- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಈ ಭೂಮಿಯ ಮೇಲೆ ಪ್ರತಿ ನಿಮಿಷಕ್ಕೆ ಹುಟ್ಟುವವರೊಂದಷ್ಟು ಜನ, ಸಾಯುವವರೂ ಇನ್ನೊಂದಷ್ಟು ಜನ. ಈ ವರ್ತುಲದಲ್ಲಿದ್ದೂ ಕೆಲವರು ಹುಡುಕುವುದು ಬದುಕಿನ ಅರ್ಥವನ್ನು ಅಥವಾ ಬದುಕಿನ ಸಾರ್ಥಕತೆಯನ್ನು. ಇಷ್ಟೆಲ್ಲಾ ಜನ ಹುಟ್ಟಿ ಸಾಯುವಾಗ, ನನ್ನ ಹುಟ್ಟಿನ ಉದ್ದೇಶವಾದರೂ ಎಂಥದ್ದು ಅನ್ನುವ ಒಂದು ಪ್ರಶ್ನೆ ಹುಟ್ಟಿಕೊಂಡರೆ, ಅದು ಪದೇ ಪದೇ ಕಾಡುತ್ತದೆ. ಕೆಲವರು ಉತ್ತರ ಕಂಡುಕೊಳ್ಳುತ್ತಾರೆ, ಇನ್ನು ಕೆಲವರು ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಈ ಭೂಮಿಯ ಋಣ ಮುಗಿದಿರುತ್ತದೆ. ಹಲವರಲ್ಲಿ ಇಂಥದ್ದೊಂದು ಪ್ರಶ್ನೆ ಹುಟ್ಟುವುದೇ ಇಲ್ಲ! ಇಲ್ಲಿನ ಖಾಯಂ ವಾಸಿಗಳಂತೆ ವರ್ತಿಸುತ್ತಾರೆ. ಒಂದು ಮಾತಿದೆ; ನಾವು ಈ ಭೂಮಿಗೆ ಕೇವಲ ಪ್ರಯಾಣ ಬಂದವರು, ಅದು ಮುಗಿದ ತಕ್ಷಣ ಹೊರಡುತ್ತೇವೆ ಅಂತ. ಬಹುಶಃ ಈ ಥರದ ಕೆಲವು ಯೋಚನೆಗಳೇ ನಾವು ಬದುಕನ್ನು ನೋಡುವ ಹಾಗೂ ಅದರೊಂದಿಗೆ ವರ್ತಿಸುವ ಪರಿಯನ್ನು ಬದಲಾಯಿಸುವುದು. ಪ್ರಯಾಣ ಅಂದರೆ ಕೆಲವೇ ದಿನಗಳದ್ದು, ಪ್ರತಿ ನಿಮಿಷವೂ ಅಮೂಲ್ಯ ಅಲ್ಲವೇ! ಮನುಷ್ಯ ಇನ್ನಷ್ಟು ಚುರುಕಾಗುವುದು ಹೀಗೆಯೇ.. ಇಂಥದ್ದೊಂದು ಬದುಕಿನ ಅರ್ಥವನ್ನು ಹುಡುಕಿಕೊಳ್ಳಲು ಹೊರಟ ಹುಡುಗಿಯೊಬ್ಬಳ ಕತೆಯೇ ಜಾನ್ ಕರನ್ ( John Curran ) ನಿರ್ದೇಶನದ ೨೦೧೩ರ ಚಿತ್ರ ‘ಟ್ರ್ಯಾಕ್ಸ್’ ( Tracks )


ರಾಬಿನ್ ಡೇವಿಡ್ಸನ್ ಅನ್ನುವ ಹುಡುಗಿಗೆ ಆಸ್ಟ್ರೇಲಿಯಾದ ಆಲಿಸ್ ಸ್ಪ್ರಿಂಗ್ಸ್ ಇಂದ ಇಂಡಿಯನ್ ಸಾಗರದ ತನಕ ಅಂದಾಜು ಸುಮಾರು ೨೦೦೦ ಮೈಲಿಯನ್ನು ಕಾಲ್ನಡಿಗೆಯ ಮೂಲಕ ಮರಳುಗಾಡಿನಲ್ಲಿ ಕ್ರಮಿಸಬೇಕೆಂಬ ಕನಸು. ಕೆಲವರ ಕನಸುಗಳು ನಮಗೆ ಹುಚ್ಚು ಅಂತಲೇ ಅನ್ನಿಸುವುದು. ಇವಳ ಆಸೆಯನ್ನೂ ಬಹಳಷ್ಟು ಜನ ಅಂದುಕೊಂಡಿದ್ದು ಹಾಗೆಯೇ; ಹಗಲುಗನಸು ಕಾಣುತ್ತಾಳೆ ಹುಡುಗಿ ಅಂತ ನಕ್ಕವರೇ ಹೆಚ್ಚು. ಆದರೆ, ಅವಳು ನಿರ್ಧರಿಸಿಯಾಗಿತ್ತು. ಅವಳೊಬ್ಬಳೇ ಮೂರು ಒಂಟೆಗಳು ಹಾಗೂ ಅವಳ ನಾಯಿಯ ಜೊತೆ ಈ ಥರದ್ದೊಂದು ಪ್ರಯಾಣ ಮಾಡಬೇಕೆಂದು. ಆದರೆ ಈ ಪ್ರಯಾಣ ಯಾವುದೋ ಒಂದನ್ನು ಯಾರಿಗೋ ಮಾಡಿ ತೋರಿಸುವ ಸಲುವಾಗಿಯೋ ಅಥವಾ ಏನನ್ನೋ ಗೆದ್ದೆನೆಂದು ಬೀಗುವ ಸಲುವಾಗಿಯೋ ಆಗಿರಲಿಲ್ಲ. ಇದು ಕೇವಲ ಅವಳ ಬದುಕಿನ ಆಸೆ ಅಷ್ಟೇ. ಅದು ಅವಳಿಗಾಗಿ ಮಾತ್ರವೇ. ಬಹುಶಃ ಮನುಷ್ಯನ ಉದ್ದೇಶ ಒಳ್ಳೆಯದಾಗಿದ್ದರೆ ಹೋದಲ್ಲೆಲ್ಲಾ ಏನೋ ಒಂದು ಸಹಾಯ ದೊರೆಯುತ್ತದೆ. ಅನುಮಾನಿಸಿದರೂ ಜನ ಬೆಂಬಲಿಸುವುದಕ್ಕೆ ಜೊತೆ ನಿಲ್ಲುತ್ತಾರೆ. ಇವಳ ಬದುಕಲ್ಲೂ ಹಾಗೆಯೇ.. ಮೂರು ಒಂಟೆಗಳು ನಾಲ್ಕಾದವು, ಅವೆಷ್ಟೋ ವಿಚಿತ್ರ ಸನ್ನಿವೇಶಗಳು ಎದುರಾದವು, ಎಲ್ಲವನ್ನೂ ಎದುರಿಸುತ್ತಲೇ ಅವಳು ಮರುಭೂಮಿಯಲ್ಲಿ ನಡೆದಳು.
ಯಾವುದೋ ಒಂದನ್ನು ಮಾಡಬೇಕೆನ್ನುವ ನಿರ್ಧಾರದಲ್ಲೇ ಒಂದು ಪ್ರಯಾಣದ ಆರಂಭ ಇರುತ್ತದೆ ಅನ್ನುವುದನ್ನು ಈ ಚಿತ್ರ ಅತ್ಯಂತ ಆತ್ಮೀಯವಾಗಿ ಕಟ್ಟಿಕೊಟ್ಟಿದೆ. ಸಿನೆಮಾದ ಬಹುತೇಕ ಭಾಗ ಮರುಭೂಮಿಯಲ್ಲೇ ನಡೆಯುವಂಥದ್ದು. ಹಾಗಾಗಿ ಒಂದು ಹೊಸ ಅನುಭವ ಮತ್ತು ವಾತಾವರಣವನ್ನು ಚಿತ್ರದುದ್ದಕ್ಕೂ ಕಾಣಬಹುದು. ಕೆಲವು ಮೈನವಿರೇಳಿಸುವ ದೃಶ್ಯಗಳಿವೆ. ಕಣ್ಣು ಹಾಯಿಸಿದಲ್ಲೆಲ್ಲೂ ಮನುಷ್ಯರ ಸುಳಿವೇ ಇಲ್ಲದೇ ಎಷ್ಟು ದಿನ ಆರಾಮಾಗಿರಬಹುದು? ಮನುಷ್ಯನಿಗೆ ಮನುಷ್ಯ ಬೇಕು ಒಂದಲ್ಲಾ ಒಂದು ಕ್ಷಣದಲ್ಲಿ; ಮನುಷ್ಯ ಮನುಷ್ಯನ ಜೊತೆ ಮಾತ್ರವೇ ಆಡಬಹುದಾದ ಕೆಲವು ಮಾತುಗಳಿರುತ್ತವೆ. ಈ ಒಂಟಿತನ ಹಲವು ಬಾರಿ ಸುಖವೆನಿಸಿದರೂ, ಒಮ್ಮೊಮ್ಮೆ ವಿಚಿತ್ರವಾಗಿ ಕಾಡುತ್ತದೆ. ಜಗತ್ತಿನಲ್ಲಿ ಏನೋ ಒಂದು ವಸ್ತು ವಿಪುಲವಾಗಿದ್ದರೂ, ನಮಗೆ ಸಿಗುವುದು ಅದು ಸಿಗಬೇಕಾದ ಸಮಯದಲ್ಲೇ, ಅಲ್ಲಿಯ ತನಕ ಪ್ರಯತ್ನ ಜಾರಿಯಲ್ಲಿರಬೇಕಷ್ಟೇ!


“ಕೆಲವು ಅಲೆಮಾರಿಗಳಿಗೆ ಇಡೀ ಜಗತ್ತೇ ಮನೆ. ಆದರೆ ಇನ್ನು ಕೆಲವರಿಗೆ ಜಗತ್ತಿನ ಯಾವ ಭಾಗವೂ ಮನೆ ಅಂತ ಅನಿಸುವುದೇ ಇಲ್ಲ, ಅಂಥವರಲ್ಲಿ ನಾನೂ ಒಬ್ಬಳು” ಹೀಗಂತ ರಾಬಿನ್ ಡೇವಿಡ್ಸನ್ ಅವರೇ ಹೇಳಿಕೊಂಡಿದ್ದಾರೆ. ತನ್ನ ಲಿಂಗ ಮತ್ತು ವರ್ಗದ ಕುರಿತಾದ ಕೆಲವು ಅಸಡ್ಡೆಗಳಿಂದ, ತಾರತಮ್ಯಗಳಿಂದ, ವರ್ತನೆಗಳಿಂದ ಬೇಸತ್ತವರಿಗೆ ಇಂಥದ್ದೊಂದು ತನ್ನದೇ ಆದ ಬದುಕಿನ ತತ್ವಜ್ಞಾನವನ್ನು ಕಂಡುಕೊಳ್ಳುವ ಆಸೆ ಹುಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಬಹುತೇಕರಲ್ಲಿ ಹುಟ್ಟುತ್ತದೆ; ಆದರೆ ಬದುಕುವುದಿಲ್ಲ ಅಷ್ಟೇ.. ರಾಬಿನ್ ಡೇವಿಡ್ಸನ್ ಅವರ ಆತ್ಮಕತೆಯನ್ನು ಆಧರಿಸಿಯೇ ಈ ಸಿನೆಮಾ ತಯಾರಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜೀನ್ ಇವರ ಬರಹವನ್ನು ಮೇ ೧೯೭೮ರಲ್ಲಿ ಪ್ರಕಟಿಸಿತು. ‘ಕ್ಯಾಮೆಲ್ ಲೇಡಿ’ ( Camel Lady ) ಅಂತಲೇ ಇವರು ಜನಪ್ರಿಯರಾದರು. ಜೊತೆಗೆ ಈ ಪಯಣದುದ್ದಕ್ಕೂ ಆಗಾಗ ಬಂದು ಇವರ ಆಗುಹೋಗುಗಳನ್ನು ಗಮನಿಸುತ್ತಿದ್ದು ಛಾಯಾಗ್ರಾಹಕ ರಿಕ್ ಸ್ಮೋಲನ್ ( Rick Smolan ). ಇವರ ಛಾಯಾಚಿತ್ರಗಳಿಂದಲೇ ಈ ಸಿನೆಮಾ ಸ್ಫೂರ್ತಿ ಪಡೆದಿದೆ.
ಮರುಭೂಮಿಯ ವಿಲಕ್ಷಣ ಅನುಭವದ ಜೊತೆಗೆ, ಅತ್ಯಂತ ಆಧ್ಯಾತ್ಮಿಕವಾದ ಛಾಯಾಗ್ರಹಣವೂ ಈ ಸಿನೆಮಾದಲ್ಲಿದೆ. ತುಂಬಾ ಇಷ್ಟವಾಗುವುದನ್ನ ಹೇಳುವುದಕ್ಕೆ ನಿಜವಾಗಿಯೂ ಶಬ್ದಗಳು ಕಡಿಮೆ ಅನಿಸುತ್ತವೆ ಅಲ್ವಾ? ಶಬ್ದಗಳು ಕೇವಲ ಉತ್ಪ್ರೇಕ್ಷೆ, ಅನುಭವ ಮಾತ್ರ ನಾಟುವಂಥದ್ದು, ಎದೆಯಿಂದ ಎದೆಗೆ ದಾಟುವಂಥದ್ದು
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות