ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆ ರಾತ್ರಿ

ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ಮಸುಕು ಆಕಾರಗಳು ಹೆಣೆಯುವ ಸಂಚಿಗೆ
ಸಣ್ಣ ಕುಡಿಯಂಥ ಭರವಸೆಯ
ಲಾಲಿ ಹಾಡು ತೂಗಬೇಕು

ನೂತನ ದೋಶೆಟ್ಟಿ ಅವರ ‘ಆ ರಾತ್ರಿ ‘ ಕವಿತೆಯಿಂದ

ಆ ರಾತ್ರಿ
ಗಟ್ಟಿ ಗುಂಡಿಗೆಯೂ ನಡುಗುವಂತೆ
ಗುಡುಗುಡಿಸಿತು ಗುಡುಗು
ಛಡ್ ಛಡಲ್ ಸಿಡಿಲು ಬಡಿದು
ದೀಪವಾರಿ ಕೋಣೆಯೆಲ್ಲ ಕಾವಳ

ನಿದ್ದೆಗೆ ಕತ್ತಲು ಪ್ರಿಯವಾದರೂ
ಭಯಕ್ಕೆ ಬೆಳಕ ಅಭಯ ಬೇಕು
ಮಸುಕು ಆಕಾರಗಳು ಹೆಣೆಯುವ ಸಂಚಿಗೆ
ಸಣ್ಣ ಕುಡಿಯಂಥ ಭರವಸೆಯ
ಲಾಲಿ ಹಾಡು ತೂಗಬೇಕು

ಹಚ್ಚಿಟ್ಟ ಮೇಣದಬತ್ತಿ ಗರಿಗೆದರಿ
ಕೋಣೆ ತುಂಬ ಕಣ್ಣ ಚಿತ್ರಿಸಿ
ನೀಡಿದ ನೋಟಗಳು
ಗಂಟ ಬಿಡಿಸಿ ನಂಟಾಗಿಸುವ ಸೋಜಿಗ!

ಬೆಳಕು ಹರಿದ ನೆಲದ ಮೇಲೆ
ಕರಗಿ ಕಲ್ಲಾದ ಮೇಣ
ಚಿತ್ತಾರ ಹರಡಿ
ಇರುವಿಕೆಯ ಸಾಕ್ಷಿ ಕೇಳಿತ್ತು

ಕತ್ತಲಿಗೆ ಬೆಳಕ ತುಂಬಲು
ಜೀವ ತೇದು
ತಾನು ಅಳಿದರೂ
ಉಳಿಸುವ ನಿರಾಳತೆಗಿಂತ
ಬೇರೆ ಪ್ರಮಾಣ ಬೇಕೆ?

ನೂತನ ದೋಶೆಟ್ಟಿ