ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಚಿನ್ ಬಿ ಎಸ್ ಅವರ ಮೂರು ಕವಿತೆಗಳು

ಸಚಿನ್ ಬಿ ಎಸ್
ಇತ್ತೀಚಿನ ಬರಹಗಳು: ಸಚಿನ್ ಬಿ ಎಸ್ (ಎಲ್ಲವನ್ನು ಓದಿ)

೧. ಊರು ತೊರೆದ ಮನೆ

ಪಾಳು ಬಿದ್ದಿದೆ
ಊರಾಚೆಯ ಮನೆ
ಅಂಗಳದಲಿ ರಂಗೋಲಿ ಬರೆವರಿಲ್ಲದೆಯೇ

ಅರ್ಧ ಉದುರಿದ ಗೋಡೆ
ಬಳ್ಳಿ ಸೆರಗ ಹೊದ್ದು
ಮಾಡ ದಾಟಿ ನೀಲಿ
ಬಾನ ದಿಟ್ಟಿಸಿದೆ

ಹೊರಗೆ ಎಷ್ಟು ನೆಮ್ಮದಿಯಿದೆ
ಚೆಂದ ತಾರಸಿ ಹೆಂಚು ಮಾಡುಗಳು
ಇಲ್ಲಿಗೇಕೆ ಬಂದಿರಿ
ಈ ಪಾಳು ಕೊಂಪೆಗೆ

ಒಳಗೆ ಹೋಗದಿರಿ
ಹಾವು ಚೇಳುಗಳಿರಬಹುದು
ಆತ್ಮ ಸತ್ತ ಕಣ್ಣುಗಳು
ನಿಮ್ಮನ್ನು ಕುಕ್ಕಿ ಕೊಲ್ಲಬಹುದು

ಮುರುಕು ಬಾಗಿಲನು ಹೊದ್ದ
ಬಲೆಯ ಭೇದಿಸಿ ನೀವು
ಮನೆಯ ಚೊಕ್ಕ ಮಾಡುವೆನೆನ್ನಬೇಡಿ.
ಒಳಗೆ ಕೋಣೆಗಳೆಲ್ಲವನ್ನೂ
ಕಪ್ಪು ಬಗೆದು ನುಂಗಿದೆ

ಪಾಳು ಬಿದ್ದಿದೆ
ಊರ ತೊರೆದ ಮನೆ
ಅಂಗಳದಲಿ ರಂಗೋಲಿ
ಬರೆವರಿಲ್ಲದೆಯೇ

*****

೨. ಜಗುಲಿಕಟ್ಟೆಯ ಬೀಡಿ

ಜಗುಲಿಕಟ್ಟೆಯ ಗೋಡೆಗೊರಗಿ
ಹುಡುಗ ಬೀಡಿ ಸುಡುತ್ತಾನೆ
ಹೆಂಚು ತೇಯ್ದ ಮಳೆ
ತಣ್ಣಗೆ ನೆಲವ ಸೀಳಿದೆ

ಮತ್ತೆ ಮತ್ತೆ ಒಳಗಿಣುಕಿ
ಗಂಟೆ ನೋಡುತ್ತಿದ್ದಾನೆ
ಮಾಡ ಕಂಡಿಯ ನುಸುಳಿ
ಒಂದೊಂದೇ ಹನಿಗಳುದುರಿವೆ

ಇನ್ನೆಷ್ಟು ಮಳೆಗಾಲ
ನೋಡಬೇಕೋ ಥೂ
ಕರೀ ಕೊಳೆ ಮಾಡ ಕೆಸರು
ಸುರಿಯಬೇಕೋ ಛೀ

ಬೀಡಿ ಬೂದಿಯಾದಂತೆ, ಖಾಲಿ-
-ಎದೆ ಸುಟ್ಟು ಹೋಗಲೊಲ್ಲದೇಕೆ
ರಣದ ಬಿಸಿಲಿಗೆ ನೆಲವು ಬೆಂದರೂ
ಮಳೆಯ ಹೀರದೆ ಚೆಲ್ಲುವುದೇಕೆ

ಜಗುಲಿಕಟ್ಟೆಯ ಗೋಡೆಗಾತು ಹುಡುಗ
ಇನ್ನೊಂದು ಬೀಡಿ ಎಳೆದಿದ್ದಾನೆ
ಹೆಂಚು ತೇಯುತ ಬಿದ್ದ ಮಳೆ
ಮತ್ತೆ ತಣ್ಣಗೆ ನೆಲವ ಸೀಳಿದೆ

*****

೩. ರಂಜಲು ಹೂವಿನ ಹುಡುಗ

ರಂಜಲು ಮರದ ಬಳಿ
ಪುಟ್ಟ ಹುಡುಗ ಬಿದ್ದಿದ್ದಾನೆ
ಆರಿಸಿದ ರಂಜಲು ಹೂಗಳು
ಕೈಯಲ್ಲೇ ಬಾಡಿವೆ

ಅರ್ಧ ಮರದ ನೆರಳು
ಇನ್ನರ್ಧ ರವಿಯ ಬಿಸಿಲು
ಹುಡುಗನ ಮೊಗದ ಮೇಲೆ
ಚೆಲ್ಲಿಹೋಗಿವೆ..

‘ಏಯ್ ಹುಡುಗಾ, ಏಳೋ’
‘ಎದ್ದೇಳೋ’
‘ಏನಾಯ್ತೋ ನಿನಗೆ?’
‘ಹೀಗೇಕೆ ಬಿದ್ದಿದ್ದಿ?’
ಪ್ರಶ್ನಿಸುತ್ತಲೇ ಇದ್ದೇನೆ
ಅವನು ಉತ್ತರಿಸುತ್ತಿಲ್ಲ

ತಳಮಳಗೊಂಡಿದ್ದೇನೆ ನಾನು.
ಹುಡುಗ ನಿಜಕ್ಕೂ ಸತ್ತುಹೋದನೇ!?
ಮೂರ್ಛೆ ಹೋಗಿದ್ದರೆ ಸಾಕಿತ್ತು.
ಹುಡುಗ ಸಣ್ಣವ,
ಸಾಯುವುದು ತಡವಿದೆ.

ನನ್ನ ಸಂತೈಸಿಕೊಂಡು
ಹುಡುಗನೆಬ್ಬಿಸುತ್ತಿರುವೆ.
ಬಳಿಯ ತೊರೆಯ
ನೀರ ಹೊಯ್ದೆ,
ಗಾಳಿ ಬೀಸಿದೆ,
ಪ್ರಯೋಜನವಿಲ್ಲ.

ನನ್ನ ಕೈ ಸೋತಿತು
ಹುಡುಗ ಏಳಲಾರ
ಬಾಲ್ಯ ಸತ್ತಿದೆ
ಬದುಕಿಸಲು ಸಾಧ್ಯವೇ?

ರಂಜಲು ಮರದ ಬಳಿ
ಹುಡುಗ ಬಾಡಿದ್ದಾನೆ
ಆರಿಸಿದ ರಂಜಲು ಹೂಗಳು
ಕೈಯಲ್ಲೇ ಸತ್ತಿವೆ

*****