- ವಿಷಯವಾಗುತ್ತೇನೆ ನಾನು - ಡಿಸಂಬರ್ 27, 2020
ವಿಷಯವಾಗುತ್ತೇನೆ ನಾನು
ಬಸಿಯುವ ಬೆವರಿನಲ್ಲಿ
ಹೊಸೆದ ಹಗ್ಗದ ತಾಯಿ
ಸೆಣಬಿನ ಬೀಜವಾಗಿ!
ಮೊಳಕೆಯಾಗುತ್ತಿರಲಿಲ್ಲ……
ಹುಗಿಯದಿದ್ದರೆ ನನ್ನ
ಮತ್ತೆ
ಬೀಳದಿದ್ದರೆ ಮೇಲೆ
ಮಳೆಯ ಸುರಗಿ!
ವಿಷಯವಾಗುತ್ತೇನೆ ನಾನು
ಹೂವಿನ ರಸವ
ದುಂಬಿ ಕುಡಿದಾಗ
ಹಸಿರುಂಡ ಪಶುಪಕ್ಷಿ
ಹಾಡಿ ಕುಣಿದಾಗ
ಕರು ಕೂಗಿಗೆ ಹಸು ಕೆಚ್ಚಲು
ಹಾಲುಣಿಸಿದಾಗ
ಪ್ರಾಸ ತ್ರಾಸಲಿ ಪದಗಳ
ಜೊತೆ ಹಾಡಿದಾಗ!!
ವಿಷಯವಾಗುತ್ತೇನೆ ನಾನು
ಕಳೆಬರದ ನಾರು
ಮಡಿ ಮೈಲಿಗೆಯಾದಾಗ
ಗಜಗೂಳಿಯ ಮೂಗಿಗೆ
ದಾರವಾದಾಗ
ಹರಿದ ಹಚ್ಚಡ ಹೊಲಿಗೆ
ಮಾನ
ಮುಚ್ಚದಿರುವಾಗ!
ಸುಟ್ಟುಕೊಂಡರೂ ಬತ್ತಿ
ಬೆಳಕು ನೀಡುವಾಗ
ವಿಷಯವಾಗುತ್ತೇನೆ ನಾನು
ಉರುವಲಾದಾಗ
ಹಸಿವಿನರಮನೆಯಲ್ಲಿ ನಗುವ
ಗಾಳಿ ಸುಳಿದಾಗ
ಇರುವ ಗೊಡವೆಯ ಮರೆತು
ಇಲ್ಲವಾದಾಗ
ಕೊಳ್ಳಿದೆವ್ವದ ಹಾಗೆ
ಉರಿದು ಹೋದಾಗ….
ವಿಷಯವಾಗುತ್ತೇನೆ ನಾನು
ಕಾವ್ಯಕ್ಕೆ ಕಥನಕ್ಕೆ
ಥಕಥೈಯ ಕುಣಿತಕ್ಕೆ
ಉಪಕಥೆಗಳ ಪತಿ ನಾನು
ಪುರಾಣಗಳ ಸತಿ
ಭೂತದಾ ಸಾಕ್ಷಿ
ಭವಿಷ್ಯತ್ತಿನ ಅಕ್ಷಿ
ವರ್ತಮಾನದ ಗಡಿಬಿಡಿ
ಮುಕ್ತಿ ಮಹಲಿನ ಕೈಪಿಡಿ!!!
ವಿಷಯವಾಗುತ್ತಿದ್ದೇನೆ ನಾನು…….
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು