ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾನು ಯಾರು ಮತ್ತು ಇನ್ನೊಂದು ಕವಿತೆ

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

ನಾನು ಯಾರು

ದೇಹ ನಾನಲ್ಲವೆಂದನು ಹುಡುಗ
ಮನಸೂ ನಾನಲ್ಲ
ಉಸಿರು? ಹೆಸರು? – ಅಲ್ಲವೆ ಅಲ್ಲ
ಏನೂ ಉಳಿಯಲಿಲ್ಲ!

ಆಹಾ! ಹಾಗೆ ಹೇಳಿದ್ಯಾರು?
ಹಿಡಿಯಿರಿ ಅವನನ್ನೇ!
ಕೋಹಂ ಕೋಹಂ ಎನ್ನುತ ನಾವು
ಹುಡುಕಿದ್ದವನನ್ನೇ!

ಕಳ್ಳನು ಕಳ್ಳನ ಹುಡುಕಲು ನಡೆದಿದೆ
ಇಡೀ ಬದುಕಿನೋಟ
ನಿಂತು ನೋಡಿದರೆ ಅರಿವಾಗುವುದು
ಮುಗಿಯಬಹುದು ಆಟ!

ಮನೆಯೊಡೆಯ

ಮನೆಯೊಡೆಯ ಕೆಲವೊಮ್ಮೆ ತಾರಸಿಯ ಮೇಲೆ
ಇನ್ನು ಕೆಲವೊಮ್ಮೆ
ಒಳಚರಂಡಿಯ ವ್ಯವಸ್ಥೆ
ಪರಿಶೀಲಿಸುತ್ತ
ಕೆಳಗೆ

ಬಹುಭಾಗ ಅವನಿರುವ ಮನೆಯ ಒಳಗೆ
ದುಡಿದು ಕಟ್ಟಿಸಿಕೊಂಡ ಮನೆಯ ಒಳಗೆ

ಗಾಡಿ ತೊಳೆಯುವ ಹೊತ್ತು
ಮನೆಯ ಮುಂದೆ

ತರಕಾರಿ ತಂದನವ, ಸಂಜೆ ಕಂಡೆ

ಉಳಿದಂತೆ ಅವನಿರುವ ತನ್ನ ಪಾಡಿಗೆ ತಾನು!
ತನ್ನ ಮನೆಯಲಿ ತಾನು!
ಈ ಭೂಮಿಗಿವ ಬಂದು ಉಪಯೋಗವೇನು?

ಮನೆಯಲ್ಲೆ ಅವನಿರುವ ಸದ್ದಿಲ್ಲದೆ
ಹೊತ್ತು ಸಾಗದೆ

ಏನೂ ತೋಚದೆ
ಏನೂ ಮಾಡದೆ

ಕೇಳುವೆ ನಾನು:

ಹೇ ಮನೆಯೊಡೆಯ

ಏನೂ ಮಾಡದೆ-
ಏನೂ ನೀಡದೆ-

ಹೀಗೆಯೇ ಒಂದು ದಿನ ಹೊರಡಬಹುದೆ!
ಇಲ್ಲೇ ಉಳಿಯಲಹುದೆ?

ಮನೆಯೊಡೆಯ ಕೇಳಿದರೆ ಏನು ಹೇಳುವೆ?


ಚಿತ್ರಕೃಪೆ: ಪಬ್ಲಿಕ್ ಡೊಮೇನ್ ಚಿತ್ರಗಳು