ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವಾತಂತ್ರ್ಯ ಮೆರವಣಿಗೆಯ ಡ್ರಮ್ ಮೇಜರ್; ಮಾರ್ಗರೇಟ್ ಬರೋಸ್

ಆರ್ ವಿಜಯರಾಘವನ್
ಇತ್ತೀಚಿನ ಬರಹಗಳು: ಆರ್ ವಿಜಯರಾಘವನ್ (ಎಲ್ಲವನ್ನು ಓದಿ)

(ಏಪ್ರಿಲ್ ೪, ೧೯೬೮ ರಂದು ಮೆಂಫಿಸ್‌ನಲ್ಲಿ ನಡೆದ ದುರಂತದ​ ಬಗ್ಗೆ ದಿಗ್ಭ್ರಮೆಗೊಂಡ ಎಲ್ಲ ಮಕ್ಕಳಿಗೆ.)

ನಮ್ಮೆಲ್ಲ ಮಕ್ಕಳು ನೆನಸಿಕೊಳ್ಳುತ್ತಾರೆ ಆ ದಿನವನ್ನು
ಸ್ವಾತಂತ್ರ್ಯದ ಮೆರವಣಿಗೆಯ ತೊರೆದು ಡ್ರಮ್ ಮೇಜರ್ ಹೊರಟುಹೋದ ದಿನವನ್ನು.
ಅಳುವುದನ್ನು ನಿಲ್ಲಿಸಿ, ಪುಟಾಣಿಗಳೇ, ಕೇಳಿ ನಿಜಕ್ಕೂ ನಡೆದುದೇನೆಂಬುದನು ತಿಳಿಯುವುದು ನಿಮ್ಮ ನಾಳಿನ ಬದುಕಿಗೆ ಬೇಕಿರುವುದು.

ನಿಮ್ಮ ತಂದೆಯೇಕಷ್ಟು ಗಂಭೀರವಾಗಿದ್ದರು, ದುಃಖಾರ್ದ್ರರಾಗಿದ್ದರು
ನಿಮ್ಮ ತಾಯಿಯ ಕಣ್ಣುಗಳಂಚು ಅದೇಕೆ ಒದ್ದೆಯಾಗಿದ್ದವು
ರಾಷ್ಟ್ರಧ್ವಜಗಳು ಅರ್ಧ ಮಟ್ಟದಲ್ಲೇಕೆ ಹಾರಿದವು
ಬಾಗಿಲುಗಳನೆಲ್ಲ ಏಕಷ್ಟು ಗಡಿಬಿಡಿಯಿಂದ ಭಧ್ರವಾಗಿ ಮುಚ್ಚಲಾಯಿತು
ಇವೆಲ್ಲವೂ ನಿಮಗೆ ಅರಿವಾಗುವುದು.

ಆ ದಿನ ಮೆಂಫಿಸ್‌ನಲ್ಲಿ ಡ್ರಮ್ ಮೇಜರ್ ತೊಡಗಿಕೊಂಡಿದ್ದರು
ವೇತನ ಹೆಚ್ಚಳಕ್ಕಾಗ್ರಹಿಸುವ ಕಾರ್ಮಿಕರ ಚಳವಳಿಯ ಬೆಂಬಲದ ಸಭೆಯಲ್ಲಿ
ದುಷ್ಟ ಹಂತಕನ ಗುಂಡು ತೂರಿ ಬಂದಿತ್ತು
ಅವನ ಬೆಳಗುವ ಜೀವವನ್ನು ಬಲುದೂರ ಹೊತ್ತೊಯ್ದುಬಿಟ್ಟಿತು.

ನಾವೆಲ್ಲ ಆ ದಿನ ಅದೆಷ್ಟು ದುಃಖತಪ್ತರಾಗಿದ್ದೆವು
ಡ್ರಮ್ ಮೇಜರ್ ನ ಜೀವವನ್ನು ಕೊಂಡಾದ ಬಳಿಕ
ಮುಂದೆ ಬರುವವರಾರು ಅವನ ಸ್ಥಾನವನು ತುಂಬಲು?
ಇನ್ನು ಮುಂದೆ ಸ್ವಾತಂತ್ರ್ಯದ ಮೆರವಣಿಗೆಯಲ್ಲಿ ಡ್ರಮ್ ಮೇಜರ್ ಯಾರು?

ಮಕ್ಕಳೇ, ನಮ್ಮ ಮೇಜರ್ ಅಷ್ಟೊಳ್ಳೆಯ  ಮನುಷ್ಯ
ಅವನ ಜೀವನವೊಂದು ದೈವ ರೂಪಿಸಿದ ಯೋಜನೆ.
ಅವನು ತನ್ನ ಈ ದೇಶವನು ಪ್ರೀತಿಸಿದ, ಅವನ ದೇಶದ ಜನರು ಕಪ್ಪು ಬಿಳಿ ಅವನು ಬೇಕೆಂದು ನಂಬಿದ್ದು ಸಕಲರಿಗೂ ಸಮಾನಾವಕಾಶವನ್ನು

ನಾವೆಲ್ಲರೂ ಆ ದಿನ ತುಂಬಾ ದುಃಖಿತರಾಗಿದ್ದೆವು ಅದಕೇ
ಡ್ರಮ್ ಮೇಜರ್ ನ ಬದುಕ ದೂರದೂರ ಕೊಂಡೊಯ್ದುಬಿಟ್ಟಾಗ
ನಾವವನ ಸ್ಥಾನದಲಿ ನಿಲ್ಲಲು ಯೋಗ್ಯನೊಬ್ಬನನ್ನು ಅರಸುತ್ತಿದ್ದೆವು
ನಾವೀಗ ಹುಡುಕುತ್ತಿರುವುವು ಸ್ವಾತಂತ್ರ್ಯ ಮೆರವಣಿಗೆಗೆ ಹೊಸ ಮುಂಚೂಣಿ ನಾಯಕನನ್ನು.

ಮಕ್ಕಳೇ ನೀವು ಬಲ್ಲಿರೇ ಅವನು ವಿದ್ವೇಷದ ಕಿಚ್ಚಿಗೆ ಬಲಿಯಾದನೆಂದು,
ಅವನು ಭಯವಿಲ್ಲದೆ ಮೆರವಣಿಗೆಯ ಮುಂಚೂಣಿಯಲ್ಲಿ  ನಡೆದನು
ನಿಮ್ಮಂತಹ ಮಕ್ಕಳಿಗೆ ನ್ಯಾಯ ದೊರಕಿಸಲು
ನಿಮ್ಮನ್ನು ಹೆತ್ತವರಿಗೂ ಒಂದುತ್ತಮ ಬದುಕನೇರ್ಪಡಿಸಲು ಮೆರವಣಿಗೆ ನಡೆಸಿದನು.

ಅದಕ್ಕಾಗಿಯೇ ನಾವು ಮಾರ್ಟಿನ್ ಲೂಥರ್ ಕಿಂಗ್ ನನ್ನು ಗೌರವಿಸುತ್ತೇವೆ
ಅವನು  ಸ್ವಾತಂತ್ರ್ಯದ ಕಹಳೆ ಮೊಳಗಿಸಿ ಸಮಾನತೆಯ ತರಲು
ಪ್ರೀತಿಯಿಂದ ಪ್ರಯತ್ನಿಸಿದನು. ನಮ್ಮ ಚಿತ್ರಹಿಂಸೆಗೊಳಗಾದ ದೇಶದಲ್ಲಿ
ಎಲ್ಲರಿಗೂ ಒಳಿತು ಹಾರೈಸಿದನು, ಶಾಂತಿ ಸಾಮರಸ್ಯದ ಸಹಬಾಳ್ವೆಗೆ.

ಅದಕ್ಕಾಗಿಯೇ ನಾವೆಲ್ಲರೂ ಆ ದಿನ ಅತಿದುಃಖಿತರಾಗಿದ್ದೆವು
ಡ್ರಮ್ ಮೇಜರ್ ನ ಜೀವವನ್ನು ವಿದ್ವೇಷ ಕೊಂಡಾಗ.
ನಿಮಗೆ ತಿಳಿದಿದೆಯೇ ಅವನ ಸ್ಥಾನದಲ್ಲಿ ನಿಲ್ಲಬಲ್ಲವರು
ಮೆರವಣಿಗೆಯನ್ನು ಮುನ್ನಡೆಸಬಲ್ಲವರು ಯಾರಾದರೂ?

ಮಕ್ಕಳೆ ನನಗೆ ಕೇಳುತ್ತಿದೆ ನಿಮ್ಮ ಮಾತು. ನೀವು ಹೇಳಿದ್ದು ನನಗೆ ಕೇಳುತ್ತಿದೆ.
ಹೌದು, ಮಕ್ಕಳೇ ನೀವೇ ಅವನ ಮೆರವಣಿಗೆಯನ್ನು ಮುನ್ನಡೆಸುತ್ತೀರಿ
ನೀವು ಡ್ರಮ್ ಮೇಜರ್ ನಿಗೆ ಪ್ರಿಯವಾದ ಭಿತ್ತಿಬಾವುಟಗಳನ್ನು ಒಯ್ಯುತ್ತೀರಿ
ಯಾವುದೇ ಭಯವಿಲ್ಲದೆ ಪೂರ್ಣ ಸ್ವಾತಂತ್ರ್ಯಕ್ಕೆ ತುಡಿವ ಮೆರವಣಿಗೆಯಲ್ಲಿ.

ನಮ್ಮ ಆತ್ಮಬಲವೀಗ ಇಮ್ಮಡಿ ಮುಮ್ಮಡಿ ನಾಲ್ಮಡಿಸಿದೆ, ನಮ್ಮ ದುಃಖಗಳು ಕಡಿಮೆಯಾಗುತ್ತವೆ.
ಮಕ್ಕಳೇ ನೀವು ನಮ್ಮನ್ನು ಮುನ್ನಡೆಸುತ್ತೀರಿ, ಡಾ. ಕಿಂಗ್ ನಿಮ್ಮ ಪಕ್ಕದಲ್ಲಿ.
ಸ್ವಾತಂತ್ರ್ಯದ ಮಕ್ಕಳೆ ನೀವು ಅವನ ಸ್ಥಾನದಲ್ಲಿ ನಿಲ್ಲುವಿರಿ. ಸ್ವಾತಂತ್ರ್ಯದ ಮಕ್ಕಳೇ ನೀವು ಮೆರವಣಿಗೆಯನ್ನು ಮುನ್ನಡೆಸುವಿರಿ.

ಮಕ್ಕಳೇ ಅವನ ದೂರದ ಡ್ರಮ್‌ ಬಡಿತಕ್ಕೆ ದೃಢವಾದ ಹೆಜ್ಜೆ ಹಾಕಿ.
ಮುನ್ನಡೆಯಿರಿ ಅವನೆದೆ ಬಡಿತವ ನಿಮ್ಮೆದೆಯಲ್ಲಿ ಜೀವಂತವಾಗಿರಿಸಿ.
ಈ ಶಾಂತಿ ಸ್ವಾತಂತ್ರ್ಯಗಳನು ನೀವು ಅಂತಿಮವಾಗಿ ಗೆದ್ದಾಗ
ಮಾರ್ಟಿನ್ ಲೂಥರ್ ಕಿಂಗ್ ನ ನಿಂತ ಕೆಲಸವು ಮುಗಿಯುತ್ತದೆ.

*******

ಮಾರ್ಗರೆಟ್ ಬರೋಸ್ ಕಲಾವಿದೆ, ಶಿಕ್ಷಣತಜ್ಞೆ ಮತ್ತು ಸಂಸ್ಥೆಗಳನ್ನು ಕಟ್ಟುವವರಾಗಿ ಗುರುತಿಸಿಕೊಂಡಿದ್ದಾರೆ. ಅವರು ಚಿಕಾಗೋದಲ್ಲಿ ತಮ್ಮ ಜೀವನದ ಬಹುಪಾಲು ಸಮಯ ವಾಸಿಸಿದ್ದರು; ಕೆಲಸ ಮಾಡುತ್ತಿದ್ದರು. ಬರೋಸ್ ಆಫ್ರಿಕನ್ ಅಮೇರಿಕನ್ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲೆ ಜಾಗತಿಕ ಮಟ್ಟದ ಪ್ರಭಾವವನ್ನು ಬೀರಿದರು. ಸೌತ್ ಸೈಡ್ ಕಮ್ಯುನಿಟಿ ಆರ್ಟ್ ಸೆಂಟರ್ ಸಂಸ್ಥೆಯು ಸಂಸ್ಥಾಪನೆ ಮಾಡಿದರು. ಅದು ಈಗ ಗ್ಯಾಲರಿಯಾಗಿ, ಮತ್ತು ಚಿಕಾಗೋದ ದಕ್ಷಿಣ ಭಾಗದ ವಿದ್ಯಾರ್ಥಿಗಳು ಮತ್ತು ಡುಸೇಬಲ್ ಮ್ಯೂಸಿಯಂ ಆಫ್ ಆಫ್ರಿಕನ್ ಅಮೇರಿಕನ್ ಹಿಸ್ಟರಿ ಕಲಾವಿದರಿಗೆ ಕಾರ್ಯಾಗಾರವಾಗಿ ಕಾರ್ಯನಿರ್ವಹಿಸುತ್ತಿದೆ.

ಆಫ್ರಿಕನ್-ಅಮೇರಿಕನ್ ಪಾದ್ರಿ ಮತ್ತು ನಾಗರಿಕ ಹಕ್ಕುಗಳ ಮುಖಂಡ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮೇಲೆ ಏಪ್ರಿಲ್ ೪,೧೯೬೮ ರಂದು ಸಂಜೆ ೬:೦೧ಕ್ಕೆ ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿರುವ ಲೋರೆನ್ ಮೋಟೆಲ್‌ನಲ್ಲಿ ಮಾರಣಾಂತಿಕವಾಗಿ ಗುಂಡು ಹಾರಿಸಲಾಯಿತು. ಅವರನ್ನು ಸೇಂಟ್ ಜೋಸೆಫ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಂಜೆ ೭:೦೫ ಕ್ಕೆ ನಿಧನರಾದರು. ಅವರು ನಾಗರಿಕ ಹಕ್ಕುಗಳ ಚಳವಳಿಯ ಪ್ರಮುಖ ನಾಯಕರಾಗಿದ್ದರು ಹಾಗೂ ನೊಬೆಲ್ ಶಾಂತಿ  ಪ್ರಶಸ್ತಿ ಪುರಸ್ಕೃತರಾಗಿದ್ದರು. ಗಾಂಧಿಯವರ ಪ್ರಭಾವದಿಂದ ಅವರು ಅಹಿಂಸೆ ಮತ್ತು ಕಾನೂನು ಅಸಹಕಾರದ ಚಳವಳಿಗೆ ಹೆಸರುವಾಸಿಯಾಗಿದ್ದರು.

ಪರಾರಿಯಾಗಿದ್ದ ಕೊಲೆಗಾರ ಜೇಮ್ಸ್ ಅರ್ಲ್ ರೇ ನನ್ನು ಜೂನ್ ೮, ೧೯೬೮ ರಂದು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. ಕೊಲೆ ಅಪರಾಧದ ಆರೋಪದಲ್ಲಿ ಮಾರ್ಚ್ ೧೦, ೧೯೬೯ ರಂದು, ಅವನು ತಪ್ಪೊಪ್ಪಿಕೊಂಡ. ಟೆನ್ನೆಸ್ಸೀ ಸ್ಟೇಟ್ ಸೆರೆಮನೆಯಲ್ಲಿ ೯೯ ವರ್ಷಗಳ ಸೆರೆಯ ಶಿಕ್ಷೆ ವಿಧಿಸಲಾಯಿತು. ರೇ ೧೯೯೮ ರಲ್ಲಿ ಜೈಲಿನಲ್ಲಿ ನಿಧನಹೊಂದಿದ.