- ಕುಷ್ಠದ ದೃಷ್ಟಿ - ನವೆಂಬರ್ 28, 2021
- ತಪಸ್ಸು - ಅಕ್ಟೋಬರ್ 30, 2021
- ಮುನ್ನುಡಿ - ಅಕ್ಟೋಬರ್ 28, 2020
ತಂಪಾದ ಚಂದಿರನಂತಹ ಕಣ್ಮಣಿ ಕಂದ,
ಸಂತಸದ ಹುಣ್ಣಿಮೆಯೇ ಮನೆಯಾದವಳು,
ಒಡಲ ಗಾಯಗಳ ಸವರಿ ನಾಳೆ ಪ್ರಶ್ನಿಸುವಳು,
ಉತ್ತರ ಅರಿವಾದಂದು ತತ್ತರಿಸಿ ಕುಸಿವಳು..
ತಣ್ಣನೆ ಕಾರ್ಗತ್ತಲಲ್ಲಿಯೇ ಆರಿಸಿಬಿಟ್ಟರು,
ಅಪ್ರಾಪ್ತ ಕಿರುಬೆಳಕ, ಬಿರುಗಾಳಿ ಖೂಳರು,
ಸರಿ-ತಪ್ಪು ವಿವೇಚನೆಗಳ ಉಡುಪುಗಳ ತೊಡದ,
ಕುಷ್ಠ ದೃಷ್ಟಿಯ ಬೇಟೆಯಾಡುವ ಪಿಶಾಚ ಮೃಗಗಳು..
ಮೊಗದಲ್ಲಿ ಮಾತಲ್ಲಿ ನಗುವಲ್ಲಿ ಮಗುವಿಲ್ಲ,
ಬೆಳೆವ ಮುನ್ನ ಉಣ್ಮೆ ಕಾಡುಪಾಲಾಗಿಸಿದರು,
ದನಿಯ ಅಳಿಸಿ ತಳ್ಳಿರುವ ಹಾಳುಬಾವಿಯಿಂದ,
ಹಿಡಿದೆತ್ತಿ ಹೇಳಿಕೆಯೀಗ ಲಯಗೊಳಿಸಬೇಕು..
ಮರುಕ ಪೂಸಿ ಪೂಸಿ ಮಡಿಸಿ ಲಟ್ಟಿಸುವವರ,
ನಗುವ ಹೂಸಿ ಹೂಸಿ ಉಸಿರು ಕಟ್ಟಿಸುವವರ,
ಭಯಗಳು ಅಂಟದಂತೆ ಔಷಧವನಿಟ್ಟು ನೀವಬೇಕು,
ರಣಗಾಯವಿದು ಕಲೆಯುಳಿಸದಂತೆ ಮಾಯಬೇಕು..
ಸುತ್ತಲಿರುವ ಜಗ ವರ್ಣವಿಹೀನವಾಗಿರಲು,
ಕಣ್ಣೊರೆಸಿ ಮನಸಿನ ಕೊಳೆ ತೊಡೆಯಬೇಕು,
ಕನ್ನಡಿ ಒಡೆಯಿತೆಂದು ಲೊಚಗುಟ್ಟುವವರ,
ನಿರ್ಲಜ್ಜ ಮುಖವಾಡ ತೋರುವ
ಕನ್ನಡಿಯಾಗಬೇಕು..
ಕರಕಲಾಗಿ ಇದ್ದಿಲಾಗಿ ಕರಗಿ ಕಾಂಡವೊಂದು,
ಕಾಲದ ಕುಲುಮೆಯ ಸಹಿಸಿ ನಿಚ್ಚಳ ಕಠಿಣವಾಗುವುದು…
ಅಂತರಂಗದ ಕುರುಗಳು ನೂರು ಇನ್ನೂರಾದರೂ,
ಅಂತಃಶಕ್ತಿ ಶತ ಶತ ದೃಢ ವಜ್ರವಾಗಬೇಕು…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ