- ಮುಕ್ತಿ ಕೊಟ್ಟುಬಿಡು - ಜನವರಿ 28, 2021
- ನಾವಿಬ್ಬರೇ - ಆಗಸ್ಟ್ 21, 2020
…. ಹಸಿದ ನಾವು
ಮಾಲತಿ ಶಶಿಧರ್ ಅವರ ಕವಿತೆಯಿಂದ
ಕಾಗೆಗಳಾಗಿ ಬಂದು
ಒಬ್ಬರಿಗೊಬ್ಬರು ತುತ್ತು
ತಿನಿಸುವ…ದಿನವಿಡೀ ಕರೆಂಟು ವೈರಿನ ಮೇಲೆ ಕಾಲಕಳೆದು ಮತ್ತೆ ಗೋರಿ ಸೇರುವ ..
ನೀನೊಬ್ಬನೇ ಮಸಣದ ದಾರಿ
ಹಿಡುದು ಮೋಸ ಮಾಡಿ ಬಿಟ್ಟೆ
ಇಲ್ಲಿ ನೋಡು..
ನನ್ನ ಹೃದಯ ಎರಡು ಹೋಳಾಗಿ
ಒಂದು ನಿನ್ನೊಡನೆ ಗೋರಿ ಸೇರಿದೆ..
ಇನ್ನೊಂದು ಕೆಟ್ಟ ನೆನಪಿನ
ಕಾಯಿಲೆಗೀಡಾಗಿದೆ…
ಕಾಲುಗಳು ನಡುರಾತ್ರಿಯಲ್ಲಿ ಗೂಬೆ,
ಬಾವಲಿಗಳ ಸ್ನೇಹ ಬೆಳೆಸಿ
ನೆನಪಿನ ಹಾದಿಗುಂಟ ಕೊನೆಯಿರದೆ
ಸುಮ್ಮನೆ ಸಾಗಿವೆ…
ಕೆನ್ನೆಗಳು ಆ ಸರಿ ಹೊತ್ತಲ್ಲಿ
ಜಳಕ ಮಾಡಿವೆ ಎರಡು
ಪುಟ್ಟ ಪುಟ್ಟ ಜಲಪಾತಗಳ
ಕೆಳಗೆ..
ನೆನಪಿನ ರೋಗಕ್ಕೆ ತುತ್ತಾದ
ಅರ್ಧ ಹೃದಯಕ್ಕೆ ಔಷಧಿ
ಎಲ್ಲೂ ಸಿಗದೇ ಬಹು ಬೇಗನೆ
ಪ್ರಾಣ ಬಿಡಲಿ
ನಿನ್ನ ಗೋರಿಯ ಸಮೀಪದಲ್ಲೇ
ನನ್ನದ್ದೂ ಇರಲಿ..
ಪ್ರತಿ ಬಾರಿ ಮಳೆ ಬಂದಾಗಲೂ
ಮಣ್ಣಿನಲ್ಲಿ ಲೀನವಾದ ನಾವು
ಧೂಳಾಗಿ, ಅದರ ಘಮಲಾಗಿ
ಹೋರ ಬಂದು ಆಲಿಂಗಿಸಿ
ಹಗುರಾಗುವವರೆಗೂ
ಅತ್ತು ಬಿಡುವ
ಅದೇ ಖುಷಿಯಲ್ಲಿ ನಮ್ಮ
ನಮ್ಮ ಗೋರಿಯಲ್ಲಿ ಬೆಚ್ಚಗೆ
ಮಲಗಿಬಿಡುವ ಮುಂದಿನ
ಮಳೆಯ ನಿರೀಕ್ಷೆಯಲ್ಲಿ..
ಪಿತೃಪಕ್ಷದಲ್ಲಿ ನಮ್ಮವರು
ಎಡೆ ಇಟ್ಟಾಗ ಹಸಿದ ನಾವು
ಕಾಗೆಗಳಾಗಿ ಬಂದು
ಒಬ್ಬರಿಗೊಬ್ಬರು ತುತ್ತು
ತಿನಿಸುವ, ದಿನವಿಡೀ ಕರೆಂಟು
ವೈರಿನ ಮೇಲೆ ಕಾಲಕಳೆದು
ಮತ್ತೆ ಗೋರಿ ಸೇರುವ ಮುಂದಿನ
ಪಿತೃಪಕ್ಷಕ್ಕಾಗಿ ಕಾಯುತ್ತ..
ನೀನಿಲ್ಲದ ಜಾಗವಾದರೂ
ಬೇಕೆ ನನಗೆ??
ಕನಸಿನಲ್ಲೂ, ಕಲ್ಪನೆಯಲ್ಲೂ
ಬದುಕಿನಲ್ಲೂ, ಸಾವಿನಲ್ಲೂ
ನಾವಿಬ್ಬರೇ ಬರೀ ನಾವಿಬ್ಬರೇ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ