ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭತ್ತ ಎಲ್ತಂದಿದ್ದೇ ಭರ್ತ

ಶ್ರೇಯಸ್ ಪರಿಚರಣ್
ಇತ್ತೀಚಿನ ಬರಹಗಳು: ಶ್ರೇಯಸ್ ಪರಿಚರಣ್ (ಎಲ್ಲವನ್ನು ಓದಿ)

ಹಗೇವು ಖಾಲಿ : ಭತ್ತವಿಲ್ಲ
ಬತ್ತಳಿಕೆ ಬರಿದು : ಬಾಣಗಳಿಲ್ಲ
ತಲೆಯೊಳಗೊ ? ಎಲ್ಲಾ ಶೂನ್ಯ
ಹೇಗೆ ಮುಗಿಸಲೀ ಈ ಪದ್ಯ
ಇನ್ನಾಗೆನೆಂದೂ ಅನನ್ಯ, ಧನ್ಯ
ಅದ್ಸರಿ, ಭತ್ತ ಎಲ್ತಂದಿದ್ದೆ ನಾ ಬರ್ತ?
ಬಾಣ, ಬತ್ತಳಿಕೆ ಸಹ ಎಲ್ಲಿತ್ತ ?
ಬುರುಡೆ ಇತ್ತು : ಆದ್ರೆ ಖಾಲಿ ಖಾಲಿ
ಬಂದದ್ದು ಬಂದದ್ದೇ, ತುಕಾಲಿ
ನಾನು-ನಂದೆಲ್ಲಾ ಕೆಟ್ಟ ಖಯಾಲಿ

ಬಂದಾಗಿದ್ದದ್ದು ಒಂದ್ಪುಟ್-ಕಾಯಿ:
ಅಷ್ಟು-ಬಿಟ್ಟ-ಕಣ್ಣು, ತೆರೆದ ಬಾಯಿ
ಕಾಯಿ ಕಾಯವು : ಬಾಯ್ವೂರ್ಬಾಯಿ
ಆ ಕೂಸ್ಗೆ ಈಗಾಗ್ಲೇ ಅರವತ್ನಾಲ್ಕು
ಇಲ್ಲೀವಗೂ೯ ತುಂಬಿದ್ದು ಸಾಕ್ಸಾಕು
ಸಂಪೂರ್ಣ ಖಾಲಿಯಾಗ್-ಬಿಡಬೇಕು.
ಬೆಳ್ಬೆಳೆದು ಭತ್ತ ತುಂಬ್-ತುಂಬಿತ್ತೂ ಹಗೇವು
ಹಾಗೆ ಮನದುಂಬಿ ನಾವೆಂದೂ ಏನೂ ಆಗೆವು
ಹಗೇವಿಗೆ ಕಣ್ಮುಂದೆ ಹಿಂದೆ ತುಂಬಿದ್ದರ ತೃಪ್ತಿ
ಜೀವ್ನವೆಲ್ಲಾ ನಮಗತೃಪ್ತಿಯೇ ಪೂರ್ತಿ

ಬಾಣ, ಬತ್ತಳಿಕೆ : ಶಸ್ತ್ರ, ಹೆದರಿಕೆ
ದೇಹವಿದ್ರೆ ತಾನೆ, ಪ್ರಾಣಕ್ಬೆದರಿಕೆ
ಭತ್ತ-ಬಾಣ-ದೇಹ-ನಮ್ಮದೇ ಅಲ್ಲ
ಅಸಲಿಗೆ ಈ ಹೆಸರೇ ನಮ್ಮದಲ್ವಲ್ಲಾ
ನಮ್ಮದನ್ನೋದು ಏನೇನೂ ಇಲ್ಲಾ ಬಿಡ್ರಿ
ಒಂದಿನ, ಎಲ್ಲಾ ನೀಗಿಯೇಬಿಡ್ತೀವಲ್ರಿ
ಹಗೇವಿನ ಹರವಿಗೆ ಭತ್ತ ಕಡಿಮೆ
ಇದೇತಾನೇ, ಬದುಕಿನ ಮಹಿಮೆ ?
ಎಲ್ಲೋ ಕಮ್ಮಿಯಾಗಿದೆ ದುಡಿಮೆ
ಖಂಡಿತಾ ಜಾಸ್ತಿ ನಮ್ಮೆಲ್ರ ಅಹಮ್ಮೇ

ಬುರುಡೆ ಖಾಲಿ, ಹಗೇವೀನಲೇನಿಲ್ಲ
ಬದುಕೇ ಖಾಲಿ, ಹೋಗಲಡ್ಡಿಯಿಲ್ಲ
ಕೂಡ್ಸಿದ್ದು, ಗಳ್ಸಿದ್ದು, ಕೊಟ್ಬಿಡಬೇಕು
ಮುಗಿಯೋಕ್ಮುಂಚೆ right ಹೇಳ್ಬೇಕು
ಮಸಿ ಒಣಗಕ್ಮುಂಚೆ ಸಹಿ ಹಾಕ್ಬೇಕು
Sartre ಹೇಳಿದ್ದೇ ಸರಿಯೇನೊ :
“man is a useless passion”
ಯೂಜೀ ಇನ್ನೂ ಹೆಚ್ಚು ಕರೆಕ್ಟ್ :
“man is just a THOUGHT,
he is a MEMORY, just that”