ಇತ್ತೀಚಿನ ಬರಹಗಳು: ಚಂಸು ಪಾಟೀಲ್ (ಎಲ್ಲವನ್ನು ಓದಿ)
- ಘಂಟೆ, ಕೋಗಿಲೆ ಇತ್ಯಾದಿ… - ಏಪ್ರಿಲ್ 21, 2020
ಘಂಟೆಗಳ
ಘನಘೋರ
ನಿನಾದದ ಮಧ್ಯೆಯೂ
ನಿದ್ದೆ ಹೋಗುತಿದ್ದ ದೇವರು
ಗುಡಿಯಂಗಳದ
ಆಕಾಶಮಲ್ಲಿಗೆ ಗಿಡದಲ್ಲಿ
ಮಾರ್ದನಿಸಿದ
ಕೋಗಿಲೆಯ ಹಾಡಿಗೆ
ಎಚ್ಚೆತ್ತು ಬೆಚ್ಚಿಬಿದ್ದ!
………..
ಮತ್ತೊಬ್ಬರು
ಹೊಡೆದರಷ್ಟೇ
ನುಡಿಯಬಲ್ಲ
ಘಂಟೆಯ
ನಾಲಿಗೆಗೆ
ಭಯವೇ ಭಕ್ತಿ!
ಕೋಗಿಲೆಯ
ಹಾಡಿಗೆ
ಅಂತಃಶ್ರದ್ಧೆಯೆ
ಪ್ರೇರಣ ಶಕ್ತಿ!
ಹಸಿವೆಯದರ
ಮೊದಲ ಚರಣ!
…………….
ಟಿವಿ ಮುಂದೆ ಕೂತು
ಸೂರ್ಯನ
ಉದಯಾಸ್ತಮಾನಗಳನೆ
ಮರೆತ ಜನರು
ಚೈತ್ರದ ಚಿಗುರನು
ಕಾಣದೇ,
ಕೋಗಿಲೆಯ ಹಾಡನು
ಕೇಳದೇ,
ಬದುಕು ಸ್ಥಗಿತಗೊಂಡಂತೆ
ಸುಳ್ಳುಸುದ್ದಿಗಳ ಮೇಲೆ
ಸುದೀರ್ಘ ಚರ್ಚೆ ನಡೆಸಿದರು!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ