ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವಲ್ಪ ಬೆಪ್ಪ ನಾನು

ಪೀರಸಾಬ ನದಾಫ
ಇತ್ತೀಚಿನ ಬರಹಗಳು: ಪೀರಸಾಬ ನದಾಫ (ಎಲ್ಲವನ್ನು ಓದಿ)

ಪುರುಷರ ದಿನದ ಶುಭಾಶಯಗಳು ಸರ್ವರಿಗೂ


ಆದಿಯ ಸೂತ್ರದ ಅಪರಾವತಾರವೆಂದರು
ಆದಿಮಾಯೆಯ ಆಲಿಂಗನದಲಿರುವನೆಂದರು
ಹರಿ ಹರ ಬ್ರಹ್ಮರ ಹಂಬಲದ ಪ್ರಕ್ರಿಯೆಯ ಹರಿಕಾರ
ದುಷ್ಟ ದುರುಳ ಚಾಂಡಾಲ ಇವೆಲ್ಲದರ ಸಮ್ಮಿಶ್ರಣ
ಅಂದು ಇಂದು ಮುಂದೆಂದೂ ಇರುವ
ಪುರುಷ ನಾನು ಪುರುಷ ನಾನು

ಪೌರುಷದ ಪರಮತಪದ ಧ್ಯಾನ ನನ್ನದು
ಮೀಸೆಯ ಕೆಳಗೆ ಮುಸಿಮುಸಿ ನಕ್ಕು ಮಾಸದ
ಶಿವ ರಾಮ ಕೃಷ್ಣ ಆದಮ್ ದುರ್ಯೋಧನ
ಕಂಸ ರಾವಣ ಏನೆಲ್ಲವೂ ಆದವ ನಾನು
ನನ್ನೊಳಗೊಬ್ಬ ಅಹಂಕಾರಿ ಅಹಂಕಾರ ಮರ್ಧನಿದ್ದಾನೆ
ಕಾರಣ ಗಂಡು ನಾನು ಗಂಡು ನಾನು

ಪುಂಡ ಪೋಕರಿಯೊಳಗ ಬಾಲ್ಯವ ಕಳೆದು
ಯೌವ್ವನಕ್ಕೆ ಕಾಲಿಟ್ಟಾಗ ಮಟ ಮಟ ಮಧ್ಯಾನ್ಹ
ಮಿಟಿ ಮಿಟಿ ಕಣ್ಣು ಮಿಟಿಕ್ಯಾಡಿಸುವ‌ ಹುಡಗಿಯರ
ಎದೆಯೊಳಗೆ ಜಗ್ಗನೆ ದೀಪ ಹಚ್ಚಿ ಬೆಳಕ ಮೂಡಿಸಿ
ಆ ಕಣ್ಬೆಳಕಲ್ಲಿ ನನ್ನನ್ನೆ ಕಂಡು ದಿಗಿಲಗೊಂಡು
ದಾವಂತಿಸಿದ ಭೂಪ ನಾನು ಭೂಪ ನಾನು

ಒಪ್ಪ ಒರಣವಾಗಿ ಮಡುಗಿದ ಹೃದಯದೊಳಗಣ್ಣ ಹುಡಗಿಯರಡೆಗೆ ಹೊರಳಿಸಿ ಪ್ರೀತಿಯೆ ದೈವವೆಂದು ನಂಬಿ ಅವರನು ರಮಿಸಲು ಕಾತರಿಸಿ ಸಡಗರದಿ ನನ್ನೊಳಗೆ ಕಾಯ್ದು ಕಾತರಿಸಿದ ಅನುನಯದ ಪ್ರೇಮಿ ನಾನು ಪ್ರೇಮಿ ನಾನು

ಹುಡುಗಿಯರು ಕೈ ಕೊಟ್ಟಾಗ ಹಗುರಾಗಿ ತಗೆದುಕೊಳ್ಳದೆ
ಅರೆ ಹುಚ್ಚನಂತಾಗಿ ಅಲೆದು ಬಾರಿನನಂಗಡಿಯ ಕಾಯಂ ಗಿರಾಕಿಯಾಗಿ ಹೋಗಿ ಬರುವವರೊಡನೆ ಹಿಯ್ಯಾಳಿಸಿಕೊಂಡ
ಮೃದುಮನದ ಮಾಲಿಕ ನಾನು ಮಾಲಿಕ ನಾನು

ಜಗದ ರೀತಿ ನೀತಿಗಳ ಬಗ್ಗೆ ಕಾಳಜಿ ತೋರುವ
ಒಂದು ವೇಳೆ ಅವು ನನ್ನ ಬದುಕಿಗೆ ಮುಳ್ಳಾಗುವಂತಿದ್ದರೆ
ಮಳ್ಳು ಮಬ್ಬುತನ ತೊರೆದು ಮಾರುದ್ದ ಸಿಡಿದು ನಿಂತು ಪ್ರತಿಭಟಿಸಿದವ ಕೊನೆಗೆ ಜೀವದ ಹಂಗು ತೊರೆದು
ಗುದ್ದಾಡಿದ ಗಂಡೆದೆಯ ಗಂಡು ನಾನು ಗುಂಡು ನಾನು

ಸರಿಗಮದಿ ಸಂಸಾರಕ್ಕೆ ಕಾಲಿಟ್ಟಾಗ ನಂಬಿ ಬಂದವಳಿಗೆ
ಹೃದಯ ಸಿಂಹಾಸನವನ್ನೆ ಧಾರೆ ಎರೆದು
ಅವಳ ಕೋಮಲ ಸ್ಪರ್ಶದ ಕಾವಿಗೆ ತಹತಹಿಸಿ
ತಗಾದೆಯಿಲ್ಲದೆ ಒಪ್ಪಿ ಅಪ್ಪಿ ನಡೆದು
ಸಂಸಾರದ ಸುತ್ತ ಬೇಲಿ ಹಾಕಿ ಕಾಯುವ
ಮಾಲಿ ನಾನು ಮಾಲಿ ನಾನು

ಪ್ರತಿದಿನ ಪ್ರತಿಕ್ಷಣ ಎದೆಯೊಳಗೆ ಪದರಗುಟ್ಟುತ್ತ‌
ಆದರೂ ಕೆಲವು ಸಮಯ ಪಾಜಿಲ್ಬಾಜಿ ಮಾಡುತ್ತ
ಮತ್ತೆ ಮಕ್ಕಳು ಮರಿಗಳ ದೂರದಿಂದಲೇ ಪ್ರೀತಿಯಲಿ ದುರುಗುಟ್ಟಿ ಸರಿದಾರಿಗೆ ತರಲು ಹೆಣಗುವ ಅಕಾಶದಂತೆ ಅರಿಯದ ಅಪ್ಪ ನಾನು ಆದರೂ ನೋಡಿ ಸ್ವಲ್ಪ ಬೆಪ್ಪ ನಾನು ಬೆಪ್ಪ ನಾನು.

ಪೀರ್ ಸಾಬ್ ನದಾಫ್

ಟಿಪ್ಪಣಿ: ಈ ಮೇಲೆ ಬಳಸಿದ ಕವಿತೆಯ ಶೀರ್ಷಿಕಾ ಚಿತ್ರ 1889 ರಲ್ಲಿ ಭಾವಚಿತ್ರ ವಾಗಿ ರಚಿಸಿದವನು ಪೌಲ್ ಗ್ಯಾಗಿನ್ ಎಂಬ ಚಿತ್ರಕಾರ. ಇದು ಸಾರ್ವಜನಿಕ ವಾಗಿ ಲಭ್ಯವಿದೆ.