- ಪ್ರಕೃತಿ - ಅಕ್ಟೋಬರ್ 11, 2022
- ತ್ರಿಶಂಕು - ಆಗಸ್ಟ್ 21, 2022
- ಬಿಟ್ಟು ಬಂದ ಊರು - ಮೇ 28, 2022
ಎಳೆಗಾಯಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರುಳುವೊಲು
ಈ ಕಂದ
ಕಾಲನ ಕೈವಶವಾದರೆ
ನೀ ಕಂಗೆಟ್ಟು
ಕಂಬನಿಗರೆಯಬೇಡ ತಾಯೀ…
ಹುಣ್ಣಿಮೆಯ ಬೆಳದಿಂಗಳಲ್ಲಿ
ಬೆಳಕಾಗಿ ಹೊಳೆಯುತ್ತೇನೆ.
ಅಮಾವಾಸ್ಯೆಯ ಕಾರಿರುಳಲ್ಲಿ
ಕರಗಿ ಮುಗುಮ್ಮಾಗಿರುತ್ತೇನೆ.
ಮುಂಜಾನೆ ಮುಸ್ಸಂಜೆಯ
ಬಂಗಾರ ಕಿರಣಗಳಲ್ಲಿ
ರಂಗಾಗಿ ಮೆರೆಯುತ್ತೇನೆ.
ಸುಯ್ಯನೆ ಸುಳಿಯುವ
ವಾಯುವಿನಲ್ಲಿ ಆವಿಯಾಗಿ
ಹಾಯಾಗಿ ವಿಹರಿಸುತ್ತೇನೆ.
ದೇವರಿಗೆ ಬೆಳಗುವ
ಕರ್ಪೂರದಾರತಿಯಲ್ಲಿ
ತಣ್ಣಗೆ ಉರಿದು
ಮುದನೀಡುತ್ತೇನೆ.
ಜುಳುಜುಳು ಹರಿಯುವ
ಝರಿಯಲ್ಲಿ ಬೆರೆತು
ನಿನದಿಸುತ್ತೇನೆ.
ಉತ್ಸಾಹದಿ ಉಬ್ಬಿ ಉಲಿಯುವ
ಹಕ್ಕಿಗಳ ಕೊರಳ ಸೇರಿ
ಕಬ್ಬವ ಹಾಡುತ್ತೇನೆ.
ಬನದ ಹಸುರಿನಲ್ಲಿ
ಹರಿತ್ತುವಾಗಿ
ಕಂಗಳಿಗೆ ಹಬ್ಬವಾಗುತ್ತೇನೆ.
ಮಣ್ಣ ಕಣಕಣದಿ ಕಲೆತು
ಹೊಸತು ಚೇತನವಾಗಿ
ಚಿಗುರುತ್ತೇನೆ.
ಎಳೆಗಾಯಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರುಳುವೊಲು
ಈ ಕಂದ
ಕಾಲನ ಕೈವಶವಾದರೆ
ನೀ ಕಂಗೆಟ್ಟು
ಕಂಬನಿಗರೆಯಬೇಡ ತಾಯೀ…
ಇನ್ನೊಮ್ಮೆ ನಿನ್ನ ಮಗುವಾಗಿ
ಹುಟ್ಟಿ ಬರುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ