- ಬೇಸರವ ಕಡಿಮೆ ಮಾಡುವ ಮಲಾಮು… - ಮಾರ್ಚ್ 13, 2023
- ಕೆಟ್ಟ ಚಟವೇತಕೆ? - ಜೂನ್ 20, 2022
- ಭರವಸೆಯ ದಾರಿ… - ಆಗಸ್ಟ್ 24, 2021
ಚಟಪಟನೆ ಸುರಿಯುವ ಮಳೆಹನಿ
ಕಾದ ಭೂಮಿಯನ್ನೇನೋ ತಣಿಸುತಿತ್ತು
ಆದರೆ ನನ್ನದೆಯ ಕಾವನು ತಣಿಸಲು
ನನ್ನಾಕೆ ಎನಿಸಿಕೊಂಡವಳು ಬರಲೇ ಇಲ್ಲ…
ಅದಾಗಲೇ ಬಿದ್ದ ಮಳೆಹನಿಯ ಜೋರಿಗೆ
ತನ್ನ ಮೈಮೇಲಿನ ಧೂಳ ಕೊಡವಿ
ನಿಸರ್ಗವೇನೋ ಅಂದ ಹೆಚ್ಚಿಸಿಕೊಂಡು ನಿಂತಿದೆ
ಆದರೆ ಅದಾಗಲೇ ಪ್ರೀತಿಯಿಂದ ಸಿಂಗಾರಗೊಂಡ
ನನ್ನದೆಯ ಕದವ ತೆರೆಯಲು
ನನ್ನಾಕೆ ಎನಿಸಿಕೊಂಡವಳು ಬರಲೇ ಇಲ್ಲ…
ಅದೆಂತಹ ಬಾಂಧವ್ಯವೋ ತಿಳಿಯೆ
ಈ ಭೂಮಿಗೂ ಬಾನಿಗೂ
ಸ್ಪರ್ಶಿಸುವ ಮನಸಾಯಿತೆಂದರೆ
ಬೇಸಿಗೆ ಕಾಲವಾದರೂ ಸರಿಯೇ
ಬಾನಿಂದ ಜಿಗಿವ ಮಳೆಹನಿ
ಭೂಮಿಯನೊಮ್ಮೆ ಸ್ಪರ್ಶಿಸಿ
ಹೊರಟು ಹೋಗುತ್ತದೆ…
ಆದರೆ ಅದೇಕೋ
ತುಂಬು ಭರವಸೆಯಿಂದ
ಬರುತ್ತೇನೆಂದು ಹೇಳಿ ಹೋದವಳು
ನಾಲ್ಕು ವರ್ಷಗಳು ಕಳೆದರೂ
ಇದುವರೆಗೆ ನನ್ನೆಡೆಗೆ
ಮುಖ ಮಾಡಿಯೇ ಇಲ್ಲ…
ಈ ಇಬ್ಬನಿ ಇಳೆಯನ್ನ
ತಬ್ಬುವುದ ನೋಡಿದರೆ
ನನಗೂ ನನ್ನಾಕೆಯನ್ನ
ಮೋಹಿಸುವ ಮನಸು ದುಪ್ಪಟ್ಟಾಗುತ್ತದೆ
ಅದೇ ಕಾರಣಕೆ
ಪ್ರತಿದಿನವೂ ಹೊಸದೊಂದು
ನೆಪ ಹುಡುಕುವ ಮನಸು
ಆಕೆ ಬಂದೇ ಬರುವಳೆಂಬ
ಧೃಡ ನಿಲುವಿನೊಂದಿಗೆ
ಆಕೆ ಸವೆಸಿ ಹೋದ
ಭರವಸೆಯ ದಾರಿಯೆಡೆಗೆ
ಮುಖ ಮಾಡಿ ಕಾಯುತಿರುತ್ತದೆ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ