ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೆನಪುಗಳ ನಾವಿಕ

ಲಕ್ಷ್ಮಿ ಕೆ ಬಿ
ಇತ್ತೀಚಿನ ಬರಹಗಳು: ಲಕ್ಷ್ಮಿ ಕೆ ಬಿ (ಎಲ್ಲವನ್ನು ಓದಿ)

ಮರೆತ ನೆನಪುಗಳು
ಮರೆತು ನೆನಪಾಗಲು
ದುಃಖ ಉಮ್ಮಳಿಸಿ
ಅಳುವು ಬಿಕ್ಕಳಿಸಿ
ಧಾರಾಕಾರವಾಗಿ ಸುರಿಯುವುದು
ಇದು ಕಣ್ಣೀರೋ ಮಳೆಹನಿಯೋ?

ಮೋಡಗಳ ಬೆನ್ನಹಿಂದೆ
ನಿಂತು ಮರೆಯಾಗಿ
ಅಳುತಡೆದು ಮಡುಗಟ್ಟಿದ
ನೋವು ಹರಿದು
ಕಣ್ಣೀರ ಮಳೆಹನಿಯಾಗಿ
ಒಲವಿನೆದೆಯ ಭುವಿಯ ತಾಕಲು

ತಾಪದೊಡಲಲಿ ಬೆಂದು
ನೊಂದ ಭುವಿಯೊಡಲು
ನಗುವಾಗಿ ಮಗುವಾಗಿ
ಮಳೆಯೊಡನೆ ಒಲವಾಗಿ
ಸಂತಸದ ಭಾವದಲಿ
ಜಗಕ್ಕೆಲ್ಲ ಒಲವ ಚೆಲ್ಲಲು

ಕಷ್ಟ-ಸುಖಗಳ ಬಂಧ
ಜಗಕೆ ಒಲವಿನಾನಂದ
ನಗುವ ತೇರು ಅಳುವ ಸೂರು
ಮತ್ತದೇ ಬೇಸರ
ಆವಿಯಾಗಿ ಮುಗಿಲುಮುಟ್ಟಿದ
ನೋವ ನೆನಪುಗಳು

ಮತ್ತದೇ ನೆನಪುಗಳು
ನೆನಪಾಗಲು ಮರೆತು
ದುಃಖ ಉಮ್ಮಳಿಸಿ
ಅಳುವು ಬಿಕ್ಕಳಿಸಿ
ಧಾರಾಕಾರವಾಗಿ ಸುರಿಯುವುದು
ಮತ್ತೆ ತಾ ಹಗುರಾಗಲು
ಇದು ಕಣ್ಣೀರೋ ಮಳೆಹನಿಯೋ?