ ಈಗ
ಎಲ್ಲದಕೂ ಸಂಶಯ
ಎಲ್ಲದಕೂ ಚಿತ್ತ
ಉಂಡರೂ ಚಿತ್ತ
ಮಲಗಿದರೂ ಮತಿ
ನೀರ ಕುಡಿದರೂ ಚಿತ್ತ

ಹಗಲ ಹನ್ನೆರಡು ಗಂಟೆಗೊಮ್ಮೆ ಸಾವು
ರಾತ್ರಿ ಎರಡು ಗಂಟೆಗೊಮ್ಮೆ ಸಾವು
ತರ್ಕ ವಿರೂಪ ಮಾಧುರ್ಯ ಮೋಹ ಸ್ಖಲನ ಶಿಶ್ನ
ಭಿತ್ತಿ ಹತ್ತಿಪ್ಪತ್ತರ ಚಿತ್ತ

ಮಲಗಿದರೆ ನಿದ್ರೆ
ಬದುಕ ಬರೆಯಲು ಮೂಡುವ ಸಾಲುಗಳಿಗೆ ಶೂನ್ಯಲೇಪ
ಬರೆಯದಿರ್ದಡೆ ಅದು ಬರಿಯ ಭ್ರಮನೆ ಇಲ್ಲ ಕನಸು
ಕನಸೂ ಸುಳ್ಳು ಭ್ರಮೆಯೂ ಸುಳ್ಳು
ಶೂನ್ಯವೊಂದು ನಿಲ್ಲುವುದು
ಶೂನ್ಯ ಅದು ಶೂನ್ಯವಷ್ಟೇ ಅದನ್ನೂ ಸಂಪಾದಿಸಬೇಕು

ಎಂದಾದರೂ ಒಮ್ಮೆ ಸಿಕ್ಕಾಳು ಆ ಪ್ರಿಯತಮೆ
ಅವಳೆಲ್ಲಿ? ಅವಳ ನೆನಹೆಲ್ಲಿ?
ಅವಳೂ ಈಗೀಗ ಚಿತ್ತಕ್ಕೆ ಹಾರಿಹೋಗುವಳು
ಅವಳೀಗ ಮತಿಗೇಡಿಯ ಹಾಗೆ ಸೂಕ್ಷ್ಮಮತಿ
ಯಾಗಿ ತಲೆಯ ತಿನ್ನುವಳು
ಅವಳ ಕುರಿತು ಚಿಂತಿಸುವುದೂ ಒಂದು ತರ್ಕವೇ

ಪ್ರೇಮವೂ ಈಗ ಕಾಮಿಡಿ ಚಲನ ಚಿತ್ರದಂತೆ
ಶುದ್ಧ ಪರಿಶುದ್ಧ ಭಾವ ಸಂಪೂರ್ಣ
ಮೋಹ ಸಂಕೀರ್ಣ ಭವ ಸಂಪೂರ್ಣ ಎಂದೆಲ್ಲಾ ಹೇಳುತ್ತಾರೆ
ತರ್ಕ
ಆಕೆಯ ಮೋಹದ ಮುಂದೆ ಶೂನ್ಯವಾಗಿಬಿಡುತ್ತದೆ ಒಮ್ಮೊಮ್ಮೆ
ಸೂಕ್ಷ್ಮವಾಗಿಬಿಡುತ್ತದೆ ಇನ್ನೊಮ್ಮ್ಮೆ
ಕ್ರಿಯೆ ತರ್ಕ ದರ್ದು ದೋಷ ರೋಷ
ಎಂದು ಏನೆಲ್ಲಾ ಆಗಿಬಿಡುತ್ತಾಳೆ ಆಕೆ
ಎಲ್ಲಾ ಹೀಗೇ ಇರಲೆಂದು ಇಷ್ಟಕ್ಕೂ ಬಯಸಕೂಡದು

ಚಿತ್ತ ತರ್ಕ ತಂಬೆಲರು ತೋರಣ ಮರಣ ಶಾಸನ ಸಂವಿಧಾನ
ಸರಿ ಸಂಪೂರ್ಣ ಸಿರಿಧಾನ್ಯ ಹೊಟ್ಟೆನೋವು ತಲೆನೋವು
ಕಣ್ಣ ಉರಿ ತಲೆತಿರುಗು
ಏನೆಲ್ಲ ಆಗಬಲ್ಲದು ಪ್ರೇಮ
ಆಕೆಯ ಮೋಹವೆಂದರೆ ಅದು ಹಾಗೇ

ಮತ್ತೆ ಮತ್ತೆ ಬದಲಾಗುವ ಕಾಲಕ್ಕೆ
ಕಾಲದ ನೋವಿಗೆ ಅವಳಲ್ಲ ಕಾರಣ
ಕಾಲವೇ ಕಾರಣ
ಮಗದೊಮ್ಮೆ ನಕ್ಕ ಬುದ್ಧ ಈಕೆಯ ತರ್ಕದಿಂದಲೆ ಇರಬೇಕು
ತರ್ಕ ವಿತರ್ಕ
ಎಲ್ಲವೂ ಕಾಲಮಯ ಅಕಾರಣಮಯವೂ
ಹಾಗೆಂದರೆ ಹಾಗೆ
ಆಕೆಯೊಬ್ಬಳು ಎಲ್ಲದಕೂ ಕಾರಣವಾಗಬಲ್ಲಳು
ರಾತ್ರಿಯೊಂದು ಹಸಿದ ಹೆಬ್ಬುಲಿ ಹಗಲು ಸತ್ತ ಶವ
ತರ್ಕ ವಿತರ್ಕ ಸಂಪೂರ್ಣ ಸ್ಖಲನ ಗಂಭೀರ ಚಿತ್ತ
ಮತಿಗೇಡಿಯೂ ಮತಿವಂತ ಆಕೆಯ
ತರ್ಕದ ಮುಂದೆ ಮೋಹದ ಮುಂದೆ