- ಸುರಿವ ಮಳೆಯಲ್ಲಿ ಪೆಟ್ಟು ತಿನ್ನುತ್ತಿರುವ ಹೆಂಗಸು ಮತ್ತು ಇನ್ನೊಂದು ಕವಿತೆ - ನವೆಂಬರ್ 18, 2020
ಕವಿತೆ-೧ : ಸುರಿವ ಮಳೆಯಲ್ಲಿ ಪೆಟ್ಟು ತಿನ್ನುತ್ತಿರುವ ಹೆಂಗಸು
ಎಡಬಿಡದೆ ಸುರಿವ ಮಳೆ
ಅದೂ ನಡುರಾತ್ರಿಯಲ್ಲಿ
ನನ್ನ ನೆರಮನೆಯವ ತನ್ನ ಹೆಂಡತಿಗೆ
ಬಾರಿಸುತ್ತಿದ್ದಾನೆ ಒಂದೇ ಸವನೆ,
ಸ್ವಾತಂತ್ರ ಸಂಗ್ರಾಮದ
ದೃಶ್ಯ ಒಂದರಲ್ಲಿ ಪೊಲೀಸರಿಂದ
ಥಳಿಸಿಕೊಳ್ಳುವ ಸತ್ಯಾಗ್ರಹಿಯಂತೆ..
ಸುರಿವ ಮಳೆಯಲ್ಲಿ ಬಡಿಯುತ್ತಿದ್ದಾನೆ
ನನ್ನ ನೆರಮನೆಯವ ತನ್ನ ಹೆಂಡತಿಗೆ…
ಬಾಯಿ ಮುಚ್ಚಿಕೊಂಡಿದ್ದಾಳೆ ಆ ಹೆಣ್ಣುಮಗಳು
ಸಂಕೋಚ ಮತ್ತು ನಾಚಿಕೆಯೊಂದಿಗೆ..
ಯಾರಿಗೆ ತಿಳಿಯುವದಿಲ್ಲ
ಕಣ್ಣೀರಿನ ಜಗತ್ತಿನಲ್ಲಿ
ಮುಖದ ಮೇಲಿನ ನಗು?
ಇದು ಮಹಿಳೆಯ ಆವಿಷ್ಕಾರ..
ನನ್ನ ಕಿಟಕಿಯ ಗಾಜಿಗೆ
ಜಡಿಯುತ್ತಿದೆ ಮುಸಲಧಾರೆ
ನೆರಮನೆಯವಳ ಆಗಸದಿಂದ
ಸುರಿಯುತ್ತಿದೆ ಅಶ್ರುಧಾರೆ..
ಎಂದೋ ಒಮ್ಮೆ ಹೇಳಿದ್ದ
ಎಂಡ್ರ್ಯೂ ಒಜ್ನೆಸೆನಸ್ಕಿ…
ಯಾವನೋ ಒಬ್ಬ ಬಡಿಯುತ್ತಿದ್ದಾನೆ ಹೆಣ್ಣಿಗೆ
ಕಾರಿನೊಳಗಡೆ, ಅದರಲ್ಲಿ ತುಂಬಿತ್ತು
ಕಾರ್ಗತ್ತಲಿನ ಜೊತೆ ವಿಪರೀತ ಸೆಕೆ…!
ಓ ನನ್ನ ಪ್ರಿಯ ಕವಿಮಿತ್ರ
ಹೆಣ್ಣು ನನ್ನ ನೆರಮನೆಯಲ್ಲಿ ಬಡಿಸಿಕೊಳ್ಳಲಿ
ಅಥವಾ ರಶ್ಯಾದಲ್ಲಿ….
ಅವಳು ಪೆಟ್ಟು ತಿನ್ನುವುದಂತೂ ನಿಜ…
ಬಹುಮತ ಸಮರ್ಥನೆಯ ಅಭಾವದಲ್ಲಿ
ಬಿದ್ದುಹೋಗುವ ಮಸೂದೆಯಂತೆ..
ಹಾಗಾಗಿಯೇ ಅವಳು ನಗುತ್ತಾಳೆ
ಪತ್ರಿಕೆಯ ರಂಗು-ರಂಗಿನ ಪುಟಗಳಲ್ಲಿ,
ಅವಳ ಮುಖದ ತುಂಬೆಲ್ಲ ಮಂದಹಾಸ ಬಿರುಬಿಸಿಲಲ್ಲಿ,
ಆದರದೇ, ರಾತ್ರಿಯ ಕತ್ತಲೆಯಲ್ಲಿ ಕಣ್ಣೀರ ಧಾರೆ..
ಮಳೆ ನನ್ನ ಕೋಣೆಯೊಳಗೆ ಸುರಿಯುತ್ತಿದೆ..
ನಾನೀಗ ಬಡಿದುಕೊಳ್ಳುತ್ತಿದ್ದೇನೆ
ನನ್ನ ಹಣೆ-ಹಣೆ…
ವಿಪರೀತ ಮಳೆಯಲ್ಲಿ…ನಡುರಾತ್ರಿಯಲ್ಲಿ..!
ಕವಿತೆ-೨ : 19 ಜನವರಿ 1990ರ ರಾತ್ರಿ
ಹುಣ್ಣಿನಂತೆ ತೆರೆದುಕೊಳ್ಳುತ್ತವೆ
ಮನೆಗಳ ಕಿಟಕಿಗಳು..
ನೆರಳಿನಂತೆ ಇಣುಕುತ್ತವೆ ಮೋರೆಗಳು ಎಲ್ಲೆಡೆ..
ಹಾಕುವ ಬೊಬ್ಬೆ ಮಂಜುಗಡ್ಡೆಯ ಶೀತದಲ್ಲಿ ಸುತ್ತ ಮಾರ್ದನಿಸುತ್ತಿದೆ..
ಬೈಗುಳಗಳು, ಚುಚ್ಚು ಮಾತುಗಳು, ಗದರಿಕೆಗಳು
ನಮ್ಮ ಎಲುಬುಗಳ ಸುರಂಗದಲ್ಲಿ ನುಸುಳಲು ಹವಣಿಸುತ್ತವೆ…
ಏನೇನೆಲ್ಲ ಕೇಳುತ್ತಿದ್ದೇವೆ ನಾವು..?
ನೆಲಮಾಳಿಗೆಯಲ್ಲಿ ಇದ್ದಿಲು ಚೀಲಗಳ ಹಿಂದೆ
ಅಡಗಿಸಿಟ್ಟ ನನ್ನ ಸೋದರಿಯರು,
ದೀಪ ಆರಿಸಿಕೊಂಡು ಅಪ್ಪ ಗಸ್ತುಹೊಡೆಯುತ್ತಿದ್ದಾರೆ..
ವಠಾರದ ಮಕ್ಕಳು ರೆಚ್ಚೆಹಿಡಿದಿವೆ..
ಕೋಣೆಯೊಳಗಡೆ ಹಾಗೆ ಸುಮ್ಮನೆ..
ತುಟಿ ಮತ್ತು ಬಾಗಿಲು
ಎರಡೂ ಮುಚ್ಚಿಕೊಂಡಿವೆ…
ಏನೇ-ಯಾರೇ- ಹೊರಗಡೆ ಹೊರಟರೂ…
ಶಬ್ದ ಅಥವಾ ಮನುಷ್ಯ
ಆಪತ್ತು ಎರಡಕ್ಕೂ ಕಟ್ಟಿಟ್ಟದ್ದು!
ಹಿಂದಿ ಮೂಲ :ಅಗ್ನಿಶೇಖರ್ (Hindi Poem by Agnishekhar)
अग्निशेखर हिन्दी लेखक एवं साहित्यकार हैं। वो मूल रूप से कश्मीर के हैं। उनका कविता संग्रह जवाहर टनल काफी प्रसिद्ध हुआ। इस पुस्तक को वर्ष २०१२ में जम्मू सरकार द्वारा सर्वश्रेष्ठ पुस्तक के रूप में चुना गया था। हालांकि उन्होंने बाद में यह पुरस्कार लेने से मना कर दिया।
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ. ಕನ್ನಡ ಮತ್ತು ಹಿಂದಿ ಲೇಖಕಿ, ಅನುವಾದಕಿ. ಹವ್ಯಾಸಿ ರಂಗಭೂಮಿ ಕಲಾವಿದೆ.03 ಕವನ ಸಂಕಲನಗಳು,1 ಕಥಾ ಸಂಕಲನ,1 ವೈಚಾರಿಕ ಬರಹ; ಕನ್ನಡದಿಂದ ಹಿಂದಿಗೆ ಅನುವಾದ ಮಾಡಿದ ಪುಸ್ತಕಗಳು-06;ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕಗಳು-05ಯಕ್ಷಗಾನ ಕಲಾಕೇಂದ್ರ ಉಡುಪಿಗಾಗಿ ‘ಪಂಚವಟಿ’, ‘ನಳ-ಕಾರ್ಕೋಟಕ’, ಯಕ್ಷಗಾನದ ಹಿಂದಿ ಅನುವಾದ. ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ‘ಚಕ್ರವ್ಯೂಹ’ದ ಹಿಂದಿ ಅನುವಾದ ಹಲವು ಪ್ರಯೋಗಗಳನ್ನು ಕಂಡಿವೆ.ವೈದೇಹಿಯವರ ಕಮಲಾದೇವಿ ಚಟ್ಟೋಪಾಧ್ಯಾಯದ ಹಿಂದಿ ಅನುವಾದ ಭಾಗೀರಥಿ ಬಾಯಿ ಕದಂರಿಂದ ಹಲವಾರು ಪ್ರಯೋಗಗಳನ್ನು ಕಾಣುತ್ತಿವೆ. ಗೋಪಿನಾಥ್ ಗೋಯಂಕಾ ಅನುವಾದ ಪುರಸ್ಕಾರ, ಉತ್ತರ ಪ್ರದೇಶ ಹಿಂದಿ ಸಂಸ್ಥಾನ, ಲಖನೌನಿಂದ ಕನ್ನಡ-ಹಿಂದಿ, ಹಿಂದಿ-ಕನ್ನಡ ಅನುವಾದ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆಗಾಗಿ ಸೌಹಾರ್ದ ಪುರಸ್ಕಾರ, ಸಿಂಡಿಕೇಟ್ ಬ್ಯಾಂಕ್ ನ ಹಿಂದಿ-ಕನ್ನಡ ಸಾಹಿತ್ಯ ಸೇವಾ ಸಮ್ಮಾನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. ಮಾರಿಶಸ್‍ನಲ್ಲಿ ನಡೆದ 11ನೆಯ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸುವ ಸರಕಾರಿ ನಿಯೋಗದಲ್ಲಿ ಸೇರ್ಪಡೆ.
ಹಿಂದಿ ಮೂಲದ ಕವಿತೆಗಳು…
೧
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ