ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎರಡು ಗಜ಼ಲ್ ಗಳು…

ದಿಲೀಪ ಹೆಗಡೆ
ಇತ್ತೀಚಿನ ಬರಹಗಳು: ದಿಲೀಪ ಹೆಗಡೆ (ಎಲ್ಲವನ್ನು ಓದಿ)

ಹಗಲು ಬೆಳಕ ಸುರಿಸಿ‌ ಸೋತು ರಾತ್ರೆಯಲ್ಲಿ ಕಳೆದಿದೆ
ಕಿಸೆಯಲಿದ್ದ ಖುಷಿಯ ಕೀಲಿ ಜಾತ್ರೆಯಲ್ಲಿ ಕಳೆದಿದೆ

ನಶೆಯ ಶೀಶೆಯಲ್ಲಿ ಸುಖವ ಹುಡುಕುತಿಹುದು ಈಜಗ
ಭಾವ ಬೆಸೆವ ಬಂಧವೆಲ್ಲ ಮಧುಪಾತ್ರೆಯಲ್ಲಿ ಕಳೆದಿದೆ

ಒಲಿಯದಿಲ್ಲಿ ಮೃತ ಸಂಜೀವಿನಿ ಸಾವ ಗೆಲುವ ಮೋಹಕೆ
ಕೊನೆಯ ಉಸಿರು ವೈದ್ಯನಿತ್ತ ಮಾತ್ರೆಯಲ್ಲಿ ಕಳೆದಿದೆ

ಹಳತನಳಿಸಿ ಹೊಸತು ಬರೆವ ಖಯಾಲಿಯೀಗ ಎಲ್ಲೆಡೆ
ಭವಿಷ್ಯ ಬರೆದ ಪಾತ್ರವೆಲ್ಲ ಚರಿತ್ರೆಯಲ್ಲಿ ಕಳೆದಿದೆ

ಗುರಿಯ ಮರೆತು ಅಲೆಯುತಿರುವ ಮಂದಿಯೆನಿತು “ದೀಪು”
ಗಮ್ಯ ಮರೆತ ಬಾಳಚಕ್ರ ಶವ ಯಾತ್ರೆಯಲ್ಲಿ ಕಳೆದಿದೆ

✒ ✒ ✒

ಗಜ಼ಲ್

ನಿನ್ನಯ ತುಟಿಗಳ ಅಂಚಲಿ ಜಾರುವ
ಮುತ್ತಿನ ಮಣಿಗಳ ಎಣಿಸಿರುವೆ
ಚೆಲುವಿನ ಕಂಗಳು ಸೂಸುತ ಸೆಳೆಯುವ
ಮತ್ತಿನ ಹನಿಗಳ ಎಣಿಸಿರುವೆ

ಅಲೆವುದು ಸರಿಯೇ ಕನಸಿನ ಬೀದಿಯ
ಒಪ್ಪಿಗೆ ನೀನು ಪಡೆಯದೆಯೇ?
ಸುಳ್ಳೆನೆ ಸಾಕ್ಷಿಗೆ ಹೇಳದೆ ಊರಿದ
ಹೆಜ್ಜೆ ಗುರುತುಗಳ ಎಣಿಸಿರುವೆ

ಮೊನಚಿನ ನೋಟವು ತಾಕಿತೇನೊ
ಹೃದಯ ವೇದನೆಯು ಅತಿಮಧುರ
ಲೆಕ್ಕವು ತಪ್ಪದ ಹಾಗೆ ಮತ್ತೊಮ್ಮೆ
ನಾಟಿದ ಶರಗಳ ಎಣಿಸಿರುವೆ

ಇರುಳಲು ಮಿನುಗುವ ನಿನ್ನಯ ಮೊಗದ
ಮೆರುಗಿಗೆ ಉಪಮೆಯು ಬೇರಿಲ್ಲ
ಸೂರ್ಯ ಚಂದ್ರರ ಜೊತೆ ಆಗಸದ
ಎಲ್ಲ ತಾರೆಗಳ ಎಣಿಸಿರುವೆ

ಕಾಯಿಸಿ ಕಾಡುವದಿಷ್ಟ ನಿನಗೆಂದು
ಅರಿತು ಕಾಯುತಿಹ ‘ದೀಪು’
ವರ್ಷ ಮಾಸ ದಿನ ಗಂಟೆ ನಿಮಿಷದೊಳ
ಪ್ರತಿ ಕ್ಷಣಗಳ ಎಣಿಸಿರುವೆ

★★★