ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಸಿ ಬಾಯಾರಿಕೆ..

ಹಸಿ ಬಾಯಾರಿಕೆ ಎಲ್ಲ ತನಗಳನ್ನೂ ಬಿಟ್ಟಿರಲಾರದ ತುಡಿತ.. ಕೆಲವು ಬೇಕುಗಳ ತವಕ ಕೂಡ... ಇನ್ನಷ್ಟು ಅರ್ಥಗಳನ್ನು ಹುದುಗಿಸಿಕೊಂಡ ಶಶಿ ತರೀಕೆರೆಯವರ ಸಾಲುಗಳು ಮತ್ತೆ ಬಾಯಾರಿಕೆಯನ್ನು ಮೂಡಿಸುವಲ್ಲಿ ಸಫಲವಾಗುತ್ತದೆ.

ನೀನೀಗ ಟಾಕೀಸು ಕಡೆಗಣಿಸಿ
ಬಿಸಿಲಿಗೆ ಬೆಚ್ಚಿದ ನದಿಯ
ನೀರು ಕುಡಿಯದೆ
ದಣಪೆಯನ್ನು ದಾಟಿ
ಊರ ತೊರೆದು ಹೋಗುತ್ತಿದ್ದಿಯ

ನೀ ಬೇರೆ ಊರು ಸೇರುವ ಮುನ್ನ
ನಿನ್ನ ಬಾಯಾರಿಕೆ
ಇನ್ಯಾವುದೋ ನದಿಯ ಸೆಳೆತಕ್ಕೆ ಸಿಕ್ಕು
ಇನ್ನೆಲ್ಲೋ ನಿನಗಾಗಿ ಜನಿಸುವುದು
ಒಂದು ಬಿಕ್ಕಳಿಕೆಯಾಗಿ, ಅಥವಾ
ಉಪ್ಪು ಬೆರೆಸಿಟ್ಟ ಒಣ ಮೀನಾಗಿ

ಮತ್ತೆ ಹಿಂದಿರುಗಿ ನೋಡು
ನದಿ ನಿನ್ನನೇ ತುಂಬಿ ಕರೆಯುತಿದೆ
ಟಾಕೀಸಿನ ಹೊಸ ಪೋಸ್ಟರ್
ನಿನ್ನ ಗಮನಕ್ಕೆ ಕಾಯುತಿದೆ
ಒಮ್ಮೆ ಆದರೂ ಕಣ್ಣು ಹಾಯಿಸಿ ಹೋಗು

ನದಿಯ ಆಳಕ್ಕೆ ಬಾಯಾರಿಕೆ ಇಲ್ಲಿಯೇ
ಬಿಟ್ಟು ಹೋಗು
ಬಸ್ಸಿನಲ್ಲಿ ಹೀಗೆ ನಿದ್ದೆ ಹೋದಾಗ
ನಿನ್ನ ತುಟಿ ಕಂಪಿಸಿ
ಕೊರಳು ಉಬ್ಬುವಾಗ ಈ ಊರು
ಆತಂಕದಲ್ಲಿ ಅತ್ತಿಂದಿತ್ತ ಹೊಯ್ದಾಡುತ್ತದೆ
ಥೇಟು ಆಯಿ ನಿನ್ನ ಕಳೆದುಕೊಂಡಂತೆ

ನಿನ್ನ ಇಡೀ ಲಗೇಜಿನ ನಿಗಾ
ಬೇರೊಂದು ಊರು ವಹಿಸಲಿ
ಈ ದಟ್ಟ ದಣಪೆ
ಹಾಲಿನ ಜಿಡ್ಡು ಪಾತ್ರೆಯಂತಹ ನಿನ್ನ ಮೈ
ಬೆಚ್ಚಗಿಡುತ್ತದೆ ವಾಪಾಸು ಬಾ
ಎಲ್ಲ ಒಮ್ಮೆ ನೋಡಿ ಹೋಗು

ನಿನ್ನ ಹಸಿ ಬಾಯಾರಿಕೆ
ಈ ನದಿಯಲ್ಲಿಯೇ ಬಿಟ್ಟು ಹೋಗು