ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

Illustration from 19th century

ಜಾಡಮಾಲಿಯ ಕನಸು

ಲಕ್ಷ್ಮಣ ಬಡಿಗೇರ
ಇತ್ತೀಚಿನ ಬರಹಗಳು: ಲಕ್ಷ್ಮಣ ಬಡಿಗೇರ (ಎಲ್ಲವನ್ನು ಓದಿ)

ಕಂಡೇ ಕಂಡಿದ್ದಾನೆ ಆ ಹುಡುಗ
ಗೂಢ ಗೂಡಿನೊಳಗಿನ ಬಿಳಿಸೋಗವ ಗುಡಿಸಲು

ಎಣ್ಣೆಯ ಕುಡಿದೂ ಬೆಳಕನು ಹೆರದ ಬತ್ತಿ- ಹಣತೆಗಳ
ಬಂದು ಬಾರದ, ಗಾಢ ಕತ್ತಲನುಳಸಿ ಹೋದ ಸಿಡಿಲು-ಮಿಂಚುಗಳ

ಹೆಗ್ಗಣ ಬಂದು ದಿಬ್ಬಣ ಓಡಿ
ಬೀದಿಯಲಿ ಬಿದ್ದ ದೇವ-ದಿಂಡಿರುಗಳ
ಹೂವರಳಿಸದೆ ಜಗಲಿಯಲಿ ಗೆದ್ದಲು ಹತ್ತಿದ ಮಂತ್ರ- ಪಠಣಗಳ

ಕರಿಬಿಳಿ ಕೋಟಿನಲಿ ಬೆವೆತು ಹರಿಯದ ಕೆಂಪು ಕಂದು ಓಟು-ನೋಟುಗಳ
‘ಮೂರ್ಖಾ’ ಬಟ್ಟೆಯ ತುಂಬ ಚೆಲ್ಲಿದ ಅಳಿಸದ ಕಲೆ-ಕಸಗಳ

ಎಲ್ಲರೆದರು ನೀರುಣಿಸಿ-ಇಲ್ಲಾದಾಗೆ ಬೇರು ಕೊಯ್ವ ಕೈ-ಕತ್ತಿಗಳ
ಅಝೆಂಡಾಗಳ ಹೊತ್ತು ಹಾರುವ ಬಣ್ಣಬಣ್ಣದ ಬಂಡ-ಝೆಂಡಾಗಳ

ಕನಸ ಕಂಡೇ ಕಂಡಿದ್ದಾನೆ ಆ ಹುಡುಗ
ಗೂಢ ಗೂಡಿನೊಳಗಿನ
ಬಿಳಿಸೋಗವ ಗುಡಿಸಲು
ಕಟ್ಟಲೊಂದು ಹೊಸ ಗುಡಿಸಲು