ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದು ವೃತ್ತದ ಸುತ್ತ

ಪ್ರಭಾಕರ ತಾಮ್ರಗೌರಿ
ಇತ್ತೀಚಿನ ಬರಹಗಳು: ಪ್ರಭಾಕರ ತಾಮ್ರಗೌರಿ (ಎಲ್ಲವನ್ನು ಓದಿ)

ಆ ವ್ಯಕ್ತಿ ಹೀಗೇಕೆ ಬಿದ್ದಿದ್ದಾನೆ
ಸುಭಾಸ್ ಚೌಕದ ವೃತ್ತದ ಪಕ್ಕ
ಜಗತ್ತನ್ನೇ ಮರೆತವನಂತೆ …..?

ಸರ್ಕಲ್ ನ ಸುತ್ತ ಓಡಾಡುತ್ತಿವೆ
ನೂರಾರು ವಾಹನಗಳು ಹಲ್ಲಿಗಳಂತೆ
ತುಂಬಿದ ಬಸ್ಸುಗಳು
ಕಿಲಕಿಲ ನಗುವ ಸುಂದರಿಯರು
ಕಬ್ಬಿಣದ ತಂತಿಮೇಲೆ ಕೂತ ಕಾಗೆಗಳು
ಹೂವು ಮಾರುತ್ತಾ ಕೂತ ರಾಜಾಸ್ತಾನಿಗಳು
ಕಾರಿನ ಗ್ಲಾಸ್ ಏರಿಸಿ ಕುಳಿತ
ಶ್ರೀಮಂತ ಯುವಕರು ……
ಬೆತ್ತಲೆ ಓಡಾಡುವ ಮಕ್ಕಳು
ತಡಕಾಡುತ್ತಾ ನಿಂತ ಕುರುಡ
ಯಾರ ಗೊಡವೆಯೂ ಇಲ್ಲದಂತೆ
ಹೀಗೆ ಸುಮ್ಮನೆ ಬಿದ್ದಿದ್ದಾನೆ ಆ ವ್ಯಕ್ತಿ ….!

ಸಣ್ಣಗೆ ಹನಿಸುವ ಮಳೆ
ಮೆಲ್ಲಗೆ ಹರಿವ ಕೊಚ್ಛೆ ಗಟಾರ
ಬೆನ್ನಿಗೆ ಕೂಸು ಕಟ್ಟಿಕೊಂಡು
ಓಡಾಡುವ ವಿದೇಶಿಯರು
ಎಲ್ಲರೂ ವ್ಯವಸ್ಥಿತವೆಂಬಂತೆ
ನಡೆಯುತ್ತಲೇ ಇವೆ
ಆದರೂ ,
ಆ ವ್ಯಕ್ತಿ ಹಾಗೇ ಬಿದ್ದಿದ್ದಾನೆ
ಯಾವ ಪರಿವೆಯೂ ಇಲ್ಲದಂತೆ
ಜಗತ್ತನ್ನೇ ಮರೆತಂತೆ
ತನ್ನ ಸುತ್ತಲಿನ ಸಮಾಜವನ್ನೇ
ತೊರೆದವನಂತೆ