ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇವಳು ಮುಟ್ಟಾದ ದಿನ

ಪುನೀತ್ ಹಂದ್ರಾಳು
ಇತ್ತೀಚಿನ ಬರಹಗಳು: ಪುನೀತ್ ಹಂದ್ರಾಳು (ಎಲ್ಲವನ್ನು ಓದಿ)

ಇವಳು ಮುಟ್ಟಾದ ದಿನ
ಮನೆಯ ತುಂಬೆಲ್ಲಾ ಹೊನಲು ಬೆಳಕಂತೆ
ಹರಡಿಕೊಂಡಿದ್ದ ಅಮ್ಮ,
ಪಾಯವಿಲ್ಲದ
ಹಜಾರದ ಮೂಲೆಯಲ್ಲಿ
ಕತ್ತಲೆಯ ಹೊದ್ದು
ಮಲಗಿದ್ದೇ ನೆನಪಾಗುತ್ತದೆ.

ಇವಳದೇ ಮುತ್ತಿನಕ್ಷತೆಯಲ್ಲಿ ನಿತ್ಯ ಪಟ್ಟಾಭಿಷಿಕ್ತನಾಗುವ
ನಾನು
ಇವಳು ಮುಟ್ಟಾದ ದಿನದ ರಾತ್ರಿ
ದಟ್ಟ ದರಿದ್ರನಾಗಿ, ದಿಕ್ಕು-ದೆಸೆಗಳು ತಪ್ಪಿ
ಬಿಸಿಲ ಬಯಲೊಳಗೆ ಬಟಾ ಬೆತ್ತಲಾದಂತೆ
ಕನಸು ಕಾಣುತ್ತೇನೆ.

ಹೊಟ್ಟೆಯ ನೋವೆಂದು ಇವಳು ಸಣ್ಣಗೆ ಮಿಸುಗಿದರೂ
ಹೊಕ್ಕಳ ಗಾಯದ ಮಾಸಿದ ಗುರುತೊಳಗೆ
ನೆತ್ತರ ನೆನಪೊಂದು ಮೆಲ್ಲಗೆ ಒತ್ತರಿಸಿ,
ಬಿಕ್ಕಳಿಸಿ ಅತ್ತಂತಾಗುತ್ತದೆ.
ಯಾರದೋ ಬಸಿರೊಳಗೆ ಹಿಡಿ ಉಸಿರಿಗೆ
ಬಡಬಡಿಸಿದಂತಾಗುತ್ತದೆ.

ಇವಳು ಮುಟ್ಟಾದ ದಿನ
ಕಾಲ ಕುಸಿದು ಕಾಲ್ಗಳಿಗೆ ತೊಡರುತ್ತದೆ.
ಸಮಗ್ರ ಪೌರುಷೇತಿಹಾಸಗಳ ಸಹಸ್ರ
ವರ್ಣಪುಟಗಳು ಕಪ್ಪು ಹಾಡು ಗುನುಗುತ್ತವೆ.

ಇವಳು ಮುಟ್ಟಾದ ದಿನ
ಆ ನಿಷಿದ್ಧ ಸಾಗರೋಲ್ಲಂಘನದ ಸೂತಕದ ನಡುವೆ
ಅಳುವ ಕಪಿಗಳ ಮುಂದೆ
ಉರಿವ ಬೆಂಕಿಯ ಮಿಂದೂ
ಮುಟ್ಟಾಗಿಯೇ ಉಳಿದವಳ
ಒಡಲಾಗ್ನಿಯ ಕರಿನೆರಳು
ಮೆಲ್ಲಗೆ ಎದೆಗಿಳಿಯುತ್ತದೆ.

ಅಸಲಿಗೆ ಇವಳು ಮುಟ್ಟಾಗುವ ದಿನ
ಮುಟ್ಟಾಗುವುದು ನಾನು;
ಇವಳ ಪ್ರೀತಿಗೆ ಹಬೆಯಾಡುವ ಚಹಾದ ಬಟ್ಟಲು;
ಜೊತೆಗೆ
ಬೆಳಕ ಹೆರಬೇಕಿದ್ದ ದೇವರಮನೆಯ ಆ
ಆರತಿ ದೀಪವೂ!