ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬುದ್ಧ,ಬಸವ,ಅಂಬೇಡ್ಕರ್,ಗಾಂಧಿ ಮತ್ತು ನಾವು

ರೇವಣಸಿದ್ದಪ್ಪ ಜಿ.ಆರ್.
ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)

ಬುದ್ಧ, ಅಂಬೇಡ್ಕರ್
ಮಹಾ ಪರಿನಿರ್ವಾಣ
ಹೊಂದಿದರು;
ಬಸವ ಲಿಂಗೈಕ್ಯರಾದರು;
ಗಾಂಧಿ ಹುತಾತ್ಮರಾದರು.
ಸುಮ್ಮನೆ
ಅವರು ಹೋದರೆನಲು
ಅವರು ಬದುಕಿದ್ದ
ಗಾಢ ಗಾಂಭೀರ್ಯ
ತೆಳುವಾಗಿ
ತೋರುತ್ತದೆ!

ನಮಗೆ ನಾವೇ
ಬುದ್ಧ, ಬಸವ, ಅಂಬೇಡ್ಕರ್
ಗಾಂಧಿ
ಆಗದೆ ಹೋದರೆ,
ಮಹಾತ್ಮರೆಂದು
ಅವರ ಪಟಗಳ
ನೇತುಹಾಕಿ
ಕೈಮುಗಿದು
ಕೈತೊಳೆದುಕೊಂಡರೆ,
ಸಹಜೀವಿಗಳೊಳಗಿನ
ಪರಮಾತ್ಮನಿಗೆ
ನಮ್ಮ ಕಣ್ಣು
ಕುರುಡಾಗುತ್ತದೆ!

ಬುದ್ಧ, ಬಸವ,ಅಂಬೇಡ್ಕರ್,
ಗಾಂಧಿ
ನಮಗೆ ದಕ್ಕಿದ್ದೆಷ್ಟು?
ಅವರ ಓದು, ಅರಿವು,
ಬಾಳ ಹರಹು
ನಮ್ಮ ಹೊಕ್ಕಿದ್ದೆಷ್ಟು?
ಅವರ ಅಪಾರ ಕರುಣೆಯ
ಕಡಲು
ನಮಗೆ ರಕ್ತಗತ
ಆಗಿದ್ದೆಷ್ಟು?

ನಮ್ಮ ನಮ್ಮ
ಮೂಗಿನ ನೇರಕ್ಕೆ
ನಮ್ಮ ಬುದ್ಧ,
ನಮ್ಮ ಬಸವ,
ನಮ್ಮ ಅಂಬೇಡ್ಕರ್,
ನಮ್ಮ ಗಾಂಧಿ
ನಮ್ಮವರಾಗುತ್ತಾರೆ!

ನಮ್ಮ ನಮ್ಮ
ಬುದ್ಧರು, ಬಸವರು, ಅಂಬೇಡ್ಕರ್ಗಳು,
ಗಾಂಧಿಗಳು
ತಮ್ಮ ತಮ್ಮಲ್ಲಿ
ಘರ್ಷಣೆಗಿಳಿದಾಗ
ಬುದ್ಧ,
ಬಸವ,
ಅಂಬೇಡ್ಕರ್,
ಗಾಂಧಿ,
ನಿಜಕ್ಕೂ
ಹೋಗುತ್ತಾರೆ!