ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವಲ್ಪ ಟೈಮ್ ಬೇಕಿತ್ತು…!

ಮಂಜು ಕಾಸರಗೋಡು
ಇತ್ತೀಚಿನ ಬರಹಗಳು: ಮಂಜು ಕಾಸರಗೋಡು (ಎಲ್ಲವನ್ನು ಓದಿ)

ಸುಧಾರಿಸ್ಕೋಬೇಕು ಒಂದ್ಸಲ ನಿಂತು
ದೀರ್ಘವಾದೊಂದು ನಿಟ್ಟುಸಿರು ಬಿಡ್ಬೇಕಿದೆ
ಹಿಗ್ಗಿ ಉಸಿರ ಜಗ್ಗಿ
ಹಳೆಯ ದುಃಖದ ಪದರಗಳು
ಹೊಸದರ ಜೊತೆ ಸೇರಿ
ಮತ್ತೊಂದು ಹುಟ್ಟುವುದಕ್ಕೆ ಅವಕಾಶವೇ ಇಲ್ಲ..
ಮತ್ತೆ ಹೊಸತಾಗಿ
ತುಂಬಿಸ್ಕೊಳ್ಳೋದಕ್ಕೆ ಜಾಗ ಮಾಡ್ಕೋಬೇಕಿದೆ..
ಸ್ವಲ್ಪ ಟೈಮ್ ಬೇಕಿತ್ತು..

ಹಗಲ ಹೊಗೆ ತುಂಬಿ, ಇರುಳ ಬೆಂಕಿ ನುಂಗಿ
ಮುಚ್ಚಿದ ಕಣ್ಣೊಳಗಿನ ಕತ್ತಲೆ
ಹತ್ತಿ ಹೊತ್ತಿ ಸುಟ್ಟ ಹಸಿವಾಸನೆ..
ತಲೆ ಸುತ್ತಿ ಸುಸ್ತಾಗಿದೆ
ಸಾವಿನ ಗಾಳಿ ವಿಷವಾಗಿ ಒಳ ಸೇರಿ..
ತಮ್ಮ ಕಣ್ಣೊಳಗೆ ಇಟ್ಟು
ನಿನ್ನೆ ಮೊನ್ನೆ ತನಕ ನನ್ನ
ಕಾದಿದ್ದೋರು, ಕಣ್ ಮುಂದೇನೇ
ತಮ್ ಕಣ್ಣು ಮುಚ್ಚಿ ದಿನ ಆರಾಗಿದೆ
ಅತ್ತಿಲ್ಲ ನಾನಿನ್ನೂ…
ಸ್ವಲ್ಪ ಅಳೋದಕ್ಕೆ ಚೂರು ಟೈಮ್ ಬೇಕಿತ್ತು..

ಸದ್ಯ..ಹಸಿವಿನ ಬಳಲಿಕೆ ನನಗಿಲ್ಲ
ಆದ್ರೆ ಬೀದಿ ಬದಿಯಿಂದ ಗಾಳಿಯೇರಿ
ಸವಾರಿ ಮಾಡ್ತಿರೋ ಹಸಿದ
ಬಿಸಿಯುಸಿರಿನ ಝಳವ
ತಾಕಿಸಿಕೊಳ್ಳದೇ ಇರಲಿ ಹೇಗೆ?
ಸಂಚಿಯೊಳಗಣ ಖಾಲಿತನ
ಕಟ್ಟಿಬಿಟ್ಟಿದೆ ಕೊಡುವ ಕೈಗಳ

ಮನೆ ಇದೆ ಬದಿಯ ಮೋರಿಯ ಮೇಲೊಂದು
ಮಳೆ ಬಂದು ನೀರೇರಿ ನೆಲ ಕೊಳೆತು ಹಸಿಯಾಗಿ
ನೆಂದು ನಡುಗಿದೆ ಸಕುಟುಂಬ ಪರಿವಾರ
ಸೂರು ಬೇಕಿತ್ತು ಮುದ್ದೆಯಾದ ಆತ್ಮಕ್ಕೆ
ಸಮಾಧಾನ ಹೇಳೋ ಹಾಗೂ ಇಲ್ಲ
ಅವರ ಹೆಗಲ ಮೇಲೆ ಕೈಯಿಟ್ಟು
ಅಂತರ ಇರಬೇಕು! ಇನ್ನೂ ಎಷ್ಟು..?
ಎಲ್ಲಾ ಸರಿ ಆಗತ್ತೆ….ದೂರ ನಿಂತು‌ ಹೇಳಿ ಬಂದೆ..
ಸ್ವಲ್ಪ ಟೈಂ ಬೇಕು..

ದೂರಿ ದೂರಿ ದೂರ್ತಾ
ಇರೋದು ದೂರದಲ್ಲಿರೋರನ್ನ
ವಿಪರ್ಯಾಸ ಹತ್ತಿರದಲ್ಲಿರೋರ
ಹತ್ತಿರಕ್ಕೇ ಹೋಗೋದಕ್ಕಾಗ್ತಿಲ್ಲ..
ಬಗಲಿಗೆ ತಿರುಗಿದ್ರೆ..!! ಇಲ್ಲಿ
ಒಂದಷ್ಟು ದ್ವೇಷ ಮತ್ತೊಂದಷ್ಟು ಅಸೂಯೆ
ಜೊತೆಗೆ ಮತ್ಸರಗಳು
ತೊಳಸಿ ಹಳಸಿಯಾಗಿದೆ ಗೆಳೆತನದ ಶುದ್ಧ ಗಾಳಿ
ಒಬ್ಬಂಟಿ ಬಹುಕಾಲದಿಂದ….
ಜೊತೆ ಬೇಕು ಉಸಿರಿಗೆ ಅನ್ಸತ್ತೆ ಸದ್ಯದಲ್ಲೇ
ಹಸಿರ ಬಸಿರು ತುಂಬಿ ಫಲ
ವರ್ಷದಂತೆ ಹೊಟ್ಟೆ ಸೇರಿದ್ರೂ
ನೆಮ್ಮದಿಯ ತುತ್ತು ತಿಂದು ದಿನ ಸುಮಾರಾಗಿದೆ
ಜೊತೆ ಕೂತು ಊಟ ಮಾಡೋದಕ್ಕೆ ಸ್ವಲ್ಪ ಟೈಂ ಬೇಕು..

ಸಾಕಾಗಿತ್ತು ಓಡಿ ಓಡಿ
ಈಗೀಗ ಸಾಕಾಗ್ತಿದೆ ನಿಂತು ನಿಂತು
ಚಿಂತೆ ಬಿಟ್ಟು ಮಲಗ್ಬೇಕಿದೆ
ಜೀವಂತವಾಗಿ ತುಸು ಹೊತ್ತು .
ಹಾರಿ ಹೋಗಿ ದೂರ
ಇರೋ ಅಪ್ಪ ಅಮ್ಮನ ಪಾದ ಮುಟ್ಟಿ,
ಹೆಪ್ಪುಗಟ್ಟಿದ ಮನಸ್ಸು ಬಿಚ್ಚಿ ಮಾತಾಡ್ಬೇಕಿತ್ತು…
ನಾನೇ ಜೀವವಾಗಿರೋ
ಆ ಜೀವಗಳ ಜೀವಸೆಲೆಯ ಹೊತ್ತು
ಮತ್ತೆ ಕಟ್ಕೋಬೇಕಾಗಿದೆ ಕಡಿದ ನನ್ನೀ ಬದುಕನ್ನು
ಸ್ವಲ್ಪ ಟೈಮ್ ಬೇಕಿತ್ತು…