ಕುಂದಾನಗರ ಬೆಳಗಾವಿಯ ವಸಂತ ಕುಲಕರ್ಣಿ ಪ್ರಸ್ತುತ ಚೆನ್ನೈಯಲ್ಲಿ ವಾಸವಾಗಿದ್ದಾರೆ. ಅಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮುಖ್ಯ ಎಂಜಿನೀಯರ್ ಎಂದು ಕೆಲಸ ಮಾಡುತ್ತಿದ್ದಾರೆ. ಸಿಂಗಪುರದಲ್ಲಿ ಸುಮಾರು ಹದಿನೇಳು ವರ್ಷಗಳ ಕಾಲ ವಾಸವಾಗಿದ್ದ ಅವರ ಸಾಹಿತ್ಯಾಸಕ್ತಿಗೆ ಸಿಂಚನ ನೀಡಿದ್ದು ಸಿಂಗಪುರ ಕನ್ನಡ ಸಂಘ. ಕನ್ನಡ ಸಂಘ (ಸಿಂಗಪುರ)ದ ಸಿಂಗಾರ ಮತ್ತು ಸಿಂಚನ ಪತ್ರಿಕೆಗಳಿಗೆ ಕವಿತೆಗಳು, ಸಣ್ಣ ಕಥೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ಸಂಘದ ಸಿಂಗಾರ ಮತ್ತು ಸಿಂಚನ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿ ಕೂಡ ಕೆಲಸ ಮಾಡಿದ್ದಾರೆ.ಅಂತರ ಮತ್ತು ಇತರ ಕವನಗಳು ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಒನ್ ಇಂಡಿಯಾ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಸತತ ಎರಡು ವರ್ಷಗಳ ಕಾಲ ಅಂತರ್ಮಥನ ಎಂಬ ಸಾಪ್ತಾಹಿಕ ಅಂಕಣವನ್ನು ಬರೆದಿದ್ದಾರೆ. ಅವರ ಕವನ ಮತ್ತು ಲೇಖನಗಳು ವಿಜಯಕರ್ನಾಟಕ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಮೊನ್ನೆ ಯಾರೋ ಎಸೆದ ಬೀಜವಿಂದು ಮೊಳೆತಿದೆ.
ಕರಿಯದೋ, ಬಿಳಿಯದೋ ಅದು ಯಾವ ಬಣ್ಣದ್ದು,
ಬೀಜವದು ಹಸಿರಾಗಿ ಇಂದು ತಲೆಯನೆತ್ತಿದೆ.
ಅದು ಯಾವ ಆಸೆಯದು, ಅದು ಯಾವ ಭಾವವದು
ಮಣ್ಣ ಒಡಲಲ್ಲಿ ಅಂಕುರಿಸಿದೆ? ಚಿಗುರಾಗಿದೆ?
ಮಣ್ಣ ಮಮತೆಯೋ ಒಳಗಿನ ಬಯಕೆಯೋ ಕುಡಿಯು
ಮೊಳಕೆಯೊಡೆದಿದೆ, ಆಗಸದತ್ತ ಮುಖ ಮಾಡಿದೆ.
ಮಳೆ ಬಿಸಿಲುಗಳ ನಡುವೆ ಬೆಳೆವ ತವಕ ಮೂಡಿದೆ.
ಕಾಳುಗಳ ಕಾತರಿಕೆ ಒತ್ತಾಸೆ ಭೂತಾಯಿ
ಹನಿಯುಣಿಸಿ, ಆಸರೆಯ ನೀಡುತ್ತ ಬೆಳೆಸುವಳು.
ಬೀಜವದು ಸಸಿಯಾಗಿ ಮರವಾಗಿ ಮಾರ್ಪಡುತ
ಗಟ್ಟಿನೆಲೆ ಪಡೆವಂತೆ ಮಾಡುವಳು ಮಾತಾಯಿ.
ಅಚ್ಚರಿಯ ವಿಷಯವಿದು ನಿಸರ್ಗದ ನಿಜತಿರುಳು
ನಿಸ್ವಾರ್ಥದಲಿ ನಡೆವ ಸೇವೆಯಿದು ಅನವರತ.
ಹೆಚ್ಚಿನ ಬರಹಗಳಿಗಾಗಿ