ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೀರಿದ ಪಯಣದಲಿ

ನಾ ದಿವಾಕರ

ದಾಟಿ ಹೋಗಲೊಂದು ಸೇತು
ದಾಟದಿರಲೊಂದು ಗೋಡೆ ,,,
ಚಿಮ್ಮಲಣಿಯಾದ ಮನಸ್ಸಿಗೆ
ಕಾರ್ಮೋಡದಲ್ಲಿನ ಹಣತೆ ;

ಪಾದದಡಿಯ ಕೀರಲು ಧ್ವನಿ
ಅಂತರಾತ್ಮದ ಚೀತ್ಕಾರ ,,,
ಬೊಗಸೆಯೊಳಗಿನ ಇಳೆಗೆ
ಮುಂಬೆಳಕಿನ ಸುಪ್ರಭಾತ ;

ಬೂದಿಯೊಳಗಿನ ತುಣುಕು
ಹಸಿಕೆಂಡದೊಳಗಿನ ಬೇಗೆ ,,,
ಅಂತರಾಳದ ಕಿಡಿಗಳಿಗೆ
ಉಸಿರಾಗುವ ಜೀವಕಾಯ ;

ಶಿಥಿಲ ಬೇರಿನ ವೇದನೆ
ಉರಿವ ತರಗೆಲೆಗಳ ಕಾವು ,,,
ಹಸಿರೆಲೆಯಂಚಿನ ಇಬ್ಬನಿಗೆ
ಮಧುರ ಸ್ಪರ್ಶದ ತಾಣ ;

ಶಮನ ಕಾಣದ ನೋವು
ಸವೆದ ಬದುಕಿನ ಮೊರೆತ ,,,
ತೀರ ದಾಟಿದ ಸಂಚಾರಿಗೆ
ಚಿತೆಯ ಮೇಲಿನ ಚೀಲ ;

ಜೀವ ಭಾವದ ಕದನ
ಕಳೆದ ಹಾದಿಯ ಮಸಣ ,,,
ಮಣ್ಣ ಕಣಗಳ ಉಸಿರಲ್ಲಿ
ಬೆಂದ ಬದುಕಿನ ಸಾರ್ಥಕ್ಯ !