ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಂಧಿಸುವುದೇ ಬೇಡ

ಲಕ್ಷ್ಮಣ ಬಡಿಗೇರ
ಇತ್ತೀಚಿನ ಬರಹಗಳು: ಲಕ್ಷ್ಮಣ ಬಡಿಗೇರ (ಎಲ್ಲವನ್ನು ಓದಿ)

ಸುಖವಾಗಿದೆ ಈ ಅಂತರ
ನೀ ಆ ದಡದಲ್ಲಿ, ನಾ ಈ ದಡದಲ್ಲಿ
ಮಧ್ಯ ಮೈದುಂಬಿ ಹರಿಯಲಿ ನದಿ
ಅಡ್ಡ ಆಣೆಕಟ್ಟು, ಸೇತುವೆಗಳು
ಕಟ್ಟುವುದೇ ಆದರೆ
ದಾಟಿ ಸೇರುವ ಅಭಿಸಾರಗಳು ಬೇಡಾ

ನೀ ಎತ್ತಲೋ ನೋಡುವಾಗ
ನಾ ನಿನ್ನ ನೋಡಿ ಸವಿಯುವೆ
ಮನಸಿದ್ದರೆ ನೀನೂ ಸವಿ
ನಾ ಇನ್ನೆತ್ತಲೋ ನೋಡುವಾಗ
ಗಾಳಿ ಎದೆಯ ಸೀಳುವುದೇ ಆದರೆ
ಈ ಕಣ್ಣುಗಳೂ ಸಂಧಿಸುವುದು ಬೇಡ

ತಿಳಿದಿದೆ,
ಕಳೆದುಕೊಳ್ಳದೆ ಏನೂ ಪಡೆಯಲಾರೆ
ಆದರೂ ದೂರವೇ ಇದ್ದು ಬಿಡುವೆ
ನನ್ನತನ ಕಳೆದುಕೊಂಡು ನಾನೇನು
ಪಡೆಯಬಲ್ಲೆ
ಆತ್ಮದ್ರೋಹದ ದಾರಿ ತೆರೆವುದಾದರೆ
ಈ ರಹದಾರಿ ಕೂಡುವುದೆ ಬೇಡಾ

ಕಳೆದುಕೊಂಡ ಮರುಕ್ಷಣ
ರುಚಿಸದೇ ಹೋಗಬಹುದು ನಾನು
ನನಗೇ ನೀನೂ
ಮತ್ತೆ ಮತ್ತೆ ಸಾಯಲಿಕ್ಕೆ ಇಚ್ಚೆಯಿಲ್ಲ
ಕತ್ತಲು ಕೆನೆಗಟ್ಟುವುದೇ ಆದರೆ
ನಾವು ಸಂಧಿಸುವುದೇ ಬೇಡ