ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುದ್ಧ ಕಾಲದ ಎರಡು ಕವಿತೆಗಳು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಶ್ರೀ ಚಂದಕಚರ್ಲ ರಮೇಶ ಬಾಬು ಅನುವಾದಿಸಿದ ಎರಡು ಕವಿತೆಗಳು. ಅವರ ಸುಧೆ ಸುರಿದ ರಾತ್ರಿ ಕವನ ಸಂಕಲನದಿಂದ ಆಯ್ದದ್ದು. ಮೂಲ ಕವಿ: ದೇವರಕೊಂಡ ಬಾಲಗಂಗಾಧರ ತಿಲಕ್.

೧. ಅಮ್ಮಾ ಅಪ್ಪ ಎಲ್ಲಿಗೆ ಹೋಗಿದ್ದಾರೆ

ಅಮ್ಮಾ ಅಪ್ಪ ಎಲ್ಲಿಗೆ ಹೋಗಿದ್ದಾರೆ ? ಇನ್ನೂ ಬರಲಿಲ್ಲ ಯಾಕೆ ?
ಅಂತ ಕೇಳಿದ ನಾಲ್ಕು ವರ್ಷದ ಪೋರ ಮತ್ತೊಂದು ಸಲ —
ಅವನ ತಲೆಯ ಮೇಲೆ ಕೈಯಾಡಿಸುತ್ತ ಆಕೆ ಹಾಗೇ
ಆಶೆಯಿಂದ ಕೇಳುತ್ತಿದ್ದಾಳೆ ರೇಡಿಯೋ ವಾರ್ತೆಗಳು –
ಆಕೆಯ ಕಂಗಳಲ್ಲಿ ವಿಮಾನಗಳ ರೆಕ್ಕೆಗಳು ಕದಲಿದ ನೆರಳು
ಆಕೆಯ ಎದೆಯಲ್ಲಿ ಶತಘ್ನಿಗಳು ಸಿಡಿದ ಸದ್ದು
ಕಾಶ್ಮೀರದ ಸೀಮೆಯಲ್ಲಿ ಹಬ್ಬಿಕೊಂಡ ಕಪ್ಪು ಹೊಗೆಯ ನಡುವೆ
ಕಾಲೂರಿ ನಿಂತ ಸೈನಿಕನೊಬ್ಬ
ಅವಳ ಕಣ್ಣಮುಂದೆ ನಿಂತ.

ಆಕೆ ಕಾತರಗೊಂಡಳು- ನಿಡುಸುಯ್ದಳು- ಸೆರಗು ಹೊದ್ದಳು
ಅವಳ ತುಟಿಯಮೇಲೊಂದು ಗರ್ವದ ರೇಖೆ ಕಿರುನಗೆಯೊಂದಿಗೆ ಹಾದುಹೋಯಿತು
ಪಾರ್ಕಿನ ಬೆಂಚ್ ನಿಂದ ಎದ್ದು ಮಗನಿಗೆ ಕೈಕೊಟ್ಟು
ಮೆಲ್ಲಗೆ ನಡೆಯುತ್ತ ಸಂಜೆಯ ಕತ್ತಲಲ್ಲಿ ಕರಗಿಹೋದಳು.

ಆಕೆ ದಿನವೂ ಬರುತ್ತಾಳೆ ಅಲ್ಲಿಗೆ ವಾರ್ತೆಗಳ ಸಲುವಾಗಿ
ಹಾಗೆ ಬಿಳಿ ಸೀರೆ ಉಟ್ಟು ಕೆಂಪು ತಿಲಕವಿಟ್ಟು
ಕಪ್ಪು ಮಗ್ಗುಲಜಡೆಯಲ್ಲಿ ಬಿಳಿ ಮೊಗ್ಗುಗಳನ್ನಿಟ್ಟುಕೊಂಡು
ಅದೇ ಪಾರ್ಕು ಅದೇ ರಸ್ತೆ ಅದೇ ಬಜಾರು ಅದೇ ಮನೆ
ಆದರೂ ಆಕೆ ಯಾವುದೋ ಬದಲಾವಣೆ ಕಂಡಳು
ಎಲ್ಲರೂ ತಿನ್ನುತ್ತಿದ್ದಾರೆ ಎಲ್ಲರೂ ತಿರುಗುತ್ತಿದ್ದಾರೆ
ಆದರೂ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ

ಬಿಗಿಯಾಗಿ ಹಿಡಿದ ನಗರಗಳ ನರಗಳ ಮೇಲೆ ಯಾವುದೋ ವಾರ್ತೆಗಳ ಗುಸುಗುಸು
ಬಿಗಿಯಾದ ಮುಷ್ಟಿಗಳ ಸಂದಿಯಿಂದ ಜಾರಿದ ರಕ್ತದ ಪ್ರತಿಜ್ಞೆಗಳು
ಒಂದೇ ಹುಮ್ಮಸ್ಸು ಒಂದೇ ಹುರುಪು ಒಂದೇ ದೀಕ್ಷೆ- ಮರುಕ ಎಚ್ಚೆತ್ತ ಗುರ್ತುಗಳು.

ಒಂದು ದೇಶ ತನ್ನ ಪಾಡಿಗೆ ತಾನಿದ್ದರೆ
ಸುಮ್ಮನಿರುವುದಿಲ್ಲ ಇಪ್ಪತ್ತನೆಯ ಶತಮಾನದ ನಾಗರಿಕತೆ
ಪಕ್ಕದವನ ಒಳ್ಳೆಯತನ ದುಷ್ಟನ ದುರಂಹಕಾರವನ್ನು ಕೆಣಕುತ್ತೆ
ನೆರೆಯವನ ಸೌಭಾಗ್ಯ ಮೂರ್ಖನ ಎದೆಯಲ್ಲಿ ಉರಿಯಾಗುತ್ತೆ
ಆಸಿಯಾ ರಂಗದ ಮೇಲೆ ನಿರಂಕುಶತ್ವ ಉದಯಿಸಿದ ದುರ್ಮುಹೂರ್ತಗಳಿವು
ಇತಿಹಾಸಕ್ಕೆ ನಾಚಿಕೆಗೇಡು

ಜನರ ಬಾಯಿ ಹೊಡೆದು ಜನಾದೇಶವನ್ನು ಹೂತುಹಾಕಿ
ಕಳ್ಳರೇ ರಾಜರಾಗಿ ಸಾಮ್ರಾಟರಾಗಿ ರಾಜ್ಯವಾಳುತ್ತಿದ್ದಾರೆ
ಅದಕ್ಕೆ ಅವರಿಗೆ ಭಾರತದ ನೆರಳು ಸರಿಕಾಣುವುದಿಲ್ಲ
ರಾಜಕಾರಣದ ಜೂಜಿನಲ್ಲಿ ಲಾಭ ಕಾಣುವುದಿಲ್ಲ

ಮೆತ್ತಗಿದ್ದರೆ ಬೆಕ್ಕು ಎನ್ನುತ್ತಾರೆ
ತಿರುಗೇಟು ನೀಡಿದರೆ ಹೆಬ್ಬುಲಿ ಎನ್ನುತ್ತಾರೆ
ಅವಕಾಶವಾದಿಗಳ ಬಾಯೆಲ್ಲ ಗಬ್ಬುನಾತ
ನೀತಿ ತೊರೆದರೆ ರಾಜನೀತಿಯಾಗುತ್ತೆ
ಜಾತಿಗೆ ಧರ್ಮದಾವೆಶ ಸೇರಿದರೆ ಕೋತಿಯಾಗುತ್ತೆ.
ಪಾಕಿಸ್ತಾನ್ ಚೈನಾಗಳ ಗೆಳೆತನ
ಹಾವು ಮತ್ತೆ ತೋಳಗಳು ಒಂದಾದ ಹಾಗೆ
ಇದು ಎರಡು ದೇಶಗಳ ನಡುವಿನ ಯುದ್ಧವಲ್ಲ
ಒಂದಿಂಚು ಭೂಮಿಯ ಸಲುವಾಗಿ ನಡೆಯುವ ಕದನವಲ್ಲ
ಜಗತ್ತಿನ ಭವಿತವ್ಯಕ್ಕೆ ಬೇಕಾದ ಮೌಲ್ಯಗಳನ್ನು ಕಾಪಾಡುವ ಯತ್ನವಿದು
ಭಾವನಾಸ್ವಾತಂತ್ರ್ಯ ಉಕ್ತಿಸ್ವಾತಂತ್ರ್ಯ
ವರ್ಗ ವರ್ಣ ಧರ್ಮ ಭೇದ ರಾಹಿತ್ಯದ ಬುನಾದಿ

ದೇಶದ ಪ್ರತಿ ಪ್ರಜೆಯೂ ಸೈನಿಕನೇ ಪ್ರತಿ ಎದೆಯೂ ಒಂದು ಶತಘ್ನಿಯೇ
ರೇಡಿಯೋದಲ್ಲಿ ವಾರ್ತೆಗಳು ದಿನವೂ ಬರುತ್ತಿವೆ
ವಿಜಯದ ಸುದ್ದಿಗಳ ಸಾಲನ್ನು ಬಿತ್ತರಿಸುತ್ತಿವೆ

ಶತ್ರುಗಳ ಟ್ಯಾಂಕುಗಳು, ವಿಮಾನಗಳು ಅದೇಷ್ಟೋ ನಷ್ಟವಾಗಿವೆ
ಸಾಹಸೋಪೇತವಾದ ನಮ್ಮ ಸೈನ್ಯ ತರಂಗ
ಲಾಹೋರ್ ಎಲ್ಲೆಗಳಮೇಲೆ ಭೋರ್ಗರೆದಿದೆ

ನಿದ್ದೆಮಾಡದ ಸಿಂಹದಂತೆ ಜಾತಿ ಇಡೀ ನಿಂತು ಗರ್ಜಿಸಿದೆ
ಕೀಲರ್, ಅಬ್ದುಲ್ ಹಮೀದ್, ಹವಲ್ದಾರ್ ಪೋತರಾಜು
ಇನ್ನೂ ಲಕ್ಷಗಟ್ಟಲೆ ಅಜ್ಞಾತ ಸೈನಿಕರಿಗೆ ಸಾಲು ಹಿಡಿದು ಎಲ್ಲರೂ
ಕೃತಜ್ಞತಾಂಜಲಿಗಳನ್ನು ಘಟಿಸಿದ್ದಾರೆ

ಆಕೆ ಅವತ್ತು ಸಹ ಮಗನ ಜೊತೆಗೆ ಪಾರ್ಕಿಗೆ ಬಂದಿದ್ದಾಳೆ
ಬಿಳಿ ಸೀರೆ ಉಟ್ಟಿದ್ದರೂ ಹಣೆಯಲ್ಲಿ ಕೆಂಪು ಕುಂಕುಮ ಕಾಣದು
ಕಪ್ಪುಕುರುಳಲ್ಲಿ ಬಿಳಿಯ ಮಲ್ಲಿಗೆಗಳಿಲ್ಲ ಕೈಗಳಿಗೆ ಬಳೆಗಳು ಕಾಣಲಿಲ್ಲ
ಅವಳ ಅಗಲ ಕಂಗಳಲ್ಲಿ ಮಳೆ ಬಂದು ತಿಳಿಯಾದ ಬಾನು ಕಂಡಿದೆ
ಆಕೆ ಅದುರುತ್ತಿದ್ದ ತನ್ನ ಮೇಲ್ದುಟಿಯನ್ನು ಒತ್ತಿಹಿಡಿದಿದ್ದಾಳೆ
ಅಲ್ಲೆ ಸೇರಿದ ಜನವೆಲ್ಲ ’ ಜೈಹಿಂದ್ ’ ಎಂದು ನಿನಾದ ಮಾಡಿದ್ದಾರೆ

“ ಅಮ್ಮಾ, ಅಪ್ಪ ಎಲ್ಲಿಗೆ ಹೋಗಿದ್ದಾರೆ – ಇನ್ನೂ ಬರಲಿಲ್ಲ ಯಾಕೆ “
ಎಂದು ಕೇಳಿತ್ತಿದ್ದ ಮಗನನ್ನು ತನ್ನ ತೆಕ್ಕೆಗೆ ಸೇರಿಸಿ
ಅವಳು ಕೂಡ ಗೊಗ್ಗುರು ದನಿಯಲ್ಲಿ ’ ಜೈಹಿಂದ್ ’ ಎನ್ನುತ್ತಾಳೆ
ಆ ಮಾತು ಸ್ವರ್ಗದಲ್ಲಿನ ಒಬ್ಬ ವೀರನಿಗೆ ಸಿಹಿಯಾಗಿ ಕೇಳುತ್ತದೆ.

೨. ತೊಲಗಿ ತೊಲಗಿ

ನೀವೆಲ್ಲ ಯಾಕೆ ಹೀಗೆ ಬಾಗಿದ ಸೊಂಟದೊಂದಿಗೆ ಕಣ್ಣೀರಿನಿಂದ
ಕೆದರಿದ ಕೂದಲು ಜಾರಿದ ಸೆರಗಿನಿಂದ
ಈ ಸಮಾಧಿಗಳ ಸುತ್ತ ಹುಡುಕುತ್ತ ತಿರುಗುತ್ತಿದ್ದೀರಿ
ನೀವೇನು ತಾಯಿಯರೆ ಸೋದರಿಯರೆ ಹೆಂಡಂದಿರೆ
ಎಂದಿನವರು ಎಲ್ಲಿಯವರು ನೀವು
ಯಾವ ಕಾಳಗದಲ್ಲಿ ಮಡಿದಿದ್ದಾನೆ ನಿಮ್ಮವನು ಯಾವ ದಳದವನು ಏನು ನಂಬರು

ಕುರುಕ್ಷೇತ್ರವಾದರೆ ಕೃಷ್ಣನನ್ನು ಕೇಳು
ಪಾನಿಪಟ್ಟಾದರೆ ಪೇಷ್ವೆಗಳನ್ನು ಕೇಳು
ಕ್ರಿಮಿಯಾ ಯುದ್ಧ ಕೊರಿಯಾ ಯುದ್ಧ
ಪ್ರಥಮ ದ್ವಿತೀಯ ಪ್ರಪಂಚ ಯುದ್ಧಗಳು
ಬಿಸ್ಮಾರ್ಕನ್ನು ಕೇಳು ಹಿಟ್ಲರ್ ನನ್ನು ಕೇಳು
ಬ್ರಹ್ಮದೇವರನ್ನು ಕೇಳು

ಅಯ್ಯಯ್ಯೋ ಹಾಗೆ ನೋಡಬೇಡಿ ಒಣ ಕಂಗಳಿಂದ ಬಿಗಿದ ಹಲ್ಲುಗಳಿಂದ
ಅಳು ಬತ್ತಿದ ಮರುಳುಗಾಡಿನ ಎದೆಗಳನ್ನು ತೋರಿಸಬೇಡಿ
ಏನು ಹೇಳಲಿ ನಿಮಗೆ ಯಾರು ಹೊಣೆ ಎಂದು ಹೇಳಲಿ

ಕತ್ತಲಾಗುವ ಹೊತ್ತು
ಚಿರತೆಗಳು ದನಗಳನ್ನು ಹೊತ್ತೊಯ್ಯುವ ಹೊತ್ತು
ಹಾಳು ಬಾವಿಗೆ ಹರೆಯದ ವಿಧವೆಯರು ಬೀಳುವ ಹೊತ್ತು
ಸತ್ತ ಇತಿಹಾಸದ ಎಲುಬುಗಳಿಗಾಗಿ ನಾಯಿಗಳು ಕಿತ್ತಾಡುವ ಹೊತ್ತು
ದೆವ್ವದ ಆಲದ ಮರದ ಮೇಲೆ ದೀನವಾಗಿ ಅರಚುತ್ತಾ ಹಕ್ಕಿಗಳು ತೇಲುಗಣ್ಣಾಗುವ ಹೊತ್ತು
ಯಾವುದೋ ಭಯ ಭಯ
ಸುತ್ತಲೂ ನೊರೆ ವಿಷ
ಉರಗ ವಿಷ
ಅಸತ್ಯದ ವಿಷ
ನೋವಿನ ವಿಷ
ದುಃಖದ ವಿಷ
ಒಂದೇ ಸವನೆ ಉಕ್ಕಿ ಉಕ್ಕಿ ಬರುತ್ತಿದೆ
ಅಮ್ಮಾ ಹೋಗಿಬಿಡಬೇಡಿ
ಯಾಕೆ ಹೀಗೆ ಬಗ್ಗಿ ಬಗ್ಗಿ ಸೋತು ಸೋತು
ಈ ಸಮಾಧಿಗಳ ಸುತ್ತ ಹುಡುಕುತ್ತಾ ತಿರುಗುತ್ತಿರುವಿರಿ
ಹೆಣಗಳು ಮಾತಾಡುವುದಿಲ್ಲ
ಸಮಾಧಿಗಳನ್ನು ತೋರುವುದಿಲ್ಲ
ಮಣ್ಣು ಗುರ್ತಿಸುವುದಿಲ್ಲ
ಮೃತ್ಯುವಿಗೆ ಕರುಣೆ ಇರುವುದಿಲ್ಲ
ನಿಮ್ಮ ರೋದನೆಯನ್ನು ನಿಮ್ಮಲ್ಲೇ ಅದುಮಿಕೊಂಡು
ನಿಮ್ಮ ಕಂಗಳನ್ನು ನೀವೇ ಚುಚ್ಚಿಕೊಂಡು
ಹೀಗೇ ಹೀಗೇ ಈ ಹಾವುಗಳ ಹುತ್ತಗಳ ಹಿಡಿದು
ಈ ಮೊಂಡು ಗಿಡಗಳ ಈ ಶಿಥಿಲ ಬದುವುಗಳ ಹಿಡಿದು
ಹೋಗಿಬಿಡಿ ಹೋಗಿಬಿಡಿ ಹೋಗಿಬಿಡಿ.