ಇತ್ತೀಚಿನ ಬರಹಗಳು: ಮಲ್ಲಿಕಾರ್ಜುನ್ ಗೌಡ (ಎಲ್ಲವನ್ನು ಓದಿ)
- ನೆನಪಿನ ಡಬ್ಬಿ ತೆರೆದಾಗ - ಮೇ 15, 2020
ಟೀವಿಯಲ್ಲೀಗ
ನೀನೆ ಮೊದಲು ನೀನೆ ಕೊನೆಯೂ
ಎಂಬ ಸಿನಿಮಾ ಹಾಡು ಬಂದು ಹೋಯಿತು
ಆಕಾಶಕ್ಕೊಮ್ಮೆ ಮುಖ ಮಾಡಿ
ಕಣ್ಣಿಗೆ ಅಡ್ಡ ಬಂದ
ಲೈಟಿನ ಬೆಳಕನು ದೂಡಿ
ಭೇಟಿಯಾದಾಗೆಲ್ಲಾ
ನಾವು ನೋಡುತ್ತಿದ್ದ ನಕ್ಷತ್ರ ಹುಡುಕಿದೆ
ಕಾಣಲಿಲ್ಲ
ಈ ಹಾಡಿನಂತೆ
ನಾನು ನೀನು ಪದೇ ಪದೇ
ಇಂಥದ್ದೇ ಮಾತುಗಳನ್ನು ಹೇಳಿಕೊಂಡು
ಎಷ್ಟು ಬಾರಿ
ಮರಳಿನ ಗೂಡು ಕಟ್ಟಿ ಕೆಡವಿದ್ದೆವು?
ಹಾಡಿನ ಲಹರಿಯೊಂದು
ಈ ಕಡು ಬೇಸಗೆಯಲಿ
ಉರಿಯುವ ಮೈಗೆ
ನಿನ್ನ ಬಿಚ್ಚುಗೂದಲಿನಂತೆ
ನೀರ ಪರದೆಯ ತಾಗಿಸಿ
ನೆನಪಿನ ಡಬ್ಬಿಯ ತೆರೆಯಿತು
ಈ ನೆಲವನ್ನು
ಯಾವತ್ತೂ
ಹುಚ್ಚು ಬಳ್ಳಿಯಂತೆ ಹಬ್ಬಿರುವ ಪ್ರೇಮ
ಕಾಪಾಡಿ ಕೊಂದು
ಕಡೆದು ನಿಲ್ಲಿಸಿದ ಪ್ರತಿಮೆಗಳು
ನಿಶ್ಯಬ್ದ ಆವರಿಸಿದಾಗೆಲ್ಲಾ ಉಸಿರಾಡುತ್ತವೆ
ಈಗಲೂ ಹೊಲದ ಬದು
ಬೀಳಾದ ಬಯಲುಗಳ
ಸುಮ್ಮನೇ ತಿರುಗಿ ಹುಡುಕುತ್ತಿರುತ್ತೇನೆ
ಹೆಸರೇ ಗೊತ್ತಿಲ್ಲದ
ನೂರಾರು ಗಿಡ ಬಳ್ಳಿ ಹೂಗಳು
ಮರೆಯಲ್ಲಿ ನಗುವ ಕಾಪಿಟ್ಟುಕೊಂಡಿವೆ
ಎಲ್ಲೋ ಇರುವ ನಿನ್ನ ನೆನಪಿನಂತೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ