ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆಟ್ಟ ಚಟವೇತಕೆ?

ಸೌಜನ್ಯ ನಾಯಕ
ಇತ್ತೀಚಿನ ಬರಹಗಳು: ಸೌಜನ್ಯ ನಾಯಕ (ಎಲ್ಲವನ್ನು ಓದಿ)

ಸುತ್ತಲೂ ಕತ್ತಲೆಯ
ಕೋಣೆಯನ್ನು ಕಟ್ಟಿಕೊಂಡು
ಕನಸುಗಳನ್ನೇ ಕಾಣದಂತೆ
ಬದುಕುವುದಾದರೆ
ಅಂತಹ ಬದುಕಾದರೂ ಅದೇತಕೆ?

ತಿರುಗಿ ನೋಡಿದಾಗೊಮ್ಮೆ
ಕಳೆದು ಹೋದ ನೂರು
ದಿನಗಳ ನಡುವೆ
ಒಂದು ದಿನದ ನೆನಪು
ನಮ್ಮ ಮನಸ ನಗಿಸಲಾರದೆ
ಹೋದರೆ
ಅಂತಹ ದಿನಗಳ
ನೆನಪಿಸಿಕೊಳ್ಳುವುದಾದರೂ ಅದೇತಕೆ?

ಕಪಟವೇ ತುಂಬಿರುವವರ
ಮನಸಿನ ಬತ್ತಳಿಕೆಯಿಂದ
ಹೊರಡುವ ಸಿಹಿ ಮಾತಿನ
ಬಾಣಗಳೆಲ್ಲವೂ
ಬೇರೆಯವರನ್ನು ಮೋಸ
ಮಾಡಲಿಕ್ಕೆ ಇರುವುದಾದರೆ
ಅಂತಹ ಸಿಹಿತನವಾದರೂ ಅದೇತಕೆ?

ನಮ್ಮ ಬದುಕನ್ನು ಬೇರೆಯವರ
ಬದುಕಿಗೆ ಹೋಲಿಸಿ
ಬದುಕುವುದಾದರೆ
ನಮ್ಮದು ಪೂರ್ಣ ಪ್ರಮಾಣದ
ಬದುಕೆಂದು ಹೇಳಿ
ಅಪೂರ್ಣವಾಗಿ ಬೀಗುವುದಾದರೂ ಅದೇತಕೆ?

ಉತ್ತರವೇ ಸಿಗದಂಥ​
ಅದೆಷ್ಟೋ ಪ್ರಶ್ನೆಗಳು
ನಮ್ಮನ್ನು ಕಾಡುತಿರುವಾಗ
ಉತ್ತರ ಸಿಕ್ಕವುಗಳಲ್ಲಿಯೂ
ಪ್ರಶ್ನೆಯೊಂದ ಕೆದಕಿ
ಹೊರ ತೆಗೆವ
ಕೆಟ್ಟ ಚಟವೊಂದು ನಮಗೆ
ಅಂಟಿಕೊಂಡದ್ದಾದರೂ ಅದೇತಕೆ?