ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇವಣಸಿದ್ದಪ್ಪ ಜಿ.ಆರ್.
ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)

ಬೆಂಗಾಡಿನ
ಈ ಹಳ್ಳಿಯಲ್ಲಿ
ಬಿರುಬಿಸಿಲಿಗೆ ಬೆತ್ತಲಾದ
ರಸ್ತೆಯ ಮೇಲೆ
ನಾಯಿಯೊಂದು
ಛಿದ್ರವಾಗಿ ಬಿದ್ದಿದೆ.
ಓಡುವ ಕಾಲನ ಜೊತೆ
ಆಟವಾಡುವ ಮನುಷ್ಯನಿಗೆ
ಈ ನಾಯಿ
ಒಂದು ನಾಯಿ ಮಾತ್ರ!

ಯಾವ ನಾಯಿಗಳ
ಮೈಥುನದಿಂದುದುರಿ
ಬೀದಿಬೀದಿ ಅಂಡಲೆದಿತ್ತೋ!?
ಯಾರ ಮನೆಯ
ಅನ್ನದ ಋಣಕ್ಕೆ
ನಿಯತ್ತಿನ ಕಾವಲುಗಾರನಾಗಿತ್ತೋ!?
ಯಾವ ಮೋರಿಯ
ನೀರು ಕುಡಿದು
ದಾಹ ತಣಿಸಿಕೊಂಡಿತ್ತೋ!?
ಯಾವ ಪ್ರಾಣಿಯ
ಎಲುಬುಗಳ ಕಡಿದು
ಹಲ್ಲಿನ ಬೆದೆ
ತೀರಿಸಿಕೊಂಡಿತ್ತೋ!?
ಅದಾವ ನಾಯಿಯ
ಸಂಗವ ಮಾಡೆ
ಮತ್ತಾವ ನಾಯಿಯ
ಅಟ್ಟಿಸಿಕೊಂಡು ಹೋಗಿತ್ತೋ!?

ಅದೃಷ್ಟ ಒಲಿದಿದ್ದರೆ
ಈ ನಾಯಿ
ಷೋಕಿಲಾಲನ ಮನೆಯ
ಉತ್ಸವ ಮೂರ್ತಿಯಾಗಿರುತ್ತಿತ್ತು;
ಸರ್ಕಸ್ಸು ಕಂಪನಿಗಳಲ್ಲಿ
ಚಮತ್ಕಾರ ತೋರಿರುತ್ತಿತ್ತು;
ದೇಶಕ್ಕಾಗಿ ಮಡಿದು
ರಾಷ್ಟಧ್ವಜವ ಹೊದ್ದು
ಮಲಗಿರುತ್ತಿತ್ತು.

ಇದರ
ಪ್ರಬೇಧ,ಜಾತಿ,
ಕುಟಂಬ,ಗಣ,ವಂಶ
ವಗೈರೆಗಳ ಹುಡುಕಿಕೊಂಡು
ಹೋಗಲಾಗದು ಈಗ.
ಎಷ್ಟೇ ದೊಡ್ಡ
ಸಾಮ್ರಾಜ್ಯಕ್ಕೆ ಸೇರಿದ್ದರೂ
ಇಷ್ಟೇ…ಇಷ್ಟೇ…
ಇದರ ಬಾಳು!

ದೇವರ ಕುಲುಮೆಯಲ್ಲಿ
ಸೃಜಿಸಿದ
ಅಗಣಿತ ಜೀವಿಗಳಲ್ಲಿ
ನಾಯಿಯೂ ಒಂದು;
ಮನುಷ್ಯನೂ ಹೌದು!