ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎರಡು ಕವಿತೆಗಳು

ರೇವಣಸಿದ್ದಪ್ಪ ಜಿ.ಆರ್.
ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)

ಎರಡು ಗಿಡಗಳು

ಮಾರುಕಟ್ಟೆಯಿಂದ
ತಂದ ಕುಂಡಕ್ಕೆ
ಮಣ್ಣು ಸುರಿದು
ಗಿಡವೊಂದ ನೆಟ್ಟು
ನೆನಪಾದಾಗಲೊಮ್ಮೆ
ತುಸು ನೀರು ಎರೆದು
ಕೈ ತೊಳೆದುಕೊಂಡಿದ್ದೇನೆ.
ಅಷ್ಟಕ್ಕೇ
ಸಂತೃಪ್ತಗೊಂಡು
ಹೂಹಣ್ಣುಕಾಯಿಗಳ ಬಿಟ್ಟು
ಸಂಭ್ರಮಿಸಿದೆ ಮದುಮಗಳಂತೆ
ಕುಂಡದ ಗಿಡ.

ಪ್ರೀತಿ ಮರೀಚಿಕೆಯಾಗಿ,
ಬಂಧಗಳು ಕಳಚಿಕೊಂಡು,
ಅವಕಾಶಗಳ ಅವಗಣನೆಗೆ
ಒಳಗಾಗಿ
ಮನಸಿಗೆ ಮಂಕು ಕವಿದಾಗ
ನೆನಪಾಗಿ ಕಾಡುತ್ತದೆ
ಕುಂಡದ ಗಿಡ.

ಕುಂಡದ ಗಿಡದ
ಒಡಹುಟ್ಪಿದ ಗಿಡವೊಂದು
ಬಯಲಲ್ಲಿ
ಆಳಕ್ಕೆ ಇಳಿದು
ಆಕಾಶದೆತ್ತರ ನಿಂತಿದೆ.
ತನ್ನ ಗಾತ್ರಕ್ಕೆ ತಕ್ಕಂತೆ
ತೂಕದ
ಹೂಹಣ್ಣುಕಾಯಿಗಳ
ಸಿಂಗರಿಸಿಕೊಂಡು
ಅಭಿಮಾನದ ನಗುವ
ಚೆಲ್ಲಿದೆ.
ಹಸಿದವರಿಗೆ ಹಣ್ಣು,
ದಣಿದವರಿಗೆ ನೆರಳು,
ಉಪಾಸಕರಿಗೆ ಹೂವ
ಧಾರೆ ಎರೆದಿದೆ.
ಹಕ್ಕಿಗಳಿಗೂ ಆಹ್ವಾನವಿತ್ತಿದೆ
ಹಾಡು ಹಾಡಲು,
ಗೂಡು ಕಟ್ಟಲು.

ಕುಂಡದ ಗಿಡಕ್ಕಿಲ್ಲ
ಬಟಾಬಯಲಲ್ಲಿ
ಸೆಟೆದು ನಿಂತ
ಹೆಮ್ಮರದ ಗತ್ತು.
ಇರುವಷ್ಟು ಕಾಲ
ಇದ್ದುದನ್ನೇ ಸೇವಿಸಿ
ಬದುಕುತ್ತದೆ
ಬೆಳಕಿನತ್ತ ಚಿತ್ತವಿಟ್ಟು.

******

ಸಿದ್ದೇಶ ಕಾಣೆಯಾಗಿದ್ದಾನೆ!

ಸಿದ್ದೇಶ ಕಾಣೆಯಾಗಿದ್ದಾನೆ!
ಗಾಢಾಂಧಕಾರದಲ್ಲಿ
ಬೆಳಕನರಸುತ್ತಾ ಹೋದವನು
ಕಣ್ಮರೆಯಾಗಿದ್ದಾನೆ.
ಚರ್ಚು,ಮಂದಿರ,ಮಸೀದಿಗಳಲ್ಲಿ
ಧರ್ಮ ರಹಸ್ಯ ಭೇದಿಸಲೆಂದು ಹೋದವನು
ಬಡಪಾಯಿಗಳ ಬಿಸಿಯುಸಿರಿನಲ್ಲಿ ಬೆರೆತಿದ್ದಾನೆ.
ತತ್ವಜ್ಞಾನಿಯಂತೆ
ತಾತ್ವಿಕ ಚಿಂತನೆಯತ್ತ ವಾಲಿದವನು
ನಿರರ್ಥಕ ಬದುಕಿನ ಗಾಳಿಗೆ ತೂರಿದ
ಹೊಟ್ಟಾಗಿದ್ದಾನೆ.
ಮಾನವತಾವಾದಿಯಂತೆ
ಮಮತೆಯ ಹಾಲುಣಿಸಲು ಹೋದವನು
ವಿಷಗಾಳಿಗೆ ಹೆದರಿ ಮರೆಯಾಗಿದ್ದಾನೆ.
ಪ್ರಕಾಂಡ ಪಂಡಿತನಂತೆ
ಗ್ರಂಥ ಭಂಡಾರ ಹೊಕ್ಕವನು
ಗೆದ್ದಲಿಡಿದ ಪುಸ್ತಕಗಳ
ಧೂಳು ಕಣಗಳಲ್ಲಿ ಒಂದಾಗಿದ್ದಾನೆ.
ಕಾವ್ಯವಾಹಿನಿಯ ಆವಾಹನೆಗೈದವನು
ನಿಗೂಢ ಕಥೆಯೊಂದರ
ಕೊನೆಯಿರದ ಸಾಲುಗಳ
ಅನಂತ ಅಕ್ಷರಗಳಲ್ಲೆಲ್ಲೋ ಅಡಕವಾಗಿದ್ದಾನೆ.
ಭಾವುಕತೆಯ ಪರಾಕಾಷ್ಠೆಗೇರಿದವನು
ಭಾವಗಂಗೆಯೊಳಗೆ ಕೊಚ್ಚಿಹೋಗಿದ್ದಾನೆ.
ಸಿದ್ದೇಶ ಕಾಣೆಯಾಗಿದ್ದಾನೆ; ಹುಡುಕಿ ಕೊಡಿರಿ.
ನಿಮಗವನು ಸಿಕ್ಕರೆ
ನಿಮ್ಮೊಳಗೂ ಅವನಿರುತ್ತಾನೆ.
ಬಹಳ ಮಾಡಿ
ಹಲವರಿಗೆ ಅವನು ಸಿಕ್ಕಲಾರ!

(ಸಂಕ್ರಮಣ ಸಾಹಿತ್ಯ ಸ್ಪರ್ಧೆ-೨೦೧೮ರ ಕಾವ್ಯ ವಿಭಾಗದಲ್ಲಿ ಪುರಸ್ಕಾರ ಪಡೆದ ಕವನ)