ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನ್ನೆಲ್ಲಾ ನೆನ್ನೆ ನಾಳೆಗಳು

ಶ್ರೇಯಸ್ ಪರಿಚರಣ್
ಇತ್ತೀಚಿನ ಬರಹಗಳು: ಶ್ರೇಯಸ್ ಪರಿಚರಣ್ (ಎಲ್ಲವನ್ನು ಓದಿ)

(1) ಮಧ್ಯಂತರ
ಶೂನ್ಯಾವೃತ ನೀರವ-ಮ್ಲಾನ-ದುಮ್ಮಾನ ಸುಯ್ಯಿಡ್ತಿತ್ತು-ಇಡೀ ರಾತ್ರಿ
ಧರಿತ್ರಿ-ಗೇ ಗೊತ್ತಿತ್ತಾ !-“ಇದೆಲ್ಲಾ ಒಂದು ಜೋಕಿರಬೇಕಷ್ಟೆ”-ಖಾತ್ರಿ
ಗಾಢನಿದ್ದೆ-ನೆನಪು ನುಣುಪು-ಹೊಳಪು-ಉಡುಪು ಕಳಚಿದ ಹಾಗೆ
ಹಿಂದಿನ ಜಾಗರಣೆಗಳೆಲ್ಲಾ-ತುಂಬು-ಹಠದಿ-ಭರಿಸಿಬಿಡೋಕೆ ಇಂದೇ

ನನ್ನ ಅತೀತ-ಈ ಮಹಾನಗರದ ಮೇರೆ ಮೀರಿದ-ದೊಡ್ಡ ಬಲೂನು
ಸಂಭ್ರಮ ಸಡಗರ ಟೊಳ್ಳು ಕಡು ಹಗುರ/ ನಾನು ಹೀರೋ ಅಲ್ದೋನು
ಒಂದು ಕ್ಷಣ-ಒಂದೇ ಆ ಕ್ಷಣ-ಒಂದು ನಕ್ಷತ್ರ ಜರುಗಿಳಿದುಬಿಡ್ತೂರಿ!
ಸರಕ್ಕನೆ ಒಂದೇ ಗೀಟು ಅಧೋಮುಖ ನೇರವಾಗಿತ್ತು ಸ್ಪಷ್ಟ ಗುರಿ

ಆ ಒಂದೇ ಜೀಕು-ಕನಸಲಿ+ನನಸಲಿ-ನನ್ನ ನಿದ್ದೆ ಮುಗಿಸಿತ್ತು
ನನ್ನ-ನನ್ನಂತಹವರ ನಿದ್ದೆಯ ಹನನ-ಪ್ರತಿ ಕ್ಷಣದ ಹಕೀಕತ್ತು
ಗಾಢ ಕತ್ತಲು ಚೂರಿ ತೂರಿ ಕತ್ತರಿಸಿದ್ಹಾಂಗೆ-ಅನಿಸಿ ಬೆಚ್ಚಿ ಎದ್ದು ಕೂತೆ
ನಕ್ಷತ್ರಕ್ಕೂ ನಕ್ಷತ್ರಿಕ ನಾನೇ ಕಣ್ರೀ-ಅಭಿಮಾನದಿ ಮತ್ತೆ ಒರಗಿದೆ

ನನ್ನೆಲ್ಲಾ ನೆನ್ನೆಗಳಿಗೆ ಈ ಇಂದನ್ನು ಈ ರಾತ್ರಿಯೇ ಖುದ್ದು ಸೇರಿಸಬೇಕು
ಸಿಕ್ಕ ಒಂದಿಷ್ಟು ಬೆಳಕಲ್ಲೇ ಈ ಕೆಲಸ ಸ್ವಯಂ ನಾನೇ ಮಾಡಬೇಕು
ನಕ್ಷತ್ರ ಬಿತ್ತೆಲ್ಲಿ ? ಧರಿತ್ರಿ ಆ ಬೆಳಕ ಆ-ಕ್ಷಣವೇ ನುಂಗಿ ನೀರು ಕುಡಿದಿತ್ತು
ಮತ್ತೆದ್ದೆ ಕಣ್ರೀ-ಸಿಕ್ಕಷ್ಟು ನೆನ್ನೆಗಳ ಹರವಿಕೊಂಡೆ-ಸುಮ್ಮನೆ ಕೂತು

ಒಮ್ಮೆಲೇ ಅನಿಸಿಬಿಡ್ತು-ನೆನ್ನೆಗಳೆಲ್ಲಾ-ಎಲ್ಲಾ ನಾಳೆಗಳ ಅಮ್ಮಂದಿರು
ಈ ಗಳಿಗೆಯೇ-ಸೂಲಗಿತ್ತಿ-ನಾಳೆಯ ಹೆರುವ ನೆನ್ನೆಗೂ ಹುಟ್ಟಿದವಳು
ಸೂಲಗಿತ್ತಿ ಕೆಲಸ ಮುಗಿಸಿ ನಿಯತ್ತಾಗಿ ಗಮ್ಯಾತೀತ ಮುಟ್ಟುತ್ತಾಳೆ
ಎಂದೂ ಪೂರ್ತಿ ನನಗೆ ದಕ್ಕದ ಆ ಗಳಿಗೆಗಳ ಸರಪಣಿ ಸೇರಿಬಿಡ್ತಾಳೆ

ಸತ್ತ ನೆನ್ನೆ- ಹುಟ್ಟದ ನಾಳೆಗಳು ಇನ್ನೆಷ್ಟು ದಿನ ಹಿಡ್ದು-ಬಡಿದಾವು-ಬಿಡ್ರಿ
ಹಿಡ್ದು ಬಡ್ದು ಕಟ್ಟಿ ಹಾಕ್ತವೆ-ಅದಿನ್ನೆಷ್ಟು ದಿನ?/ ಖಂಡಿತಾ ನೋಡ್ಲೇ ಬೇಕ್ರಿ
ಒಂದಿನ-ಆ ಗಳಿಗೆ-ಈ ಗಳಿಗೆಯ ಮಳಿಗೆಯ ಸುಲಿಗೆ-ಎಲ್ಲಾವನ್ನು ಶಪಿಸಿ
ಸುರಳೀತ ಗಂಟ್ಮಾಡಿ-ಒಂದೇ ಎಸೆತ-ಎಸೆದು ಹೋಗ್ತೀನಿ ಎಲ್ರ-ಕಣ್ತಪ್ಪಿಸಿ!


(2) ಸ್ತಿತ್ಯಂತರ
ಏನೇನಲ್ಲಾ ಆದವರು-ಎಲ್ಲಾ ನೆನ್ನೆಗಳಲಿ ಮುಳುಗಿಹೋಗಿದಾರೆ-ಖರೇ
ನಾನ್ಯಾವ ಪಡಪೋಸಿ-ತಿರುಬೋಕಿ ರಿಯಾಯಿತಿ ಬೇಡೋಕೆ-ಕನಿಷ್ಠ ಬಿಲ್ಲೆ!
ಇಲ್ಲಿನೆಲ್ಲರ ಬದುಕು-ಒಂದು Collective Comic Book-ನಗಬೇಕಷ್ಟೆ
ನಗು ಮುಗಿದು ಮತ್ನಕ್ಕು ನಕ್ಕಿದಕ್ಕಿನ್ನೊಮ್ಮೆ ನಕ್ಕು-ಪುಟ ತಿರುಗ್ಸಿ ನಡೀಬೇಕಷ್ಟೆ

ಅತಿಶ್ರೇಷ್ಟ ಶೋಕಸಭೆ,ಶಿಶುವಿನ ನಾಮಕರಣ,ಹೊಸ ಗಾಡೀ-ಖರೀದಿ
ಆಫೀಸರನ-“u-r-great!”..ಮಾತಿನ್ನು ಬರ್ದ ಮೊಮ್ಮಗಳ ಫಜೀತಿ
ಐವತ್ತು ವರ್ಷ ಹಿಂದಿನ “ಆ-ಹುಡುಗಿ” ಬರ್ದ ಪತ್ರ/ಈಗಿನ ಬೀಗರ ಗೋತ್ರ
ಎಲ್ಲವೂ-ಎಲ್ಲರೂ ಅಸಂಗತ-absurd….ಯಾವ್ದಾರಿಯೂ ಇಲ್ಲ-ಸು-ಸೂತ್ರ

“ಒಳ್ಳೇದೆ ಆಗತ್ತೆ”, “Thursday ಟಿ‌.ನರಸೀಪುರದಲ್ಲಿ ತ್ರೀ-ಓ-ಕ್ಲಾಕ್ ಸಿಕ್ತೀನಿ”
“ಜಾತಕ ಸರ್ಯಾಗಿಲ್ಲಾ-ಸಾರೀ”, “ಧೀರ್ಘಾಯುಸ್ಸು ನಿಮ್ಗೆ”,”20-ಕ್ಕಿರ್ತೀನಿ”
“ಟೈಲರ್ ಅಳ್ತೆ ಸರಿಯಾಗಿಲ್ಲಾ”,”ಚಟ್ಣೀಪುಡಿ ಚೆನ್ನಿಲ್ಲ-ಮಾಡಿ ತೇಂಗೋಳಲು”
ಎಲ್ಲಾ ಹೇಳಿಕೆಗಳೇ-ಮುಂದಿನ ನಾಳೆಗಳಷ್ಟೆ-ಆಲ್ಲದೆ-ಮತ್ತಷ್ಟು ಜೋಕುಗಳು!

ಸಿನಿಕತನದ ಮಾತಲ್ಲ ಸರ್,ಸಿನಿಕನಿಗು ನಗು-ಆದ್ರೆ ನಗದು-ಕಳ್-ಮಗಂದು
ಹೆಸರು ಮಾತ್ರ ಅಶೋಕ-ಅವ್ನಿಂದ್ಲೇ ಶೋಕವೃದ್ದಿ,ಲೆಕ್ಕ ಹಾಕ್ಕಳೀ ಈವತ್ನಿಂದು
ಅವನ್ಹೆಸರು ತೆಗೆದು ಯಾರ್ದಾನ ಹಾಕ್ಕೋಳಿ,ಬೇಕಿದ್ದರೆ ಬರ್ಕಳೀ ನಿಮ್ಮದೇ!
ನಾವೆಲ್ರೂ ಗೋಳ ಹೆಚ್ಸೀದೀವಿ-ಕಣ್ರೀ…ಸರ್ಜರಿ ಯಶಸ್ವಿ-ಆದ್ರೆ ಸಾವು ನಾಳೆಯೆ

ಇಲ್ಲಿ ಯಾವುದೂ ಘನ-ಗಂಭೀರವಾದ್ದಿಲ್ಲ…ಗಾಂಭೀರ್ಯದ ಲೇಪ ಹಚ್ಚುತ್ತಾರೆ
ಎಂದೂ ಬರದವನ ಕಾಯುತ್ತಾ ತಂ-ಬದುಕಿನ ಬಾಗಿಲು ತೆಕ್ಕೋಡೇ ಇರ್ತಾರೆ
ಹಿತ್ತಲಲ್ಲಿ ಕತ್ತಲಲ್ಲಿ ಗುಟ್ಟಿನಲ್ಲಿ-ಗಿಟ್ಟುತ್ತೆ ಹೆಚ್ಚು,ಇದು ವೃತ್ತಿ-ಪ್ರವೃತ್ತಿ-ಪ್ರವರ್ತನೆ
ಕಾಲೆಳೆಯೋರು ಅಸಂಖ್ಯ,ಊರ ತುಂಬಾ ಅಂಡೆಲೆಯೋರ ಭಿತ್ತಿ-ಚಿತ್ರಗಳೇ

ಒಮ್ಮೆ ಕೇಳಿದ ಜೋಕಾದ್ರೂ ಸರಿಯೇ ಮತ್ತೆ ನಕ್ಕು ಬಿಡಿ…ಅಳ್ತಿದ್ರೂ ನಕ್ಕು ಬಿಡಿ
ಕೆಲವರ ಹಾಸ್ಯ ಅಳಿಸತ್ತೆ-ದಿಟ,ಆದ್ರೂ ನೀವ್ನಕ್ಕು ಅಳುವ ಅವ್ರ ಜೇಬಿಗಿಟ್ಬಿಡಿ
ಈ ಜಗ-ಮೇಲ್ಗಗನ-ಮಧ್ಯೆ ಅರ್ಥರಾಹಿತ್ಯ,…it is a passing show-ಅಷ್ಟೇ
ನಾವಲ್ಲೆರೂ ಜೀವಂತ ವ್ಯಂಗ್ಯ ಚಿತ್ರಗಳೇ,..ನಮ್ಮಿಂದ ಇದರುತ್ಥಾನ ಜೋಕಷ್ಟೇ
ಕಾಲದ-ಕಾಣದ ತುಣುಕಿಷ್ಟು ತಾಯ್ಗರ್ಭಕ್ಕೆ ಸೇರಿ ಆಯ್ತೂ ನನ್ನ ಅವತಾರ
ಹೇಗೆ ನಿಲ್ಲಿಸಬೇಕು ನೀವೇ ಹೇಳಿ-ನನ್ನೆಲ್ಲಾ ನೆನ್ನೆಗಳ ಈ ಸತತ ಅವಾಂತರ
ಈ ತುಣುಕು ಮತ್ತದೇ ಕಾಲವ ಸೇರಬೇಕು-ಅದುವೇ ನೋಡಿ-ಸ್ಥಿತ್ಯಂತರ
ಆ ಎಲ್ಲಾ ಗಳಿಗೆಗಳೂ ನನ್ನಲ್ಲಡಕ-ನಾನೀಗ ಆ(ಅ)ಕಾಲ-ಪುರುಷನ ಕನ್ನಡಕ