ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತುಂಬಿದೂರಿನಲೊಂದು: ಕವಿತೆ

ತುಂಬಿದೂರಿನಲೊಂದು....! ಹೃದಯಶಿವಾ ಅವರ ಒಂದು ಸುಂದರ ಭಾವ ಗೀತೆ...!
ಹೃದಯ ಶಿವ
ಇತ್ತೀಚಿನ ಬರಹಗಳು: ಹೃದಯ ಶಿವ (ಎಲ್ಲವನ್ನು ಓದಿ)

ತುಂಬಿದೂರಿನಲೊಂದು
ಕಂಬದಾ ಮನೆಯಿತ್ತು
ಗೊಂಬೆಯಂಥವಳೊಬ್ಬಳಿದ್ದಳಲ್ಲಿ
ನಂಬಿದರೆ ನಂಬಿ
ನಂಬದಿರೆ ಬೇಡ ನೀ-
ಲಾಂಬರವೆ ಅಡಗಿತ್ತು ಕಣ್ಣುಗಳಲಿ

ಸದ್ದಿರದ ನಸುಕಿನಲಿ
ಎದ್ದು ಹಾಡುವುದೆಂತು
ಶುದ್ಧಗಾಂಧಾರದಲಿ ವೀಣೆಗೂಡಿ
ನಿದ್ದೆಗಣ್ಣುಗಳುಜ್ಜಿ
ಸಿದ್ಧನಾಗುತ ಭರದಿ
ಕದ್ದಾಲಿಸುವುದೆನಗೆ ನಿತ್ಯರೂಢಿ

ಜರಿಲಂಗದಂಚಿನಲಿ
ಮಿರಿಮಿಂಚುವಾ ಹೂವು
ಪರಿಮಳವ ಹರಡಿತ್ತು ಗಾಳಿಯಲ್ಲಿ
ಬೆರಳ ಮೀರಿಸುವಂತೆ
ಕುರುಳು ನರ್ತಿಸುತಿತ್ತು
ಸರಿಗಮಪ ಮಪದನಿಸ ಸಂಗದಲ್ಲಿ

ಇಬ್ಬನಿಯ ಹೀರುತ್ತ
ಮಬ್ಬನ್ನು ಮರೆಸುತ್ತ
ದಿಬ್ಬದಲಿ ಕೆಂಗಿರಣ ಹಬ್ಬಿಕೊಳಲು
ಹುಬ್ಬ ಮೇಲೇರಿಸುತ
ಒಬ್ಬಳೇ ನಸುನಗಲು
ಹಬ್ಬ ನನ್ನೆದೆಯಲ್ಲಿ ಮತ್ತೆ ದಿಗಿಲು

ಹೀಗೆ ಕಾಡಿದ ಚೆಲುವೆ
ಹೇಗೆ ತಾ ತೆರಳಿದಳೊ
ಮಾಗಿ ಹಿಡಿದಾ ಜಾಡ ತಾನು ಹಿಡಿದು
ಹೋಗಿ ಬಂದಿದೆ ಕಾಲ
ಮಾಗಿಯೊಂದಿಗೆ ಪುನಃ
ಕೂಗಿ ಕರೆಯಿತು ನನ್ನ ಕುಕಿಲವೊಂದು

ಚಿತ್ರ ಕೃಪೆ : ಸಮರ್ಥ್ ಎಸ್.