ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇವಣಸಿದ್ದಪ್ಪ ಜಿ.ಆರ್.
ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)

ಬಿಟ್ಟುಬಂದ ಊರಿಗೆ
ಮತ್ತೆ ಹೊರಟು
ಆಗ ಹಿಡಿಯುತ್ತಿದ್ದ
ಬಸ್ಸನ್ನು ಮತ್ತೆ ಹಿಡಿದಾಗ
ಅದೇ ಕಂಡಕ್ಟರ್
ಎದುರುಗೊಂಡು
ಯುಗಾದಿಯ ಚಂದಿರನ
ಕಂಡಂತೆ ಹಿಗ್ಗಿ
ಆಡಬೇಕಿದ್ದ
ಮಾತುಗಳನ್ನೆಲ್ಲಾ ಆಡಿ
ಸಮಾಧಾನಗೊಂಡ.
ಆ ಬಸ್ಸೂ ಸಂಭ್ರಮಿಸಿದಂತೆ
ಮಾಮೂಲಿಗಿಂತ
ವೇಗವಾಗಿ ಓಟಕಿತ್ತಿತು.

ದಾರಿಗುಂಟ
ಸಾಲುಮರಗಳು, ನಿಲ್ದಾಣಗಳು,
ಹಕ್ಕಿಪಿಕ್ಕಿಗಳು,
ದಿಢೀರನೆ ಅಡ್ಡಬರುವ
ನಾಯಿಗಳು, ಎಮ್ಮೆಗಳು,
ಮುಂಗಸಿಗಳು, ಬೆಕ್ಕುಗಳು,
ನನ್ನಂತೆ
ಕಣ್ಣು, ಕಿವಿ, ಮೂಗು, ಬಾಯಿ
ವಗೈರೆಗಳ ಹೊಂದಿರುವ
ಆಕೃತಿಗಳಲ್ಲಿ
ಪರಿಚಿತ ಭಾವವನರಸುತ್ತಾ
ಹೋಗುತ್ತಿದ್ದೆ.

ಆ ಊರು,
ಆ ಊರಿನಲ್ಲೊಂದು ಕೇರಿ,
ಆ ಕೇರಿಯಲ್ಲೊಂದು ಮನೆ,
ಆ ಮನೆಗೊಂದು ಮಹಡಿ,
ಮಹಡಿಯ ಮೇಲೊಂದು ಕೊಠಡಿ,
ಆ ಕೊಠಡಿ
ನಾನಿರುವಷ್ಟು ಕಾಲ
ನನ್ನ ಅರಮನೆ.

ಇಲ್ಲಿರುವಂತೆಯೇ
ಸೂರ್ಯ ಅಲ್ಲಿಯೂ
ಪೂರ್ವದಲ್ಲಿ ಹುಟ್ಟಿ
ಪಶ್ಚಿಮದಲ್ಲಿ ಮುಳುಗುತ್ತಾನೆ.
ಈ ಸೂರ್ಯ
ಉದಯಿಸುವ ಪರ್ವಕಾಲಕ್ಕೆ
ಆ ಸೂರ್ಯನೂ
ಸಾಕ್ಷಿಯಾಗಿದ್ದಾನೆ.

ಯಾವುದೋ ಕಾಲದಲ್ಲಿ
ಜನ ತಳವೂರಿ
ಊರಾಗಿದ್ದ,
ಬೆಳೆದು ಪಟ್ಟಣವಾಗಿದ್ದ
ಜಾಗದಲ್ಲಿ
ನಾನೂ ಊರಬೇಕಾಗಿದ್ದು
ಉದರ ನಿಮಿತ್ತ
ಮಾತ್ರ ಆಗಿರಲಾರದು.

ಇಲ್ಲಿಯಂಥ ಮನುಷ್ಯರು
ಅಲ್ಲಿಯೂ ಇರಲು
ಒಳ್ಳೆಯವರು ಕೆಟ್ಟವರೆಂದು
ವಿಂಗಡಿಸಬೇಕಿಲ್ಲ.
ಒಳ್ಳೆಯವರಾರೋ ಕೆಟ್ಟವರಾರೋ
ಯಾರ ಹಣೆಯ ಮೇಲೆ
ಲೇಬಲ್ ಅಂಟಿಸಿರುವುದಿಲ್ಲ.

ಆ ಊರು, ಅಲ್ಲಿನ ಕೇರಿಗಳು,
ಗುಡಿಸಲುಗಳು, ಮನೆಗಳು, ಮಹಡಿಗಳು,
ಗಿಡಮರಬಳ್ಳಿ, ಕೆರೆಕೊಳ್ಳ,
ಮಣ್ಣು, ಮಸಣ,
ಮಂದಿರಮಸೀದಿಗಳು,
ಹರಸಿದ ಹೃದಯಗಳು,
ತಿದ್ದಿದ ಮನಸುಗಳು,
ಬಡಿಸಿದ ಕೈಗಳು,
ಸ್ಪಂದಿಸಿದ ಜೀವಗಳ
ನೆನಪಿನ ಬುತ್ತಿಯ
ಕಟ್ಟಿಕೊಂಡು ಬಂದಿರಲು
ಅದು ಅಕ್ಷಯಪಾತ್ರೆಯಾಗಿ
ನೆನಪಿನ ಸವಿಯನುಣಿಸುತ್ತಿರಲು
ಬಿಟ್ಟುಬಂದ ಊರು
ಬಿಟ್ಟುಕೊಡುವುದಿಲ್ಲ!