ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)
- ಮರಿಹಕ್ಕಿ ಮರಳಿತು ಕಾಡಿಗೆ… - ಅಕ್ಟೋಬರ್ 29, 2024
- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
- ಕಲಿಕೆಯ ಮಾಧ್ಯಮವಾಗಿ ಕನ್ನಡ - ನವೆಂಬರ್ 27, 2022
ಹಿರೇಗುತ್ತಿಯಲ್ಲಿ ಮಳೆ
(ಒಂದು ದೃಶ್ಯ)
ಬೇಸಿಗೆಯಲಿ ಬತ್ತಿದ ಈ ಬಾವಿ
ಮಳೆಗಾಲದಲ್ಲೀಗ
ಉಕ್ಕಿ ಹರಿದಿದೆ
ಕೊಡ ಇಳಿಸಬೇಕಿಲ್ಲ
ಮೊಗೆದುಕೊಳ್ಳಿ
ಕೇರೆ,ಕಪ್ಪೆಗಳೂ ಬಾವಿಯಿಂದ
ಹೊರಬಂದು
‘ಎಲಾ!ಪ್ರಪಂಚ ಹೀಗಿದೆ’ ಎಂದು
ಅಚ್ಚರಿಗೊಂಡು
ಹರಿದು ಹೋಗಿವೆ ಗದ್ದೆಗೆ
ಹಿತ್ತಿಲು ದಾಟಿ
ಮಳೆ ನೀರ ರಭಸಕ್ಕೆ
ಒದ್ದೆ ಪಾಟಿಚೀಲದಿಂದ
ಪಟ್ಟಿ ಪುಸ್ತಕ ತೆಗೆದು
ಒಲೆಕಟ್ಟೆಗಿಟ್ಟು
ಅಡುಗೆ ಮನೆ ಕಿಟಕಿಯಿಂದ ಗದ್ದೆ ನೋಡಿದ ಮಕ್ಕಳನ್ನು
ಕೇರೆ,ಕಪ್ಪೆ,ಮೀನ
ಕೆಸರಲ್ಲಾಡುವ ಕೋಣ
ಕರೆದಿವೆ
ಬನ್ನೀ ಬನ್ನಿ
ಬರುವಾಗ ಬಿಸಿ ಬಿಸಿ ಹಪ್ಪಳ ತನ್ನಿ
ಹೊಸದು ಹಳೆಯದು
ಹೊಸದರಲ್ಲಿ ಹಳೆಯದು
ಕರಗುವ ಬಗೆ ತಿಳಿಯದು!
ಹೊಸಮನೆಯನು ಹೊಕ್ಕೆವು
ನಮಗೆ ನಾವೇ ಸಿಕ್ಕೆವು!
ಹೊಸದೇವರ ಕೋಣೆಯಲ್ಲಿ
ಅದೇ ದೇವರ ಕಂಡೆವು!
ಹಳೆಯ ಗೆಳೆಯರೊಡನೆ ಕೂತು
ಹೊಸ ಮನೆಯಲಿ ಉಂಡೆವು!
ಹಳೆಯ ದೀಪಗಳಲಿ ನಾವು
ಹೊಸ ಬೆಳಕನ್ನಿಡುವೆವು!
ಹಳೆಯ ಗಿಡದ ಟೊಂಗೆ ನೆಟ್ಟು
ಹೊಸ ಹೂಗಳ ಪಡೆವೆವು
ಆದರೇನು ಹಳದು ಹೊಸ-
ತಾಗುವ ಬಗೆ ಅರಿಯೆವು!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ