ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೂರ್ಣಿಮಾ ಸುರೇಶ್
ಇತ್ತೀಚಿನ ಬರಹಗಳು: ಪೂರ್ಣಿಮಾ ಸುರೇಶ್ (ಎಲ್ಲವನ್ನು ಓದಿ)

ಹೊಸಭಾವ ಧರಿಸಲು
ಕಾಪಿಟ್ಟ ಪದಗಳು
ಧ್ಯಾನಿಸುತ್ತಿವೆ.

ಜೀವರಸದ ಒಸರು
ಬಾಲೆ ಹೆಣ್ಣಾದ
ಉಪಚಾರ

ಒಳಮನೆಗೆ ಸಿರಿ
ತರಬೇಕು
ತೆನೆ ಹಸಿರಿನಾಚೆ ಇಣುಕಬೇಕು

ತಡಪೆಯಲ್ಲಿ ಹಾಕಿ
ಹೊಸಿಲು ತೊಳೆದು
ತೋರಣ ಕಟ್ಟಿ
ಕುಂಕುಮ ಹಳದಿ ಸೇಡಿ
ಮಣ್ಣಿನ ಚಿತ್ತಾರ ಬಿಡಿಸಿ
ಕರೆತರಬೇಕು
ಒಳಕೋಣೆಯ ಸಿಂಗರಿಸಿ

ತಣ್ಣಗೆ ನೆನೆಸಿ
ಮೆದು ಅಕ್ಕಿಯನು
ನೋಯದಂತೆ ಮೆತ್ತಗೆ
ಬಿಡಿಸಿ ಕದಿರ ಸವಿ
ಹೊರ ಕರೆಯಬೇಕು

ಹೊಸವರ್ಷದ ತೆನೆ
ಭತ್ತ ಪೊರೆ ಕಳಚಿ
ಗಂಜಿ ಕುದಿದುಕ್ಕಿ
ನೈವೇದ್ಯ ಹಾಲು ಬಾಯಿ
ಪುಳಕಕ್ಕೆ ಶತನಾಮಾವಳಿ

ಮೂಲದಲ್ಲಿ
ಕಣ್ಣು ಮಣ್ಣು ಹಸಿಯಾದದ್ದು
ಬೆದೆ ಬಂದದ್ದು
ಬಿತ್ತಿದ್ದು,ನೋವುಂಡದ್ದು,
ಗೊಬ್ಬರ, ವಾಸನೆ
ಬಿಡಿ

ಈಗ ಸಂಭ್ರಮಕೆ
ಒಲೆಯೊಳಗೆ
ಬೆಂಕಿ
ಧಗಿಸುತ್ತಲೇ ಇದೆ
ಎದುರಿನ ಆಕೆಯೊಳಗೆ
ಪ್ರತಿಫಲನಗೊಂಡು
ನವ ವರ್ಷದ ಓಲೆಯಾಗಿ
ಹಾಲು ಸುರಿಸುವ ಅಕ್ಕಿ
ಪಾಕಗೊಳ್ಳುವ,ಬೇಯುವ,ಅರಳುವ
ರೂಪಾಂತರದ ಪ್ರಕ್ರಿಯೆ
ಕರೆಯುತ್ತಿದೆ!

ಬಾ! ಬಾಯಿತೆರೆ
ತಿನ್ನು ಹೊಸ ಹಾಲು ಬಾಯಿ