ಇತ್ತೀಚಿನ ಬರಹಗಳು: ಸುಬ್ರಾಯ ಚೊಕ್ಕಾಡಿ (ಎಲ್ಲವನ್ನು ಓದಿ)
- ಗಟ್ಟಿಯವರಿಗೆ ನುಡಿ ನಮನ - ಫೆಬ್ರುವರಿ 26, 2024
- ಎರಡು ದಡ - ಅಕ್ಟೋಬರ್ 22, 2022
- ಅಶ್ರುತಗಾನ - ನವೆಂಬರ್ 3, 2021
ವಿವಿಧ ವಿಹಗಗಳ, ವಿಧ ವಿಧ ಸ್ವನಗಳ
ಗಾಯನ ಗೋಷ್ಠಿಯೆಲ್ಲ ನಡೆದು, ಸಮಾಪನಗೊಂಡು
ಎಲ್ಲ ಗೂಡು ಸೇರಿದ ಮೇಲೆ, ಕವಿದ ನೀರವದಲ್ಲಿ
ಉಳಿದ ಒಂಟಿ ಮರ, ತನಗೆ ತಾನೇ
ಮೆಲುಕು ಹಾಕುತ್ತಿದೆ, ಹಕ್ಕಿಗಳು
ತನ್ನ ಶರೀರಕ್ಕಂಟಿಸಿ ಹೋದ ಹಾಡುಗಳ
ವಿಚಿತ್ರ ಪುಳಕದಲ್ಲಿ.
ಮರದ ಅನುಮಂದ್ರ ಆಲಾಪಕ್ಕೆ ತಲೆದೂಗುವಂತೆ
ಒಲೆದಾಡುತ್ತಿವೆ ಎಲೆಗಳು
ಸುಳಿವ ತೆಳು ಗಾಳಿಯ ಲಯಕ್ಕೆ ಅನುಗುಣವಾಗಿ
ಒಡ್ಡಿಕೊಂಡು.
ಅದೊ, ಅಲ್ಲೊಂದು ಮೌನ
ಹಾಡಿಗೆ ಹಿನ್ನೆಲೆಯೊದಗಿಸುತ್ತಿದೆ
ಲಲಿತ ನಡೆಯಲ್ಲಿ.
ಮೇಲೆ ನೀಲಿ ಆಕಾಶದ
ಬೆರಗುಗಣ್ಣಿನ ಚಂದ್ರ
ಸಮೀಪಿಸುತ್ತಿದ್ದಾನೆ ಮರವ
ಮೈಮರೆತ ನಡಿಗೆಯಲ್ಲಿ.
ಹೀಗೆ
ಘನವಾದ ಒಂದು ಅಶ್ರುತ ಗಾನ ಗೋಷ್ಠಿ
ಸಂಪನ್ನವಾಗುತ್ತಿದೆ ಆ
ಕವಿದ ಬೆಳದಿಂಗಳ
ಮಾಯೆಯಲ್ಲಿ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ