- ಮರಳಿ ಬರುವೆ - ಫೆಬ್ರುವರಿ 21, 2021
- ಅವ್ವ ಅಳುಕದ ಅಕ್ಷರ - ಅಕ್ಟೋಬರ್ 19, 2020
ಸಾಕು, ಸಾಕು ಮಾಡು ನೋವಿನ ಹಾಡು
ಕೇಳಲಾಗದು, ತಾಳಲಾಗದು ಮನಕೆ
ಎದೆಯಲಿ ಒಲವು ಬೀಜ ಬಿತ್ತಲು
ಮತ್ತೆ ಮರಳಿ ಬರುವೆ, ನೋವಿಗೆ ಮದ್ದು ಹೊತ್ತು ತರುವೆ
ಎಲ್ಲ, ಎಲ್ಲ ನೋವುಗಳನು ಮರೆತು ನಕ್ಕು ಬಿಡು ಒಲವೆ!
ನೋವು ನಲಿವು ನೆಳಲು ಬೆಳಕಿನ ಆಟ
ಬಾವುಟ ಹಿಡಿದು ಓಡಾಡಿದ್ದೇ ಭೂಪಟ
ಬಯಲ ಆಲಯಕೆ ಬಣ್ಣ ಬಳೆಯುವ ಹುಂಬತನಕೆ
ಅಂಕುಶ ಹಿಡಿದು ಮತ್ತೆ ಮರಳಿ ಬರುವೆ
ನೋವಿನ ಹಾಡು ಹಾಡದಿರು ಒಲವೆ!
ಶ್ರಮದ ಉಸಿರು ಕೆಂಪಗೆ ಕಾದು
ತಡ ರಾತ್ರಿಯಾದರೂ ಸರಿ ಸುಡುವುದು ಚಿನ್ನದ ಬೇಲಿ
ಮೊಳೆ ಹುಗಿದರೂ ಎದೆಪಾದ ಉಕ್ಕಾಗುವುದು
ದಿಕ್ಕು ದಿಕ್ಕಿಗೆ ದಿಕ್ಕಾರ ದನಿಯಾಗಿ ಮತ್ತೆ ಮರಳಿ ಬರುವೆ
ನೋವಿನ ಹಾಡು ಹಾಡದಿರು ಒಲವೆ!
ಬೆಂಕಿ ಬೀಳದ ಒಲೆ ಬೆಳಕು ಕಾಣದ ಎದೆ
ಹಸಿವನು ಹೆತ್ತು ಉಸಿರಲಿ ಜೋಗುಳ ಹಾಡುತ್ತಿದೆ
ಜಗವ ಲಾಲಿಸುತ್ತಿದೆ ಹಸಿದ ಕರುಳಿನ ಕನಸು
ನನಸಾಗಿಸಲು ಮತ್ತೆ ಮರಳಿ ಬರುವೆ
ನೋವಿನ ಹಾಡು ಹಾಡದಿರು ಒಲವೆ
ಎಲೆ-ಕಾಂಡ, ಹೂ-ಕಾಯಿ ಕಲ್ಲು ಸಕ್ಕರೆಯ
ಎದೆಯ ಜೋಳಿಗೆಯಲಿ ಸಮ ಬೆರಸಿರುವೆ
ಕ್ರೂರತೆಯ ಮುಳ್ಳು-ಕಂಟಿ ಎದೆಯಲ್ಲಿ
ಪ್ರೇಮದ ಹೂವಾಗಿಯರಳಿ ಮತ್ತೆ ಮರಳಿ ಬರುವೆ
ನೋವಿನ ಹಾಡು ಹಾಡದಿರು ಒಲವೆ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ